PSL vs IPL: ಪಿಎಸ್​ಎಲ್​ನಲ್ಲಿ ಐಪಿಎಲ್​ಗಿಂತಲೂ ಅಧಿಕ ಮೊತ್ತದ ಬಹುಮಾನ; ಶಾಕ್ ಆದ ಫ್ಯಾನ್ಸ್..!

PSL vs IPL: ಒಂದೆಡೆ ಭಾರತದಲ್ಲಿ ಐಪಿಎಲ್ ನಡೆಯುತ್ತದ್ದರೆ, ಪಾಕಿಸ್ತಾನದಲ್ಲಿ ಪಿಎಸ್ಎಲ್ ನಡೆಯುತ್ತದೆ. ಪಿಎಸ್ಎಲ್ ನ ಪಂದ್ಯಶ್ರೇಷ್ಠ ಬಹುಮಾನ ಐಪಿಎಲ್ ಗಿಂತ ಹೆಚ್ಚಿದೆ ಎಂಬ ಸುದ್ದಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಆದರೂ, ಒಟ್ಟಾರೆ ಬಹುಮಾನ ಹಣ ಮತ್ತು ಜನಪ್ರಿಯತೆಯ ವಿಷಯದಲ್ಲಿ ಐಪಿಎಲ್ ಪಿಎಸ್ಎಲ್ ಗಿಂತ ಉತ್ತಮವಾಗಿದೆ.

PSL vs IPL: ಪಿಎಸ್​ಎಲ್​ನಲ್ಲಿ ಐಪಿಎಲ್​ಗಿಂತಲೂ ಅಧಿಕ ಮೊತ್ತದ ಬಹುಮಾನ; ಶಾಕ್ ಆದ ಫ್ಯಾನ್ಸ್..!
IPL vs PSL

Updated on: Apr 16, 2025 | 9:17 PM

ಒಂದೆಡೆ, ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತಿದ್ದರೆ, ಮತ್ತೊಂದೆಡೆ, ಪಾಕಿಸ್ತಾನ್ ಸೂಪರ್ ಲೀಗ್​ ಕೂಡ ಪಾಕಿಸ್ತಾನದಲ್ಲಿ ಪ್ರಾರಂಭವಾಗಿದೆ. ಇದೇ ಮೊದಲ ಬಾರಿಗೆ ಐಪಿಎಲ್​ಗೆ ಟಕ್ಕರ್ ಕೊಡುವ ಸಲುವಾಗಿ ಪಿಎಸ್​ಎಲ್​ ಅನ್ನು ಐಪಿಎಲ್ ನಡೆಯುತ್ತಿರುವಾಗಲೇ ಶುರು ಮಾಡಲಾಗಿದೆ. ಆದಾಗ್ಯೂ ಸ್ಟಾರ್ ಕ್ರಿಕೆಟಿಗರ ಅಲಭ್ಯತೆ ಹಾಗೂ ಪ್ರೇಕ್ಷಕರ ಕಡಿಮೆ ಹಾಜರಾತಿ ಪಿಎಸ್​ಎಲ್​ನ ಜನಪ್ರಿಯತೆಯನ್ನು ಇನ್ನಷ್ಟು ಕುಗ್ಗಿಸಿದೆ. ಕೆಲವು ದಿನಗಳ ಹಿಂದಷ್ಟೇ ಟೂರ್ನಿಯಲ್ಲಿ ಶತಕ ಸಿಡಿಸಿದ್ದ ಆಟಗಾರನಿಗೆ ಹೇರ್ ಡ್ರೈಯರ್ ಅನ್ನು ಉಡುಗೊರೆಯಾಗಿ ನೀಡಿ ಸೋಶಿಯಲ್ ಮೀಡಿಯಾದಲ್ಲಿ ನಗೆಪಾಟಲಿಗೀಡಾಗಿದ್ದ ಪಿಎಸ್​ಎಲ್ ಇದೀಗ ಐಪಿಎಲ್​ಗಿಂತಲೂ ಅತ್ಯಧಿಕ ಮೊತ್ತದ ಬಹುಮಾನ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದೆ.

ವಾಸ್ತವವಾಗಿ ಐಪಿಎಲ್ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಆಗಿದ್ದು, ಇಲ್ಲಿ ಆಟಗಾರರ ಮೇಲೆ ಸಾಕಷ್ಟು ಹಣದ ಸುರಿಮಳೆಯಾಗುತ್ತದೆ. ಮತ್ತೊಂದೆಡೆ, ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಟಗಾರರು ಐಪಿಎಲ್‌ಗಿಂತ ಕಡಿಮೆ ಹಣವನ್ನು ಪಡೆಯುತ್ತಾರೆ. ಆದರೀಗ ಈ ಪಾಕಿಸ್ತಾನಿ ಲೀಗ್‌ನಲ್ಲಿ ಆಡುತ್ತಿರುವ ಆಟಗಾರರಿಗೆ ಐಪಿಎಲ್‌ಗಿಂತಲೂ ಹೆಚ್ಚಿನ ಹಣವನ್ನು ನೀಡಲಾಗುತ್ತಿದೆ. ಇದೀಗ ಇದೇ ವಿಚಾರವನ್ನು ಮುಂದಿಟ್ಟು ಪಾಕಿಸ್ತಾನಿ ಅಭಿಮಾನಿಗಳು ಐಪಿಎಲ್ ಅನ್ನು ಲೇವಡಿ ಮಾಡಿದ್ದಾರೆ.

ಐಪಿಎಲ್​ಗಿಂತಲೂ ಅಧಿಕ ಮೊತ್ತದ ಬಹುಮಾನ

ವಾಸ್ತವವಾಗಿ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವ ಆಟಗಾರನಿಗೆ ಬಹುಮಾನದ ರೂಪದಲ್ಲಿ ನೀಡಲಾಗುತ್ತಿರುವ ಮೊತ್ತ ಐಪಿಎಲ್‌ಗಿಂತಲೂ ಹೆಚ್ಚಾಗಿದೆ. ಐಪಿಎಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರನಿಗೆ 1 ಲಕ್ಷ ರೂ. ಪ್ರಶಸ್ತಿ ಸಿಕ್ಕರೆ, ಪಾಕಿಸ್ತಾನದಲ್ಲಿ ಈ ಮೊತ್ತ 1.5 ಲಕ್ಷ ರೂ.ಗಳಿಗಿಂತ ಹೆಚ್ಚಿದೆ. ಇದೇ ಕಾರಣಕ್ಕೆ ಪಾಕಿಸ್ತಾನಿ ಅಭಿಮಾನಿಗಳು ಟ್ವೀಟ್ ಮಾಡುವ ಮೂಲಕ ಐಪಿಎಲ್ ಅನ್ನು ಟ್ರೋಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಐಪಿಎಲ್ ಮುಂದೆ ಪಿಎಸ್‌ಎಲ್‌ ಏನೇನೂ ಅಲ್ಲ

ಪಾಕಿಸ್ತಾನಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಏನೇ ಹೇಳಿಕೆ ನೀಡುತ್ತಿದ್ದರೂ, ಪಿಎಸ್ಎಲ್, ಐಪಿಎಲ್ ಮುಂದೆ ಏನೇನೂ ಅಲ್ಲ. ಐಪಿಎಲ್‌ನ ಬಹುಮಾನದ ಮೊತ್ತದ ಬಗ್ಗೆ ಹೇಳುವುದಾದರೆ, ಚಾಂಪಿಯನ್ ತಂಡಕ್ಕೆ 20 ಕೋಟಿ ರೂ., ರನ್ನರ್ ಅಪ್ ತಂಡಕ್ಕೆ 13 ಕೋಟಿ ರೂ. ಸಿಗಲಿದೆ. ಮತ್ತೊಂದೆಡೆ, ಪಿಎಸ್ಎಲ್ ಗೆದ್ದ ತಂಡಕ್ಕೆ ಕೇವಲ 4.2 ಕೋಟಿ ರೂ. ಸಿಗಲಿದೆ. ಈ ಮೊತ್ತ ಐಪಿಎಲ್‌ನ ಬಹುಮಾನದ ಹಣಕ್ಕಿಂತ ಐದು ಪಟ್ಟು ಕಡಿಮೆ. ಪಾಕಿಸ್ತಾನ ಸೂಪರ್ ಲೀಗ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ನಡುವೆ ಯಾವುದೇ ಸ್ಪರ್ಧೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ