ಸೌತ್ ಆಫ್ರಿಕಾ ವಿರುದ್ಧ ಐರ್ಲೆಂಡ್ ಐತಿಹಾಸಿಕ ಜಯ ಸಾಧಿಸಿದೆ. ಯುಎಇನ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಐರ್ಲೆಂಡ್ ಪಡೆಯು ಭರ್ಜರಿ ಗೆಲುವು ದಾಖಲಿಸಿದೆ. ವಿಶೇಷ ಎಂದರೆ ಇದು ಏಕದಿನ ಕ್ರಿಕೆಟ್‌ನಲ್ಲಿ ಸೌತ್ ಆಫ್ರಿಕಾ ವಿರುದ್ಧದ ಮೊದಲ ಜಯ. ಇದಕ್ಕೂ ಮುನ್ನ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಐರ್ಲೆಂಡ್ ತಂಡವು ಸೌತ್ ಆಫ್ರಿಕಾ ತಂಡಕ್ಕೆ ಸೋಲುಣಿಸಿತ್ತು. ಇದೀಗ ಏಕದಿನ ಪಂದ್ಯದಲ್ಲೂ ಗೆಲುವು ದಾಖಲಿಸುವಲ್ಲಿ ಐರಿಷ್ ಆಟಗಾರರು ಯಶಸ್ವಿಯಾಗಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ಪರ ನಾಯಕ ಪೌಲ್ ಸ್ಟಿರ್ಲಿಂಗ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿದ್ದರು. ಆರಂಭಿಕನಾಗಿ ಕಣಕ್ಕಿಳಿದ ಸ್ಟಿರ್ಲಿಂಗ್ 92 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 8 ಫೋರ್ ಗಳೊಂದಿಗೆ 88 ರನ್ ಬಾರಿಸಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಯುವ ದಾಂಡಿಗ ಹ್ಯಾರಿ ಟೆಕ್ಟರ್ 48 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 4 ಫೋರ್ ಒಳಗೊಂಡಂತೆ 60 ರನ್ ಸಿಡಿಸಿದರು. ಈ ಅರ್ಧಶತಕಗಳ ನೆರವಿನಿಂದ ಐರ್ಲೆಂಡ್ ತಂಡವು 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 284 ರನ್ ಕಲೆಹಾಕಿತು.
ಸೌತ್ ಆಫ್ರಿಕಾ ಪರ ಲಿಝಾಡ್ ವಿಲಿಯಮ್ಸ್ 10 ಓವರ್‌ಗಳಲ್ಲಿ 56 ರನ್ ನೀಡಿ 4 ವಿಕೆಟ್ ಪಡೆದರೆ, ಒಟ್ನಿಲ್ ಬಾರ್ಟ್ ಮ್ಯಾನ್ 8 ಓವರ್‌ಗಳಲ್ಲಿ 32 ರನ್ ನೀಡಿ 2 ವಿಕೆಟ್ ಕಬಳಿಸಿದರು.
50 ಓವರ್‌ಗಳಲ್ಲಿ 290 ರನ್ ಗಳ ಗುರಿ ಪಡೆದ ಸೌತ್ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆಯಲಿಲ್ಲ. ಕೇವಲ 10 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂವರು ಬ್ಯಾಟರ್ ಗಳು ಪೆವಿಲಿಯನ್ ಹಾದಿ ಹಿಡಿದಿದ್ದರು.
ಈ ಆರಂಭಿಕ ಆಘಾತದಿಂದ ಪಾರಾಗುವ ಮುನ್ನ ಮತ್ತೆರಡು ವಿಕೆಟ್ ಕಳೆದುಕೊಂಡಿತು. ಪರಿಣಾಮ 79 ರನ್ ಗಳಿಗೆ ಸೌತ್ ಆಫ್ರಿಕಾದ ಐವರು ಬ್ಯಾಟ್ಸ್‌ಮನ್ ಔಟಾದರು.
ಈ ಹಂತದಲ್ಲಿ ಕಣಕ್ಕಿಳಿದ ಜೇಸನ್ ಸ್ಮಿತ್ 93 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 9 ಫೋರ್ ಗಳೊಂದಿಗೆ 91 ರನ್ ಬಾರಿಸಿದರು. ಈ ಮೂಲಕ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು.
ಸ್ಮಿತ್ (91) ವಿಕೆಟ್ ಸಿಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಐರ್ಲೆಂಡ್ ಬೌಲರ್ ಗಳು ಸೌತ್ ಆಫ್ರಿಕಾ ತಂಡವನ್ನು 46.1 ಓವರ್‌ಗಳಲ್ಲಿ 215 ರನ್ ಗಳಿಗೆ ಆಲೌಟ್ ಮಾಡಿದರು. ಐರ್ಲೆಂಡ್ ಪರ ಗ್ರಹಾಂ ಹ್ಯೂಮ್ ಹಾಗೂ ಕ್ರೇಗ್ ಯಂಗ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು.
ಈ ಮೂಲಕ ಐರ್ಲೆಂಡ್ ತಂಡವು 69 ರನ್ ಗಳ ಐತಿಹಾಸಿಕ ಗೆಲುವು ದಾಖಲಿಸಿದೆ. ಅಲ್ಲದೆ ಟಿ20 ಪಂದ್ಯದ ಗೆಲುವಿನ ಬೆನ್ನಲ್ಲೇ ಏಕದಿನ ಪಂದ್ಯದಲ್ಲೂ ಸೌತ್ ಆಫ್ರಿಕಾ ತಂಡಕ್ಕೆ ಸೋಲುಣಿಸಿ ಐರ್ಲೆಂಡ್ ಪಡೆಯುವ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಐರ್ಲೆಂಡ್ ಪ್ಲೇಯಿಂಗ್ 11: ಆಂಡ್ರ್ಯೂ ಬಾಲ್ಬಿರ್ನಿ , ಪೌಲ್ ಸ್ಟಿರ್ಲಿಂಗ್ (ನಾಯಕ) , ಕರ್ಟಿಸ್ ಕ್ಯಾಂಫರ್ , ಹ್ಯಾರಿ ಟೆಕ್ಟರ್ , ಲೋರ್ಕನ್ ಟಕರ್ (ವಿಕೆಟ್ ಕೀಪರ್) , ಜಾರ್ಜ್ ಡಾಕ್ರೆಲ್ , ಮಾರ್ಕ್ ಅಡೇರ್ , ಮ್ಯಾಥ್ಯೂ ಹಂಫ್ರೀಸ್ , ಕ್ರೇಗ್ ಯಂಗ್ , ಗ್ರಹಾಂ ಹ್ಯೂಮ್ , ಫಿಯಾನ್ ಹ್ಯಾಂಡ್.
ಇದನ್ನೂ ಓದಿ: ಕೊನೆಗೂ ಕಪ್ ಗೆದ್ದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ..!
ಸೌತ್ ಆಫ್ರಿಕಾ ಪ್ಲೇಯಿಂಗ್ 11: ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್) , ರೀಝ ಹೆಂಡ್ರಿಕ್ಸ್ , ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ (ನಾಯಕ) , ಕೈಲ್ ವೆರೆನ್ನೆ , ಟ್ರಿಸ್ಟನ್ ಸ್ಟಬ್ಸ್ , ಜೇಸನ್ ಸ್ಮಿತ್ , ಆಂಡಿಲ್ ಫೆಹ್ಲುಕ್ವಾಯೊ , ಜಾರ್ನ್ ಫೋರ್ಚುಯಿನ್ , ಲಿಝಾಡ್ ವಿಲಿಯಮ್ಸ್ , ಲುಂಗಿ ಎನ್ಗಿಡಿ, ಒಟ್ನಿಲ್ ಬಾರ್ಟ್ಮ್ಯಾನ್