ಐಸಿಸಿ ಟಿ20 ವಿಶ್ವಕಪ್ನಲ್ಲಿ (T20 World Cup) ಭಾರತ ಕ್ರಿಕೆಟ್ ತಂಡ ತನ್ನ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ವಿರುದ್ಧ ರೋಚಕ ಗೆಲುವು ಸಾಧಿಸಿದ್ದು, ಈ ಜಯದ ಗುಂಗಿನಿಂದ ಅಭಿಮಾನಿಗಳು ಇನ್ನೂ ಹೊರ ಬಂದಿಲ್ಲ. ವಿರಾಟ್ ಕೊಹ್ಲಿಯ (Virat Kohli) ಅಮೋಘ ಆಟ ಇನ್ನೂ ಕಣ್ಣ ಮುಂದೆಯೇ ಇದ್ದು ಟ್ವಿಟರ್ನಲ್ಲೂ ಟ್ರೆಂಡಿಂಗ್ನಲ್ಲಿದ್ದಾರೆ. ಕೊನೆಯ ಎಸೆತದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಕೇವಲ ಫ್ಯಾನ್ಸ್ ಮಾತ್ರವಲ್ಲ ಸ್ಟೇಡಿಯಂನಲ್ಲಿದ್ದ ಭಾರತದ ಮಾಜಿ ಆಟಗಾರರು, ಕಾಮೆಂಟೇಟರ್ಸ್ ಕೂಡ ಸಂಭ್ರಮಿಸಿದರು. ವಿರಾಟ್ ಆಟವನ್ನು ಹಾಡಿಹೊಗಳಿದರು. ಅದರಲ್ಲೂ ಭಾರತದ ಮಾಜಿ ಆಟಗಾರ ಹಾಗೂ ಕಾಮೆಂಟೇಟರ್ಸ್ ಇರ್ಫಾನ್ ಪಠಾಣ್ (Irfan Pathan) ಏನು ಮಾಡಿದರು ನೋಡಿ.
ಭಾರತ ಗೆಲ್ಲುತ್ತಿದ್ದಂತೆ ಸಹ ಆಟಗಾರರು ಮೈದಾನಕ್ಕೆ ಬಂದು ಕೊಹ್ಲಿಯನ್ನು ಅಪ್ಪಿಕೊಂಡರು. ಅತ್ತ ಇರ್ಫಾನ್ ಪಠಾಣ್ ಅವರು ಕೊಹ್ಲಿಗೆ ಶುಭಾಶಯ ತಿಳಿಸಬೇಕೆಂದು ಕಾದುಕುಳಿತಿದಿದ್ದರು. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ಬಳಿಕ ಸ್ಟಾರ್ ಸ್ಫೋರ್ಟ್ಸ್ ಜೊತೆ ಮಾತನಾಡಲು ಕೊಹ್ಲಿ ಬೌಂಡರಿ ಲೈನ್ ಬಳಿ ಬಂದಾಗ ಪಠಾಣ್ ಅವರನ್ನು ತಬ್ಬಿಕೊಂಡು ಎತ್ತಿ ವಿಶೇಷವಾಗಿ ಸಂಭ್ರಮಿಸಿದರು. ಇದರ ವಿಡಿಯೋವನ್ನು ಪಠಾಣ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.
ಕೊಹ್ಲಿಯನ್ನು ಹೆಗಲ ಮೇಲೆ ಹೊತ್ತ ರೋಹಿತ್:
ವಿರಾಟ್ ಕೊಹ್ಲಿಯ ಈ ಇನ್ನಿಂಗ್ಸ್ ಕಂಡ ನಾಯಕ ರೋಹಿತ್ ಶರ್ಮಾ ಕೂಡ ಸಂತಸದ ಅಲೆಯಲ್ಲಿ ತೇಲಿದರು. ಅಶ್ವಿನ್ ಗೆಲುವಿನ ರನ್ ಬಾರಿಸಿದ ಬಳಿಕ ಮೈದಾನಕ್ಕೆ ಬಂದ ರೋಹಿತ್ ಅವರು ಕೊಹ್ಲಿಯನ್ನು ತಬ್ಬಿಕೊಂಡರು. ಇಷ್ಟಕ್ಕೆ ಸುಮ್ಮನಾಗದ ಹಿಟ್ಮ್ಯಾನ್, ಮಗುವಿನಂತೆ ಕೊಹ್ಲಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಮೈದಾನದಲ್ಲೇ ಕುಣಿಯಲಾರಂಭಿಸಿದರು. ರೋಹಿತ್ ಅವರ ಈ ಹರ್ಷ ಕಂಡು ಮೈದಾನದಲ್ಲಿ ನೆರೆದಿದ್ದ ಟೀಮ್ ಇಂಡಿಯಾದ ಅಭಿಮಾನಿಗಳೆಲ್ಲ ಹುಚ್ಚೆದು ಕುಣಿದರು.
ಐಸಿಸಿಯಿಂದ ವಿಶೇಷ ಗೌರವ:
ದಶಕದ ಶ್ರೇಷ್ಠ ಇನ್ನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿಗೆ ಐಸಿಸಿ ವಿಶೇಷ ಗೌರವ ಸೂಚಿಸಿದೆ. ಪಂದ್ಯದ ನಂತರ, ಕೊಹ್ಲಿಯ ಗ್ರಾಫಿಕ್ ಫೋಟೋವೊಂದನ್ನು ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿರುವ ಐಸಿಸಿ, “ದಿ ಕಿಂಗ್ ಈಸ್ ಬ್ಯಾಕ್” ಎಂಬ ಶೀರ್ಷಿಕೆಯೊಂದನ್ನು ನೀಡಿದೆ. ಐಸಿಸಿ ಪೋಸ್ಟ್ನಲ್ಲಿ ಇರುವ ವಿಶೇಷವೆಂದರೆ, ಈ ಗ್ರಾಫಿಕ್ ಫೋಟೋದಲ್ಲಿ ಕೊಹ್ಲಿ ಒಂದು ಕೋಟೆಯ ಮುಂದೆ ಸಿಂಹಾಸನದ ಮೇಲೆ ಕುಳಿತಿರುವುದಾಗಿ ಬಿಂಬಿಸಲಾಗಿದೆ. ಐಸಿಸಿ ಕೊಹ್ಲಿಗೆ ನೀಡಿರುವ ಗೌರವವನ್ನು ಕಂಡು ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಅಲ್ಲದೆ ಈ ಫೋಟೋ ಎಲ್ಲೆಡೆ ಸಾಕಷ್ಟು ವೈರಲ್ ಆಗುತ್ತಿದೆ.
ಭಾರತದ ಬ್ಯಾಟಿಂಗ್ ಬಳಗಕ್ಕೆ 160 ರನ್ಗಳ ಗುರಿ ಬೆನ್ನಟ್ಟಲು ಸಾಧ್ಯವಾಗದಷ್ಟು ದೊಡ್ಡ ಮೊತ್ತವೇನು ಆಗಿರಲಿಲ್ಲ. ಆದರೆ, ದೊಡ್ಡ ಮೈದಾನ ಆಗಿದ್ದರಿಂದ ಹಾಗೂ ಚೆಂಡು ಹೆಚ್ಚು ಸೀಮ್ ಮತ್ತು ಸ್ವಿಂಗ್ ಆಗಿದ್ದರಿಂದ ಪಂದ್ಯ ರೋಚಕತೆ ಪಡೆದುಕೊಂಡಿತು. ಆದರೂ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಶತಕದ ಜೊತೆಯಾಟವಾಡಿ ತಂಡಕ್ಕೆ ಗೆಲುವು ಸನಿಹ ಮಾಡಿದ್ದರು. ಅಂತಿಮ 6 ಎಸೆತದಲ್ಲಿ ಭಾರತಕ್ಕೆ ಗೆಲ್ಲಲು 16 ರನ್ಗಳು ಬೇಕಾಯಿತು. ಆದರೆ, ಮೊಹಮ್ಮದ್ ನವಾಝ್ ಮೊದಲ ಎಸೆತದಲ್ಲೇ ಹಾರ್ದಿಕ್ ಔಟಾದರು. ಕೊನೆಯ 2 ಎಸೆತಗಳಲ್ಲಿ 2 ರನ್ ಬೇಕಾಯಿತು. ಈ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಸ್ಟಂಪ್‌ಔಟ್ ಆದರು. ಒಂದು ಎಸೆತದಲ್ಲಿ 2 ರನ್ ಬೇಕಿದ್ದಾಗ ಕೊನೆಯ ಬಾಲ್ ವೈಡ್ ಆದರೆ, ನಂತರ ಎಸೆತದಲ್ಲಿ ಆರ್. ಅಶ್ವಿನ್ ವಿನ್ನಿಂಗ್ ಶಾಟ್ ಬಾರಿಸಿದ್ದು ಭಾರತ ಗೆಲ್ಲುವಂತೆ ಮಾಡಿತು.
Published On - 8:09 am, Tue, 25 October 22