ಟೀಮ್ ಇಂಡಿಯಾ ನಾಯಕತ್ವ ವಿವಾದಕ್ಕೆ ತೆರೆ ಬೀಳಲಿದೆ ಅಂದುಕೊಂಡಿದ್ದ ಬಿಸಿಸಿಐಗೆ ಇದೀಗ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ನೀಡಿರುವ ಹೇಳಿಕೆಗಳು ಮುಜುಗರ ಉಂಟು ಮಾಡಿದೆ. ಮೈದಾನದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ಕೊಹ್ಲಿ, ಇದೇ ಮೊದಲ ಬಾರಿಗೆ ಬಿಸಿಸಿಐ ನಡೆಯನ್ನು ಪ್ರಶ್ನಿಸುವಂತೆ ಸುದ್ದಿಗೋಷ್ಠಿಯನ್ನು ಎದುರಿಸಿದ್ದರು. ಅದರಲ್ಲೂ ವಿರಾಟ್ ಕೊಹ್ಲಿ ಅವರಿಂದ ಕೆಲ ಮಾತುಗಳನ್ನು ಬಹುಶಃ ಯಾರೂ ನಿರೀಕ್ಷಿಸಿರಲಿಲ್ಲ. ಏಕೆಂದರೆ ಕೆಲ ದಿನಗಳ ಹಿಂದೆಯಷ್ಟೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಟಿ20 ನಾಯಕತ್ವ ತ್ಯಜಿಸದಂತೆ ಬಿಸಿಸಿಐ ವಿರಾಟ್ ಕೊಹ್ಲಿ ಅವರಲ್ಲಿ ಮನವಿ ಮಾಡಿತ್ತು. ಅಷ್ಟೇ ಅಲ್ಲದೆ ನಾನು ಕೂಡ ಅವರೊಂದಿಗೆ ಈ ಚರ್ಚಿಸಿದ್ದೆ. ಇದಾಗ್ಯೂ ಅವರು ನಮ್ಮ ಮಾತು ಕೇಳಿರಲಿಲ್ಲ ಎಂದು ತಿಳಿಸಿದ್ದರು. ಅಷ್ಟೇ ಅಲ್ಲದೆ ಅವರು ಟಿ20 ನಾಯಕತ್ವ ತ್ಯಜಿಸಿದ ಪರಿಣಾಮ, ಆಯ್ಕೆದಾರರು ಏಕದಿನ ಹಾಗೂ ಟಿ20 ತಂಡಕ್ಕೆ ಒಬ್ಬನೇ ನಾಯಕನನ್ನು ಆಯ್ಕೆ ಮಾಡಿದೆ ಎಂದು ಹೇಳಿದ್ದರು.
ಆದರೆ ಸುದ್ದಿಗೋಷ್ಠಿಯಲ್ಲಿ ವಿರಾಟ್ ಹೇಳಿದ ಮಾತುಗಳು ತದ್ವಿರುದ್ಧವಾಗಿತ್ತು. ನಾನು ಟಿ20 ನಾಯಕತ್ವವನ್ನು ತ್ಯಜಿಸುವ ನಿರ್ಧಾರವನ್ನು ಬಿಸಿಸಿಐ ಸ್ವಾಗತಿಸಿತ್ತು. ಇದರ ಹೊರತಾಗಿ ಯಾರೂ ಕೂಡ ನಾಯಕತ್ವ ತ್ಯಜಿಸಬೇಡಿ ಎಂದು ಮನವಿ ಮಾಡಿರಲಿಲ್ಲ ಎಂದು ವಿರಾಟ್ ಕೊಹ್ಲಿ ಬಹಿರಂಗವಾಗಿಯೇ ತಿಳಿಸಿದ್ದರು. ಇದರೊಂದಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಬಿಸಿಸಿಐ ಹೇಳುತ್ತಿರುವುದು ಸುಳ್ಳಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು.
ಅಷ್ಟೇ ಅಲ್ಲದೆ ತಂಡದ ನಾಯಕತ್ವವನ್ನು ಬಿಡುವಾಗ ಅದನ್ನು ಅತ್ಯುತ್ತಮ ನಿರ್ಧಾರ ಎಂದು ಬಿಸಿಸಿಐ ತಿಳಿಸಿತ್ತು. ಈ ವೇಳೆ ನಾನು ಟೆಸ್ಟ್ ಮತ್ತು ಏಕದಿನ ನಾಯಕನಾಗಿ ಮುಂದುವರಿಯಲು ಬಯಸುತ್ತೇನೆ ಎಂದು ಸಹ ಹೇಳಿದ್ದೆ. ಇತ್ತ ಸೌರವ್ ಗಂಗೂಲಿ ಅವರು ಟಿ20 ತಂಡದ ನಾಯಕತ್ವದಿಂದ ಕೆಳಗಿಳಿದ ಪರಿಣಾಮ ಏಕದಿನ ತಂಡದ ನಾಯಕತ್ವ ಕೈತಪ್ಪಿದೆ ಎಂದಿದ್ದಾರೆ. ಆದರೆ ಇಲ್ಲಿ ಟಿ20 ತಂಡದ ನಾಯಕತ್ವ ತೊರೆಯುವ ಮುನ್ನವೇ ಕೊಹ್ಲಿ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕನಾಗಿ ಮುಂದುವರೆಯುವುದಾಗಿ ಬಿಸಿಸಿಐಗೆ ತಿಳಿಸಿದ್ದರು. ಇದಾಗ್ಯೂ ಈ ಸಂದರ್ಭದಲ್ಲಿ ಕೊಹ್ಲಿಗೆ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿದರೆ, ಏಕದಿನ ತಂಡದಿಂದ ನಾಯಕತ್ವ ಬಿಡಬೇಕಾಗುತ್ತೆ ಎಂಬುದನ್ನು ಬಿಸಿಸಿಐ ತಿಳಿಸಲಿಲ್ಲ ಎಂಬುದು ಕೊಹ್ಲಿಯ ಹೇಳಿಕೆಯಿಂದ ಬಹಿರಂಗವಾಗಿದೆ.
ಇನ್ನು ನಾಯಕತ್ವದಿಂದ ಕೆಳಗಿಸಿರುವ ವಿಚಾರವನ್ನು ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರಾದ ಚೇತನ್ ಶರ್ಮಾ ಅವರು ಕರೆ ಮಾಡಿ ತಿಳಿಸಿದ್ದರು. ಈ ವೇಳೆ ಐವರು ಆಯ್ಕೆಗಾರರು ನಿಮ್ಮನ್ನು ಏಕದಿನ ತಂಡದ ನಾಯಕರಾಗಿ ಮುಂದುವರೆಸಲು ಇಚ್ಛಿಸುತ್ತಿಲ್ಲ ಎಂದು ತಿಳಿಸಲಾಯಿತು. ಅದಕ್ಕೆ ನಾನು ‘ಸರಿ, ಪರವಾಗಿಲ್ಲ’ ಎಂದು ಹೇಳಿರುವುದಾಗಿ ಕೊಹ್ಲಿ ತಿಳಿಸಿದರು.
ವಿರಾಟ್ ಕೊಹ್ಲಿಯ ಈ ಸ್ಪಷ್ಟನೆಗಳು ಇದೀಗ ಬಿಸಿಸಿಐನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಕೊಹ್ಲಿಯ ಹೇಳಿಕೆಗಳನ್ನು ಬಿಸಿಸಿಐ ಅಧಿಕಾರಿಯೊಬ್ಬರು ತಳ್ಳಿಹಾಕಿದ್ದಾರೆ. ಅಷ್ಟೇ ಅಲ್ಲದೆ ಮಂಡಳಿಯು ಸೆಪ್ಟೆಂಬರ್‌ನಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಮಾತನಾಡಿದ್ದು, ನಾಯಕತ್ವದಿಂದ ಕೆಳಗಿಳಿಯದಂತೆ ಮನವಿ ಮಾಡಿದೆ ಎಂದು ತಿಳಿಸಿದ್ದಾರೆ.
ಇತ್ತ ವಿರಾಟ್ ಕೊಹ್ಲಿಯ ನೇರ ನುಡಿಯಿಂದಾಗಿ ಇದೀಗ ಬಿಸಿಸಿಐ ಮುಜುಗರಕ್ಕೆ ಒಳಗಾಗಿದೆ. ಅಷ್ಟೇ ಅಲ್ಲದೆ ಈ ಬಗ್ಗೆ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಕೂಡ ಇದೆ. ಇದರೊಂದಿಗೆ ವಿರಾಟ್ ಕೊಹ್ಲಿ ವರ್ಸಸ್ ಬಿಸಿಸಿಐ ಆಗಿರುವುದಂತು ಸ್ಪಷ್ಟ. ಅತ್ತ ಬಿಸಿಸಿಐ ನಡೆಯನ್ನು ಹಾಗೂ ಆಯ್ಕೆಗಾರರ ವಿಚಾರಗಳನ್ನು ಬಹಿರಂಗವಾಗಿಯೇ ಹೇಳಿರುವುದರಿಂದ ಕೊಹ್ಲಿಗೆ ಬಿಸಿಸಿಐ ಬಗ್ಗೆ ಯಾವುದೇ ಭಯ ಇಲ್ಲದಿರುವುದು ಕೂಡ ಸ್ಪಷ್ಟವಾಗಿದೆ.
ಅಂದರೆ ಇಲ್ಲಿ ಎಲ್ಲದಕ್ಕೂ ವಿರಾಟ್ ಕೊಹ್ಲಿ ತಯಾರಾಗಿಯೇ ಕೆಲ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ. ಇದೀಗ ವಿಶ್ವ ಶ್ರೀಮಂತ ಕ್ರಿಕೆಟ್ ಮಂಡಳಿ ವಿರುದ್ದ ವಿರಾಟ್ ಕೊಹ್ಲಿ ಸೆಟೆದು ನಿಂತಿರುವುದು ಕೂಡ ಬಿಸಿಸಿಐಗೆ ಪ್ರತಿಷ್ಠೆಯಾಗುವ ಸಾಧ್ಯತೆಯಿದೆ. ಇಡೀ ವಿಶ್ವದ ಮುಂದೆ ಬಿಸಿಸಿಐ ಹಾಗೂ ಅಧ್ಯಕ್ಷ ಸೌರವ್ ಗಂಗೂಲಿ ಅವರ ಹೇಳಿಕೆಗಳನ್ನು ಪ್ರಶ್ನಿಸುವಂತೆ ಸ್ಪಷ್ಟನೆ ನೀಡಿರುವ ವಿರಾಟ್ ಕೊಹ್ಲಿಯ ನಡೆಯನ್ನು ನೋಡಿದರೆ ಅವರು ತಮ್ಮ ಟೆಸ್ಟ್ ನಾಯಕತ್ವದಿಂದಲೂ ಕೆಳಗಿಳಿಯಲು ಸಿದ್ಧರಾಗಿರುವಂತೆ ತೋರುತ್ತದೆ. ಅಂದರೆ ಬಿಸಿಸಿಐ ತನ್ನನ್ನು ಏಕಾಏಕಿ ಏಕದಿನ ತಂಡದ ನಾಯಕತ್ವದಿಂದ ಕೆಳಗಿಸಿತು, ಆ ಬಗ್ಗೆ ನನ್ನೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ ಎಂಬುದನ್ನು ಕೊಹ್ಲಿ ಇಡೀ ವಿಶ್ವಕ್ಕೆ ಸಾರಿದ್ದಾರೆ. ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಈ ನಡೆಯು ಇದೀಗ ಟೆಸ್ಟ್ ತಂಡದ ನಾಯಕತ್ವವನ್ನು ಕಸಿದುಕೊಳ್ಳುವಂತೆ ಮಾಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…
ಇದನ್ನೂ ಓದಿ: Sourav Ganguly: ವಿರಾಟ್ ಕೊಹ್ಲಿ ಇಲ್ಲದಿದ್ದಾಗಲೂ ಟೀಮ್ ಇಂಡಿಯಾ ಕಪ್ ಗೆದ್ದಿದೆ!
ಇದನ್ನೂ ಓದಿ: IPL 2022: ಪಂಜಾಬ್ ಕಿಂಗ್ಸ್ಗೆ ಕನ್ನಡಿಗನೇ ಕಿಂಗ್ ಆಗುವ ಸಾಧ್ಯತೆ..!