Ravindra Jadeja: ಸ್ವಲ್ಪ ಬೇಸರವಾಗಿತ್ತು… ಏನು ಮಾಡೋದು, ಇದೆಲ್ಲಾ ಸಹಜ..!

Ravindra Jadeja: ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಪರ 200 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 149 ಇನಿಂಗ್ಸ್ ಆಡಿರುವ ಅವರು 2354 ರನ್ ಕಲೆಹಾಕಿದ್ದಾರೆ. ಇದರ ನಡುವೆ 5 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಅಷ್ಟೇ ಅಲ್ಲದೆ 3 ಬಾರಿ ಸಿಎಸ್​ಕೆ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಜಡೇಜಾ ಪ್ರಮುಖ ಪಾತ್ರವಹಿಸಿದ್ದರು. ಇದೀಗ ರಾಕ್​ ಸ್ಟಾರ್ ಜಡೇಜಾ ರಾಜಸ್ಥಾನ್ ರಾಯಲ್ಸ್ ಪರ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.

Ravindra Jadeja: ಸ್ವಲ್ಪ ಬೇಸರವಾಗಿತ್ತು... ಏನು ಮಾಡೋದು, ಇದೆಲ್ಲಾ ಸಹಜ..!
Ravindra Jadeja

Updated on: Mar 31, 2026 | 5:24 PM

ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ಆಲ್-ರೌಂಡರ್​ಗಳಲ್ಲಿ ಒಬ್ಬರಾದ ರವೀಂದ್ರ ಜಡೇಜಾ, 2026ರ ಐಪಿಎಲ್ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಮತ್ತೆ ಕಣಕ್ಕಿಳಿದಿದ್ದಾರೆ. ಒಂದೂವರೆ ದಶಕಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಅವಿಭಾಜ್ಯ ಅಂಗವಾಗಿದ್ದ ಜಡೇಜಾ, ಈಗ ತಮ್ಮ ವೃತ್ತಿಜೀವನ ಆರಂಭಿಸಿದ ತಂಡಕ್ಕೇ ಮರಳಿರುವುದು ವಿಶೇಷ.

ಸಿಎಸ್‌ಕೆ ಜೊತೆಗಿನ ಸುದೀರ್ಘ ಸಂಬಂಧ:

ಜಡೇಜಾ ಅವರು ಸಿಎಸ್‌ಕೆ ತಂಡದೊಂದಿಗೆ 13-14 ಸೀಸನ್‌ಗಳ ಕಾಲ ಆಡಿದ್ದರು. ಈ ಅವಧಿಯಲ್ಲಿ ಅವರು ತಂಡದ ಪ್ರಮುಖ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ಎಂ.ಎಸ್. ಧೋನಿ ಅವರ ನೆರಳಿನಲ್ಲಿ ಬೆಳೆದ ಅವರು, ತಂಡಕ್ಕೆ ಹಲವು ಬಾರಿ ಚಾಂಪಿಯನ್ ಪಟ್ಟ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಷ್ಟು ಸುದೀರ್ಘ ಕಾಲದ ಬಾಂಧವ್ಯವನ್ನು ಕಡಿದುಕೊಳ್ಳುವುದು ಸುಲಭವಾಗಿರಲಿಲ್ಲ ಎಂದು ಸ್ವತಃ ಜಡೇಜಾ ಅವರೇ ಒಪ್ಪಿಕೊಂಡಿದ್ದಾರೆ.

ಜಡೇಜಾ ಭಾವುಕ ಮಾತುಗಳು:

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕವೇ ರಾಜಸ್ಥಾನ್ ರಾಯಲ್ಸ್ ಪರ ಮತ್ತೆ ಕಣಕ್ಕಿಳಿದ ರವೀಂದ್ರ ಜಡೇಜಾ ಪಂದ್ಯದ ಬಳಿಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಈ ಬದಲಾವಣೆಯ ಕುರಿತು ಮಾತನಾಡಿದ ಜಡೇಜಾ, “13-14 ಸೀಸನ್‌ಗಳ ಕಾಲ ಸಿಎಸ್‌ಕೆ ಪರ ಆಡಿದ ನಂತರ ಆ ತಂಡವನ್ನು ಬಿಡುವುದು ಆರಂಭದಲ್ಲಿ ಸ್ವಲ್ಪ ಕಷ್ಟ ಮತ್ತು ಬೇಸರವಾಗಿತ್ತು. ಆದರೆ ಏನು ಮಾಡೋದು, ಜೀವನದಲ್ಲಿ ಬದಲಾವಣೆಗಳು ಸಹಜ. ಇದು ಪಯಣದ ಒಂದು ಭಾಗ ಎಂದು ನಾನು ಭಾವಿಸಿದೆ.

ವಿಶೇಷವೆಂದರೆ, ನಾನು ಯಾವ ತಂಡದೊಂದಿಗೆ ನನ್ನ ಮೊದಲ ಐಪಿಎಲ್ ಟ್ರೋಫಿ ಗೆದ್ದಿದ್ದೆನೋ (2008ರಲ್ಲಿ), ಈಗ ಮತ್ತೆ ಅದೇ ತಂಡಕ್ಕೆ ಮರಳಿದ್ದೇನೆ ಎನ್ನುವುದು ನನಗೆ ಹೆಮ್ಮೆ ಮತ್ತು ಸಂತಸ ತಂದಿದೆ,” ಎಂದು ರವೀಂದ್ರ ಜಡೇಜಾ ಭಾವುಕರಾಗಿ ಹೇಳಿದ್ದಾರೆ.

ಹಳೆಯ ನೆನಪುಗಳ ಮೆಲುಕು:

2008ರ ಉದ್ಘಾಟನಾ ಐಪಿಎಲ್ ಆವೃತ್ತಿಯಲ್ಲಿ ಶೇನ್ ವಾರ್ನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ಚಾಂಪಿಯನ್ ಆಗಿತ್ತು. ಅಂದು ಯುವ ಆಟಗಾರನಾಗಿದ್ದ ಜಡೇಜಾ ಅವರನ್ನು ವಾರ್ನ್ ‘ರಾಕ್‌ಸ್ಟಾರ್’ ಎಂದು ಕರೆಯುತ್ತಿದ್ದರು. ಈಗ 18 ವರ್ಷಗಳ ನಂತರ ಅದೇ ತಂಡಕ್ಕೆ ಮರಳಿರುವುದು ವಿಶೇಷ.

ಇದನ್ನೂ ಓದಿ: VIDEO: ಟಾಸ್ ಫಿಕ್ಸಿಂಗ್..? ಮುಂಬೈ ಇಂಡಿಯನ್ಸ್ ವಿರುದ್ಧ ಗಂಭೀರ ಆರೋಪ

ಇತ್ತ ರವೀಂದ್ರ ಜಡೇಜಾ ಅವರ ನಿರ್ಗಮನವು ಸಿಎಸ್‌ಕೆ ಅಭಿಮಾನಿಗಳಿಗೆ ಬೇಸರ ತಂದಿದ್ದರೂ, ಅತ್ತ ರಾಜಸ್ಥಾನ್ ರಾಯಲ್ಸ್ ಅಭಿಮಾನಿಗಳು ತಮ್ಮ ‘ರಾಕ್‌ಸ್ಟಾರ್’ ಪುನರಾಗಮನವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಅನುಭವ ಮತ್ತು ಕೌಶಲ್ಯದೊಂದಿಗೆ ಮರಳಿರುವ ಜಡೇಜಾ, ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮತ್ತೊಮ್ಮೆ ಟ್ರೋಫಿ ಗೆದ್ದು ಕೊಡಲಿದ್ದಾರಾ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಲಿದೆ.

 

 

Follow Us