Asia Cup 2023: ಟೀಮ್ ಇಂಡಿಯಾಗೆ ಬಂಪರ್ ಸುದ್ದಿ: ಬುಮ್ರಾ, ಶ್ರೇಯಸ್ ಅಯ್ಯರ್ ಕಮ್ಬ್ಯಾಕ್ಗೆ ವೇದಿಕೆ ಸಜ್ಜು
Jasprit Bumrah: 29 ವರ್ಷದ ಭಾರತೀಯ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಪದೇ ಪದೇ ಬೆನ್ನುನೋವಿಗೆ ಒಳಗಾದ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರಬಿದ್ದಿದ್ದರು.
ಭಾರತ ಕ್ರಿಕೆಟ್ ತಂಡದಿಂದ ಸಾಕಷ್ಟು ಸಮಯದಿಂದ ದೂರ ಉಳಿದಿದ್ದ ಶ್ರೇಯಸ್ ಅಯ್ಯರ್ (Shreyas Iyer) ಹಾಗೂ ಜಸ್ಪ್ರಿತ್ ಬುಮ್ರಾ (Jasprit Bumrah) ಇದೀಗ ತಂಡ ಸೇರಿಕೊಳ್ಳಲು ಮುಂದಾಗಿದ್ದಾರೆ. ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿರುವ ಬಹುನಿರೀಕ್ಷಿತ ಏಷ್ಯಾ ಕಪ್ ಟೂರ್ನಿಯಲ್ಲಿ ಇವರಿಬ್ಬರೂ ಕಮ್ಬ್ಯಾಕ್ ಮಾಡಲಿದ್ದಾರೆ ಎಂದು ವರದಿ ಆಗಿದೆ. ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ (Asia Cup 2023) ಗುರುವಾರ ಏಷ್ಯನ್ ಕ್ರಿಕೆಟ್ ಮಂಡಳಿ (ಎಸಿಸಿ) ದಿನಾಂಕ ನಿಗದಿ ಮಾಡಿದ ಬೆನ್ನಲ್ಲೇ ಈ ವಿಚಾರ ಹೊರಬಿದ್ದಿದೆ.
29 ವರ್ಷದ ಭಾರತೀಯ ವೇಗದ ಬೌಲರ್ ಬುಮ್ರಾ ಪದೇ ಪದೇ ಬೆನ್ನುನೋವಿಗೆ ಒಳಗಾದ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರಬಿದ್ದಿದ್ದರು. ಜಸ್ಪ್ರಿತ್ ಸೆಪ್ಟೆಂಬರ್, 2022 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಇದೀಗ ಬುಮ್ರಾ ಚೇತರಿಸಿಕೊಳ್ಳುತ್ತಿದ್ದು ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ. ಹೀಗಾಗಿ ಏಷ್ಯಾ ಕಪ್ನಲ್ಲಿ ಕಣಕ್ಕಿಳಿಯಲಿದ್ದಾರಂತೆ.
ಇತ್ತ ಶ್ರೇಯಸ್ ಅಯ್ಯರ್ ಕೂಡ ಗಯಣಮುಖರಾಗುತ್ತಿದ್ದಾರೆ. ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಂಡ ಪರಿಣಾಮ ಇವರು ವರ್ಷದ ಆರಂಭದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಿಂದ ಹೊರಗುಳಿಯಬೇಕಾಯಿತು. ಅಯ್ಯರ್, ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಇದೀಗ ಚೇತರಿಕೆ ಕಂಡಿದ್ದಾರೆ.
Test Cricket Records: ಟೆಸ್ಟ್ನಲ್ಲಿ ಮೊದಲ ಎಸೆತದಲ್ಲೇ ವಿಕೆಟ್: ದಾಖಲೆ ಬರೆದ ಅಫ್ಘಾನ್ ಬೌಲರ್
ಈ ಬಾರಿಯ ಏಷ್ಯಾ ಕಪ್ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಏಷ್ಯಾಕಪ್ ಆಯೋಜನೆಯ ಹಕ್ಕನ್ನು ಹೊಂದಿರುವ ಪಾಕಿಸ್ತಾನದಲ್ಲಿ 4 ಪಂದ್ಯಗಳು ನಡೆದರೆ, ಉಳಿದ 9 ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗುತ್ತದೆ. ಏಕೆಂದರೆ ಪಾಕಿಸ್ತಾನದಲ್ಲಿ ಟೂರ್ನಿ ನಡೆದ ಭಾರತ ತಂಡದ ಪಾಲ್ಗೊಳ್ಳುವುದಿಲ್ಲ ಎಂದು ಈ ಹಿಂದೆಯೇ ಬಿಸಿಸಿಐ ಸ್ಪಷ್ಟಪಡಿಸಿತ್ತು. ಹೀಗಾಗಿ ಪಾಕ್ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ನಿರ್ಧರಿಸಿದೆ. ಅದರಂತೆ ಭಾರತವನ್ನು ಹೊರತುಪಡಿಸಿದ, 4 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು, ಸೂಪರ್-4 ಹಾಗೂ ಫೈನಲ್ ಪಂದ್ಯಗಳು ಸೇರಿದಂತೆ ಒಟ್ಟು 9 ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯವಹಿಸಲಿದೆ.
ಈ ಬಾರಿಯ ಟೂರ್ನಿಯಲ್ಲೂ ಭಾರತ-ಪಾಕಿಸ್ತಾನ ತಂಡಗಳು ಒಂದೇ ಗ್ರೂಪ್ನಲ್ಲಿದ್ದು, ಈ ಪಂದ್ಯವು ಶ್ರೀಲಂಕಾದಲ್ಲಿ ನಡೆಯಲಿದೆ. ಹಾಗೆಯೇ ಈ ಗ್ರೂಪ್ನಲ್ಲಿ ಮೂರನೇ ತಂಡವಾಗಿ ನೇಪಾಳ ಕಾಣಿಸಿಕೊಂಡಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳದ ತಂಡಗಳ ನಡುವೆ ಒಟ್ಟು 13 ಏಕದಿನ ಪಂದ್ಯಗಳು ಜರುಗಲಿವೆ ಎಂದು ಕ್ರಿಕೆಟ್ ಮಂಡಳಿ ತಿಳಿಸಿದೆ.
ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದ್ದು, ಟೂರ್ನಿಯು ಎರಡು ಗುಂಪುಗಳನ್ನು ಒಳಗೊಂಡಿರುತ್ತದೆ. ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ ಫೋರ್ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಸೂಪರ್ ಫೋರ್ ಹಂತದಿಂದ ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಪಂದ್ಯಗಳು ನಡೆಯುವ ಸ್ಥಳಗಳು ಮತ್ತು ದಿನಾಂಕಗಳನ್ನು ಎಸಿಸಿ ಇನ್ನಷ್ಟೆ ಪ್ರಕಟಿಸಬೇಕಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ