7 ಬ್ರಾಂಡ್ಗಳಿಗೆ ನಿಷೇಧ: ಟೀಮ್ ಇಂಡಿಯಾದ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಅರ್ಜಿ ಆಹ್ವಾನ
Team India: ಭಾರತ-ವೆಸ್ಟ್ ಇಂಡೀಸ್ ನಡುವಣ ಸರಣಿಯು ಜುಲೈ 12 ರಿಂದ ಶುರುವಾಗಲಿದ್ದು, ಅದಕ್ಕೂ ಮುನ್ನ ಟೀಮ್ ಇಂಡಿಯಾಗೆ ಹೊಸ ಪ್ರಾಯೋಜಕತ್ವ ಸಿಗುವ ನಿರೀಕ್ಷೆಯಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಬುಧವಾರ ಭಾರತ ಕ್ರಿಕೆಟ್ ತಂಡಗಳ (Team India) ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಟೆಂಡರ್ಗೆ ಅರ್ಜಿಗಳನ್ನು ಆಹ್ವಾನಿಸಿದೆ. BYJU’S ಜೊತೆಗಿನ BCCI ಒಪ್ಪಂದವು ಕಳೆದ ಹಣಕಾಸು ವರ್ಷದಲ್ಲಿ ಕೊನೆಗೊಂಡಿದ್ದು, ಹೀಗಾಗಿ ಹೊಸ ಪ್ರಾಯೋಜಕತ್ವಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರಾಷ್ಟ್ರೀಯ ತಂಡದ ಪ್ರಮುಖ ಪ್ರಾಯೋಜಕರ ಹಕ್ಕುಗಳನ್ನು ಪಡೆಯಲು ಬಿಸಿಸಿಐ ಪ್ರತಿಷ್ಠಿತ ಸಂಸ್ಥೆಗಳಿಂದ ಬಿಡ್‌ಗಳನ್ನು ಆಹ್ವಾನಿಸುತ್ತದೆ. ಈ ಬಿಡ್ ಡಾಕ್ಯುಮೆಂಟ್ ಪಡೆಯಲು 5 ಲಕ್ಷ ರೂ. ಠೇವಣಿ ಇಡಬೇಕಾಗುತ್ತದೆ. ಈ ಮೊತ್ತವನ್ನು ಮರುಪಾವತಿಸುವುದಿಲ್ಲ ಎಂದು ತಿಳಿಸಲಾಗಿದೆ. ಅಲ್ಲದೆ ಜೂನ್ 26 ರೊಳಗೆ ಅರ್ಜಿ ಸಲ್ಲಿಸಬೇಕೆಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ಬಿಡ್ ಸಲ್ಲಿಸಲು ಬಯಸುವ ಯಾವುದೇ ಆಸಕ್ತ ಕಂಪೆನಿಯು ITT (ಟೆಂಡರ್ ಆಹ್ವಾನ) ವನ್ನು ಖರೀದಿಸಲೇಬೇಕು. ಆದಾಗ್ಯೂ, ITT ಯಲ್ಲಿ ನಿಗದಿಪಡಿಸಲಾದ ಅರ್ಹತಾ ಮಾನದಂಡಗಳನ್ನು ಪೂರೈಸುವವರು ಮತ್ತು ಅದರಲ್ಲಿ ಸೂಚಿಸಲಾದ ಇತರ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುವವರು ಮಾತ್ರ ಬಿಡ್ ಮಾಡಲು ಅರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ.
ಅಲ್ಲದೆ ಕೇವಲ ಐಟಿಟಿಯನ್ನು ಖರೀದಿಸಿದ ಮಾತ್ರಕ್ಕೆ ಯಾವುದೇ ಕಂಪೆನಿಗೆ ಅಥವಾ ವ್ಯಕ್ತಿಗೆ ಬಿಡ್ ಮಾಡಲು ಅವಕಾಶ ನೀಡುವುದಿಲ್ಲ. ಬದಲಾಗಿ ಡಾಕ್ಯುಮೆಂಟ್ನಲ್ಲಿ ತಿಳಿಸಲಾದ ನಿಯಮ ಹಾಗೂ ಷರತ್ತುಗಳಿಗೆ ಒಳಪಟ್ಟಿದ್ದರೆ ಮಾತ್ರ ಟೆಂಡರ್ಗೆ ಅರ್ಹರಾಗಿರಲಿದ್ದಾರೆ ಎಂದು ಜಯ್ ಶಾ ಸ್ಪಷ್ಟಪಡಿಸಿದ್ದಾರೆ.
ಇದಕ್ಕೆ ಮುಖ್ಯ ಕಾರಣ ಈ ಹಿಂದೆ ಭಾರತ ತಂಡದ ಪ್ರಾಯೋಜಕತ್ವ ಹೊಂದಿದ್ದ ಬೈಜೂಸ್ ಕಂಪೆನಿಯ ಮೇಲೆ ತೆರಿಗೆ ವಂಚನೆಯ ಆರೋಪ ಕೇಳಿ ಬಂದಿದೆ. ಅಲ್ಲದೆ ಕಂಪೆನಿಯು 1.2 ಬಿಲಿಯನ್ ಡಾಲರ್ ಸಾಲ ಹೊಂದಿದೆ. ಇದರ ಜೊತೆಗೆ ಫೆಮಾ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಭಾರತದ ಐಟಿ ಇಲಾಖೆ ಬೈಜೂಸ್ನ ಕಚೇರಿ ಮತ್ತಿತರ ಸ್ಥಳಗಳ ಮೇಲೆ ರೇಡ್ ಮಾಡಿತ್ತು. ಇದೇ ಕಾರಣದಿಂದಾಗಿ ಈ ಬಾರಿ ಟೆಂಡರ್ದಾರರ ಸಂಪೂರ್ಣ ಮಾಹಿತಿಗಳನ್ನು ಕಲೆಹಾಕಿ ಪ್ರಾಯೋಜಕತ್ವ ನೀಡಲು ಬಿಸಿಸಿಐ ನಿರ್ಧರಿಸಿದೆ.
ಅಷ್ಟೇ ಅಲ್ಲದೆ ಕೆಲ ಬ್ರಾಂಡ್ಗಳನ್ನು ಶೀರ್ಷಿಕೆ ಪ್ರಾಯೋಜಕತ್ವದಿಂದ ಹೊರಗಿಡಲಾಗಿದೆ. ಅದರಂತೆ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಅರ್ಜಿ ಸಲ್ಲಿಸುವುದನ್ನು ನಿಷೇಧಿಸಿರುವ ಬ್ರಾಂಡ್ ವಿಭಾಗಗಳ ಪಟ್ಟಿಯನ್ನು ಬಿಸಿಸಿಐ ಹಂಚಿಕೊಂಡಿದೆ.
- (1) ಅಥ್ಲೀಸರ್ ಮತ್ತು ಕ್ರೀಡಾ ಉಡುಪು ತಯಾರಕರು (ಈಗಾಗಲೇ ಅಡಿಡಾಸ್ ಕಂಪೆನಿಯು ಟೀಮ್ ಇಂಡಿಯಾದ ಕಿಟ್ ಪ್ರಾಯೋಕತ್ವವನ್ನು ಹೊಂದಿದ್ದು. ಈ ಕಾರಣದಿಂದಾಗಿ ಕ್ರೀಡಾ ಉಡುಪು ಹಾಗೂ ಫ್ಯಾಷನ್ ಉಡುಪು ತಯಾರಕ ಕಂಪೆನಿಗಳನ್ನು ಹೊರಗಿಡಲಾಗಿದೆ.)
- (2) ಆಲ್ಕೋಹಾಲ್ ಉತ್ಪನ್ನಗಳು
- (3) ಬೆಟ್ಟಿಂಗ್
- (4) ಕ್ರಿಪ್ಟೋಕರೆನ್ಸಿ
- (5) ರಿಯಲ್ ಮನಿ ಗೇಮಿಂಗ್ (ಫ್ಯಾಂಟಸಿ ಸ್ಪೋರ್ಟ್ಸ್ ಗೇಮಿಂಗ್ ಹೊರತುಪಡಿಸಿ)
- (6) ತಂಬಾಕು ಉತ್ಪನ್ನಗಳು
- (7) ಅಶ್ಲೀಲತೆಯನ್ನು ಒಳಗೊಂಡ, ಸಾರ್ವಜನಿಕ ನೈತಿಕತೆಗೆ ಧಕ್ಕೆ ತರುವಂತಹ ಅಂಶಗಳನ್ನು ಹೊಂದಿರುವ ಕಂಪೆನಿ/ಜಾಹೀರಾತು.
ಈ ಮೇಲೆ ತಿಳಿಸಲಾದ ಯಾವುದೇ ಜಾಹೀರಾತುಗಳ ಹಾಗೂ ಕಂಪೆನಿಗಳ ಪ್ರಾಯೋಜಕತ್ವವನ್ನು ಬಿಸಿಸಿಐ ಸ್ವೀಕರಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಭಾರತ-ವೆಸ್ಟ್ ಇಂಡೀಸ್ ನಡುವಣ ಸರಣಿಯು ಜುಲೈ 12 ರಿಂದ ಶುರುವಾಗಲಿದ್ದು, ಅದಕ್ಕೂ ಮುನ್ನ ಟೀಮ್ ಇಂಡಿಯಾಗೆ ಹೊಸ ಪ್ರಾಯೋಜಕತ್ವ ಸಿಗುವ ನಿರೀಕ್ಷೆಯಿದೆ.