ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ ಎಂಬೊತ್ತಿಗೆ ಒಂದರ ಹಿಂದೆ ಒಂದರಂತೆ ಆಘಾತ ಉಂಟಾಗುತ್ತಿದೆ. ಟೀಮ್ ಇಂಡಿಯಾಕ್ಕೆ ವಿರಾಟ್ ಕೊಹ್ಲಿಯ (Virat Kohli) ಫಾರ್ಮ್ ಬಗೆಗಿನ ಚಿಂತೆ ಒಂದು ಕಡೆಯಾದರೆ ಇದೀಗ ಆಟಗಾರರ ಇಂಜುರಿ ಮತ್ತೊಂದು ತಲೆನೋವಿಗೆ ಕಾರಣವಾಗಿದೆ. ಈಗಾಗಲೇ ಗಾಯದ ಕಾರಣದಿಂದ ಕೆಲ ಪ್ಲೇಯರ್ಸ್ ಏಷ್ಯಾಕಪ್ಗೆ ಆಯ್ಕೆಯಾಗಲಿಲ್ಲ. ಹರ್ಷಲ್ ಪಟೇಲ್ ಹಾಗೂ ಜಸ್‌ಪ್ರೀತ್ ಬುಮ್ರಾ (Jasprit Bumrah) ಗಾಯದ ಪ್ರಮಾಣ ತೀವ್ರವಾಗಿದ್ದು ಆಗಸ್ಟ್ 27 ರಿಂದ ಶುರುವಾಗಲಿರುವ ಏಷ್ಯಾಕಪ್ನಿಂದ ಹೊರಬಿದ್ದಿದ್ದಾರೆ. ಇದರ ನಡುವೆ ಏಷ್ಯಾಕಪ್ಗೆ (Asia Cup 2022) ಆಯ್ಕೆಯಾಗಿರುವ ವಾಷಿಂಗ್ಟನ್ ಸುಂದರ್ ಕೂಡ ಬಲಗೈಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಿರುವಾಗ ತಂಡಕ್ಕೆ ಮತ್ತೊಂದು ಶಾಕ್ ಉಂಟಾಗಿದೆ.
ಇದೇ ವರ್ಷ ಕಾಂಗರೂಗಳ ನಾಡಿನಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾ ತನ್ನ ಸ್ಟಾರ್ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರ ಸೇವೆ ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಬೆನ್ನು ನೋವಿನ ಸಮಸ್ಯೆ ಎದುರಿಸಿರುವ ಬುಮ್ರಾ ಟಿ20 ವಿಶ್ವಕಪ್ ವೇಳೆಗೆ ಸಂಪೂರ್ಣವಾಗಿ ಗುಣಮುಖರಾಗಿ ಆಡುವುದು ಅನುಮಾನ ಎಂದು ಹೇಳಲಾಗಿದೆ.
ಇತ್ತೀಚೆಗಷ್ಟೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲೂ ಬುಮ್ರಾ ಕಣಕ್ಕಿಳಿದಿರಲಿಲ್ಲ. ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿರುವ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಿಂದಲೂ ಬುಮ್ರಾ ವಿಶ್ರಾಂತಿ ಪಡೆದಿದ್ದಾರೆ. ಆದರೆ, ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಲಿರುವ ವಿಶ್ವಕಪ್‌ಗೆ ಬೂಮ್ರಾ ಲಭ್ಯವಾಗಬಹುದು ಎಂಬ ನಿರೀಕ್ಷೆಯಿಟ್ಟುಕೊಳ್ಳಲಾಗಿತ್ತು. ಇದೀಗ ಬಿಸಿಸಿಐನ ಅಧಿಕಾರಿಯೊಬ್ಬರು ಬೂಮ್ರಾ ಗಾಯದ ಬಗ್ಗೆ ನೀಡಿರುವ ಮಾಹಿತಿ ಆಘಾತ ಉಂಟು ಮಾಡಿದೆ.
”ಖಂಡಿತಾ ಬುಮ್ರಾ ಗಾಯದ ಸಮಸ್ಯೆ ಕಳವಳ ತಂದೊಡ್ಡಿದೆ. ವೈದ್ಯಕೀಯ ಸಲಹೆ ಮೇರೆಗೆ ಪುನಶ್ಚೇತನ ಶಿಬಿರಕ್ಕೆ ಒಳಪಟ್ಟಿದ್ದಾರೆ. ಗಂಭೀರತೆ ಏನೆಂದರೆ ಇದು ಅವರಿಗೆ ದೀರ್ಘ ಕಾಲದಿಂದ ಕಾಡುತ್ತಿರುವ ಸಮಸ್ಯೆ ಆಗಿದೆ. ಅವರಿಗೆ ಹಳೆಯ ಗಾಯ ಮರುಕಳಿಸಿದೆ. ಇದೇ ಕಳವಳಕ್ಕೆ ಕಾರಣ. ಈಗ ನಾವು ವಿಶ್ವಕಪ್‌ಗೆ ಕೇವಲ ಎರಡು ತಿಂಗಳ ಅಂತರದಲ್ಲಿದ್ದೇವೆ. ಈ ಸಂದರ್ಭದಲ್ಲಿಯೇ ಅವರು ಗಾಯಕ್ಕೆ ತುತ್ತಾಗಿದ್ದಾರೆ. ಅವರ ಸ್ಥಿತಿಯನ್ನು ವಿಶ್ಲೇಷಣೆ ಮಾಡಲಿದ್ದೇವೆ,” ಎಂದಿದ್ದಾರೆ ಬಿಸಿಸಿಐನ ಹೆಸರು ಹೇಳಲಿಚ್ಚಿಸದ ಅಧಿಕಾರಿ.
ಬೂಮ್ರಾ 2019ರಲ್ಲಿ ತೀವ್ರ ನೋವಿಗೆ ತುತ್ತಾಗಿ ಸುದೀರ್ಘ ವಿಶ್ರಾಂತಿ ಪಡೆದುಕೊಂಡಿದ್ದರು. ಇದೀಗ ಮತ್ತೆ ಅದೇ ರೀತಿ ಬೆನ್ನುನೋವ ಕಾಡುತ್ತಿದೆ ಎನ್ನಲಾಗಿದೆ. ವಿಶ್ವಕಪ್‌ನ ತಂಡದ ಘೋಷಣೆಗೆ ಕೇವಲ ಒಂದು ತಿಂಗಳ ಕಾಲಾವಕಾಶ ಮಾತ್ರವೇ ಬಾಕಿಯಿದೆ. ಹೀಗಾಗಿ ಬಿಸಿಸಿಐ ಹಾಗೂ ಆಯ್ಕೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಎಲ್ಲಾದರು ಬುಮ್ರಾ ಅಲಭ್ಯರಾದರು ಎಂದಾದರೆ ಮತ್ತೊಬ್ಬ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್.
ಕಾಯ್ದಿರಿಸಿದ ಆಟಗಾರರು: ಅಕ್ಷರ್ ಪಟೇಲ್, ದೀಪಕ್ ಚಹರ್ ಮತ್ತು ಶ್ರೇಯಸ್ ಅಯ್ಯರ್