ಟೀಮ್ ಇಂಡಿಯಾ ಪಾಲಿನ ಕಹಿ ಸುದ್ದಿಯೇ ಪಾಕಿಸ್ತಾನ್ ತಂಡಕ್ಕೆ ಸಿಹಿ ಸುದ್ದಿ: ಮೊಹಮ್ಮದ್ ಅಮೀರ್

|

Updated on: Jan 13, 2025 | 11:36 AM

Champions trophy 2025 India vs Pakistan: ಚಾಂಪಿಯನ್ಸ್ ಟ್ರೋಫಿ 2025ರ ಲೀಗ್ ಹಂತದ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಫೆಬ್ರವರಿ 23 ರಂದು ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೆ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ.

ಟೀಮ್ ಇಂಡಿಯಾ ಪಾಲಿನ ಕಹಿ ಸುದ್ದಿಯೇ ಪಾಕಿಸ್ತಾನ್ ತಂಡಕ್ಕೆ ಸಿಹಿ ಸುದ್ದಿ: ಮೊಹಮ್ಮದ್ ಅಮೀರ್
Ind Vs Pak
Follow us on

ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಇದರ ನಡುವೆ ಟೀಮ್ ಇಂಡಿಯಾ ಪಾಲಿಗೆ ಆಘಾತಕಾರಿ ಸುದ್ದಿಯೊಂದು ಅಪ್ಪಳಿಸಿದೆ. ಅದೇನೆಂದರೆ ಮುಂಬರುವ ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯಗಳಿಗೆ ಜಸ್​ಪ್ರೀತ್ ಬುಮ್ರಾ ಅವರು ಅಲಭ್ಯರಾಗುತ್ತಿರುವುದು. ಇತ್ತ ಭಾರತ ತಂಡ ಪಾಲಿಗೆ ಕಹಿಯಾಗಿರುವ ಸುದ್ದಿಯೇ ಪಾಕಿಸ್ತಾನ್ ತಂಡದ ಪಾಳಿಗೆ ಸಿಹಿ ಸುದ್ದಿ ಎಂದಿದ್ದಾರೆ ಪಾಕ್ ತಂಡದ ಮಾಜಿ ವೇಗಿ ಮೊಹಮ್ಮದ್ ಅಮೀರ್.

ಏಕೆಂದರೆ ಜಸ್​ಪ್ರೀತ್ ಬುಮ್ರಾ ಅವರ ಅಲಭ್ಯತೆಯು ಭಾರತ ತಂಡದ ಪಾಲಿಗೆ ಭಾರೀ ಹಿನ್ನಡೆಯನ್ನು ಉಂಟು ಮಾಡಲಿದೆ. ಅದರಲ್ಲೂ ಪಾಕಿಸ್ತಾನ್ ವಿರುದ್ದ ಬುಮ್ರಾ ಅನುಪಸ್ಥಿತಿಯಲ್ಲಿ ಭಾರತ ತಂಡ ಕಣಕ್ಕಿಳಿಬೇಕಿದೆ. ಇದು ಪಾಕ್ ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂದು ಮೊಹಮ್ಮದ್ ಅಮೀರ್ ಅಭಿಪ್ರಾಯಪಟ್ಟಿದ್ದಾರೆ.

ಜಸ್​ಪ್ರೀತ್ ಬುಮ್ರಾ ಇಲ್ಲದಿದ್ದರೆ, ಭಾರತದ ಬೌಲಿಂಗ್ ಲೈನಪ್ ವೀಕ್ ಆಗಲಿದೆ. ಇದರಿಂದ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ್ ತಂಡ ಮೇಲುಗೈ ಸಾಧಿಸಲಿದೆ. ಹೀಗಾಗಿ ಈ ಬಾರಿ ಭಾರತದ ವಿರುದ್ಧ ಪಾಕಿಸ್ತಾನ್ ತಂಡದ ಗೆಲುವನ್ನು ನಿರೀಕ್ಷಿಸಬಹುದು ಎಂದು ಅಮೀರ್ ಹೇಳಿದ್ದಾರೆ.

ಜಸ್​ಪ್ರೀತ್ ಬುಮ್ರಾಗೆ ಏನಾಗಿದೆ?

ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದ ವೇಳೆ ಜಸ್​ಪ್ರೀತ್ ಬುಮ್ರಾ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಇದೀಗ ವೈದ್ಯಕೀಯ ಪರೀಕ್ಷೆಗೆ ಒಳಗಾಗಿರುವ ಬುಮ್ರಾಗೆ ಹೆಚ್ಚಿನ ವಿಶ್ರಾಂತಿ ಸೂಚಿಸಲಾಗಿದೆ. ಹೀಗಾಗಿ ಅವರು ಮಾರ್ಚ್​ವರೆಗೆ ಕಣಕ್ಕಿಳಿಯುವುದಿಲ್ಲ ಎಂದು ವರದಿಯಾಗಿದೆ.

ಇತ್ತ ಚಾಂಪಿಯನ್ಸ್ ಟ್ರೋಫಿ ಶುರುವಾಗುವುದು ಫೆಬ್ರವರಿ 19 ರಿಂದ. ಟೀಮ್ ಇಂಡಿಯಾ ಫೆಬ್ರವರಿ 20 ರಂದು ಬಾಂಗ್ಲಾದೇಶ್ ವಿರುದ್ಧ ಕಣಕ್ಕಿಳಿಯುವ ಮೂಲಕ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ.

ಇನ್ನು ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೊಲ್ಟೇಜ್ ಪಂದ್ಯವು ಫೆಬ್ರವರಿ 23 ರಂದು ನಡೆಯಲಿದೆ. ಈ ಪಂದ್ಯಕ್ಕೂ ಜಸ್​ಪ್ರೀತ್ ಬುಮ್ರಾ ಅಲಭ್ಯರಾಗುವುದು ಬಹುತೇಕ ಖಚಿತ. ಏಕೆಂದರೆ ಬುಮ್ರಾ ಸಂಪೂರ್ಣ ಫಿಟ್​ನೆಸ್ ಸಾಧಿಸಲು ಮಾರ್ಚ್ ಮೊದಲ ವಾರದವರೆಗೆ ಕಾಯಬೇಕು ಎಂದು ವೈದ್ಯಕೀಯ ವರದಿಗಳು ಹೇಳಿವೆ.

ಇದನ್ನೂ ಓದಿ: ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ… 4 ತಿಂಗಳಲ್ಲಿ 3 ಪ್ರಮುಖ ಟೂರ್ನಿ

ಹೀಗಾಗಿ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಪಂದ್ಯಗಳಿಗೆ ಜಸ್​ಪ್ರೀತ್ ಬುಮ್ರಾ ಅಲಭ್ಯರಾಗುವುದು ಬಹುತೇಕ ಖಚಿತ ಎನ್ನಬಹುದು. ಇದನ್ನೇ ಪ್ರಸ್ತಾಪಿಸಿ ಪಾಕ್ ತಂಡದ ಮಾಜಿ ವೇಗಿ ಮೊಹಮ್ಮದ್ ಅಮೀರ್, ಟೀಮ್ ಇಂಡಿಯಾ ಪಾಲಿನ ಕಹಿ ಸುದ್ದಿ, ಪಾಕಿಸ್ತಾನ್ ಪಾಲಿಗೆ ಸಿಹಿ ಸುದ್ದಿ ಎಂದಿದ್ದಾರೆ.

ಚಾಂಪಿಯನ್ಸ್ ಟ್ರೋಫಿ 2025 ರ ಭಾರತ ತಂಡ ವೇಳಾಪಟ್ಟಿ:

  • ಫೆಬ್ರವರಿ 20, ಬಾಂಗ್ಲಾದೇಶ್ vs ಭಾರತ (ದುಬೈ)
  • ಫೆಬ್ರವರಿ 23, ಪಾಕಿಸ್ತಾನ್ vs ಭಾರತ (ದುಬೈ)
  • ಮಾರ್ಚ್ 2, ನ್ಯೂಝಿಲೆಂಡ್ ವಿರುದ್ಧ ಭಾರತ (ದುಬೈ)

 

Published On - 11:35 am, Mon, 13 January 25