ಈ ವಾರ ಟೆಸ್ಟ್ ಕ್ರಿಕೆಟ್ನಲ್ಲಿ ನಾಲ್ವರು ಆಟಗಾರರು 100ನೇ ಪಂದ್ಯವನ್ನಾಡಲಿದ್ದಾರೆ. ಈ ನಾಲ್ವರಲ್ಲಿ ಟೀಮ್ ಇಂಡಿಯಾ (Team India) ಆಟಗಾರ ರವಿಚಂದ್ರನ್ ಅಶ್ವಿನ್ ಕೂಡ ಇರುವುದು ವಿಶೇಷ. ಅಂದರೆ ಧರ್ಮಶಾಲಾದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದರೆ ಟೀಮ್ ಇಂಡಿಯಾ ಪರ 100 ಟೆಸ್ಟ್ ಪಂದ್ಯಗಳನ್ನಾಡಿದ ವಿಶೇಷ ದಾಖಲೆ ಆಶ್ವಿನ್ ಪಾಲಾಗಲಿದೆ.
ಹಾಗೆಯೇ ಅತ್ತ ಇಂಗ್ಲೆಂಡ್ ಆಟಗಾರ ಜಾನಿ ಬೈರ್ಸ್ಟೋವ್ ಕೂಡ 99 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಅದರಂತೆ ಟೀಮ್ ಇಂಡಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಬೈರ್ಸ್ಟೋವ್ ಕಾಣಿಸಿಕೊಂಡರೆ 100 ಟೆಸ್ಟ್ ಪಂದ್ಯಗಳನ್ನಾಡಿದ ವಿಶೇಷ ಸಾಧನೆ ಮಾಡಲಿದ್ದಾರೆ.
ಇತ್ತ ನ್ಯೂಝಿಲೆಂಡ್ ತಂಡದ ಇಬ್ಬರು ಆಟಗಾರರು ಕೂಡ 100ನೇ ಟೆಸ್ಟ್ ಪಂದ್ಯವನ್ನಾಡುವ ಹೊಸ್ತಿಲಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಕಣಕ್ಕಿಳಿದರೆ, 100 ಟೆಸ್ಟ್ ಪಂದ್ಯಗಳ ದಾಖಲೆ ಬರೆಯಲಿದ್ದಾರೆ.
ಹಾಗೆಯೇ ನ್ಯೂಝಿಲೆಂಡ್ ಟೆಸ್ಟ್ ತಂಡದ ನಾಯಕ ಟಿಮ್ ಸೌಥಿ ಕೂಟ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂಲಕ 100 ಟೆಸ್ಟ್ ಪಂದ್ಯಗಳನ್ನು ಪೂರೈಸಲಿದ್ದಾರೆ. ಅಂದರೆ ಕೇವಲ ದಿನಗಳ ಅಂತರದಲ್ಲಿ ನಾಲ್ವರು ಆಟಗಾರರು 100 ಟೆಸ್ಟ್ ಪಂದ್ಯಗಳನ್ನಾಡಿದ ದಾಖಲೆ ಬರೆಯಲಿರುವುದು ವಿಶೇಷ.
ಆಟಗಾರ | ಪಂದ್ಯಗಳು | 100ನೇ ಟೆಸ್ಟ್ ದಿನಾಂಕ |
ಜಾನಿ ಬೈರ್ಸ್ಟೋವ್ | 99 | ಮಾರ್ಚ್ 7 (ಧರ್ಮಶಾಲಾ) |
ಆರ್. ಅಶ್ವಿನ್ | 99 | ಮಾರ್ಚ್ 7 (ಧರ್ಮಶಾಲಾ) |
ಕೇನ್ ವಿಲಿಯಮ್ಸನ್ | ಮಾರ್ಚ್ 8 (ಕ್ರೈಸ್ಟ್ಚರ್ಚ್) | |
ಟಿಮ್ ಸೌಥಿ | 99 | ಮಾರ್ಚ್ 8 (ಕ್ರೈಸ್ಟ್ಚರ್ಚ್) |
ಇದನ್ನೂ ಓದಿ: IPL 2024: 10 ತಂಡಗಳ ನಾಯಕರುಗಳ ಪಟ್ಟಿ ಇಲ್ಲಿದೆ
ಧರ್ಮಶಾಲಾದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ರವಿಚಂದ್ರನ್ ಅಶ್ವಿನ್ ಭಾರತದ ಪರ 100 ಟೆಸ್ಟ್ ಪಂದ್ಯಗಳನ್ನಾಡಿದ 14ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಅಲ್ಲದೆ ಪ್ರಸ್ತುತ ಆಟಗಾರರಲ್ಲಿ ಈ ಸಾಧನೆ ಮಾಡಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಸದ್ಯ ಸಕ್ರಿಯ ಆಟಗಾರರಲ್ಲಿ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಮಾತ್ರ ಈ ಸಾಧನೆ ಮಾಡಿದ್ದಾರೆ. ಇದೀಗ ರವಿಚಂದ್ರನ್ ಅಶ್ವಿನ್ ಕೂಡ ಈ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.