AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌತ್ ಆಫ್ರಿಕಾ ಎರಡಂಕಿ ಮೊತ್ತ ಗಳಿಸಿದರೆ ಜೋಶ್ ಹೇಝಲ್​ವುಡ್ ನಾಗಾಲೋಟಕ್ಕೆ ಬ್ರೇಕ್

WTC Final 2025: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 212 ರನ್ ಕಲೆಹಾಕಿದರೆ, ಸೌತ್ ಆಫ್ರಿಕಾ 138 ರನ್​ಗಳಿಸಿ ಪ್ರಥಮ ಇನಿಂಗ್ಸ್ ಅಂತ್ಯಗೊಳಿಸಿತ್ತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 207 ರನ್​ಗಳಿಸಿದೆ. ಈ ಮೂಲಕ ಸೌತ್ ಆಫ್ರಿಕಾ ತಂಡಕ್ಕೆ 282 ರನ್​ಗಳ ಗುರಿ ನೀಡಿದೆ. ಈ ಬೆನ್ನತ್ತಿರುವ ಸೌತ್ ಆಫ್ರಿಕಾ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 213 ರನ್​ ಕಲೆಹಾಕಿದೆ.

ಸೌತ್ ಆಫ್ರಿಕಾ ಎರಡಂಕಿ ಮೊತ್ತ ಗಳಿಸಿದರೆ ಜೋಶ್ ಹೇಝಲ್​ವುಡ್ ನಾಗಾಲೋಟಕ್ಕೆ ಬ್ರೇಕ್
Josh Hazlewood
ಝಾಹಿರ್ ಯೂಸುಫ್
|

Updated on: Jun 14, 2025 | 8:32 AM

Share

ಫೈನಲ್ ಪಂದ್ಯದಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿರುವ ಜೋಶ್ ಹೇಝಲ್​ವುಡ್​ನ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕುವ ಸನಿಹದಲ್ಲಿದೆ ಸೌತ್ ಆಫ್ರಿಕಾ ತಂಡ. ಲಾರ್ಡ್ಸ್​ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಫೈನಲ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೌತ್ ಆಫ್ರಿಕಾ 69 ರನ್​ ಕಲೆಹಾಕಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಈ ಇತಿಹಾಸದೊಂದಿಗೆ ಅತ್ತ ಕಳೆದ ಒಂದು ದಶಕದಿಂದ ಫೈನಲ್​ನಲ್ಲಿ ಸೋಲು ಕಾಣದ ಹೇಝಲ್​ವುಡ್ ಅವರ ವಿಜಯಯಾತ್ರೆಗೆ ತೆರೆಬೀಳಲಿದೆ.

ಜೋಶ್ ಹೇಝಲ್​ವುಡ್ 2012 ರಿಂದ ಒಂದೇ ಒಂದು ಫೈನಲ್ ಸೋತಿಲ್ಲ ಎಂಬುದು ವಿಶೇಷ. 2012 ರಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಫೈನಲ್ ಆಡಿದ್ದ ಹೇಝಲ್​​ವುಡ್ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು. ಇದಾದ ಬಳಿಕ 2015 ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಕಣಕ್ಕಿಳಿದಿದ್ದ ಹೇಝಲ್​ವುಡ್ ಆಸ್ಟ್ರೇಲಿಯಾ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇನ್ನು 2020 ರ ಬಿಗ್ ಬ್ಯಾಷ್ ಲೀಗ್​ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದಾಗ ಜೋಶ್ ಹೇಝಲ್​ವುಡ್ ತಂಡದಲ್ಲಿದ್ದರು. ಹಾಗೆಯೇ 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಐಪಿಎಲ್​ ಟ್ರೋಫಿ ಮುಡಿಗೇರಿಸಿದಾಗಲೂ ಹೇಝಲ್​ವುಡ್ ತಂಡದಲ್ಲಿದ್ದರು.

2021 ರ ಟಿ20 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಜೋಶ್ ಹೇಝಲ್​ವುಡ್ ಪ್ರಮುಖ ಪಾತ್ರವಹಿಸಿದ್ದರು. ಇನ್ನು 2023 ರಲ್ಲಿ ಆಸ್ಟ್ರೇಲಿಯಾ ತಂಡದ ಏಕದಿನ ವಿಶ್ವಕಪ್ ಗೆಲ್ಲುವಲ್ಲಿಯೂ ಹೇಝಲ್​ವುಡ್ ಅವರ ಕೊಡುಗೆ ಅಪಾರ.

ಅಷ್ಟೇ ಅಲ್ಲದೆ ಈ ಬಾರಿಯ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚಾಂಪಿಯನ್ ಪಟ್ಟಕ್ಕೇರಲು ಜೋಶ್ ಹೇಝಲ್​ವುಡ್ ಮುಖ್ಯ ಕಾರಣ.

ಹೀಗೆ ಕಳೆದ ಒಂದು ದಶಕದಿಂದ ಜೋಶ್ ಹೇಝಲ್​ವುಡ್ ಫೈನಲ್​ ಸೋಲಿನ ರುಚಿ ನೋಡಿಲ್ಲ. ಹೀಗಾಗಿಯೇ ಹೇಝಲ್​ವುಡ್ ಅವರನ್ನು ಅಂತಿಮ ಪಂದ್ಯದ ಲಕ್ಕಿ ಚಾರ್ಮ್​ ಎಂದು ಪರಿಗಣಿಸಲಾಗುತ್ತದೆ.

ಆದರೆ ಈ ಬಾರಿ ಈ ಫೈನಲ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬೀಳುವ ಸಾಧ್ಯತೆಯಿದೆ. ಏಕೆಂದರೆ ಸೌತ್ ಆಫ್ರಿಕಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಗೆಲುವಿನ ಸನಿಹದಲ್ಲಿದ್ದು, ಶನಿವಾರ ನಡೆಯಲಿರುವ 4ನೇ ದಿನದಾಟದಲ್ಲಿ ಕೇವಲ 69 ರನ್​ಗಳಿಸಿದರೆ ವಿಜಯಲಕ್ಷ್ಮಿಯನ್ನು ಒಲಿಸಿಕೊಳ್ಳಬಹುದು.

ಇದನ್ನೂ ಓದಿ: ಭರ್ಜರಿ ಸೆಂಚುರಿಯೊಂದಿಗೆ ಹೊಸ ಇತಿಹಾಸ ರಚಿಸಿದ ಐಡೆನ್ ಮಾರ್ಕ್ರಾಮ್ 

ಅತ್ತ ಸೌತ್ ಆಫ್ರಿಕಾ ತಂಡ ಜಯಭೇರಿ ಬಾರಿಸಿದರೆ, ಕಳೆದ 13 ವರ್ಷಗಳಿಂದ ಫೈನಲ್ ಸೋಲನನ್ನು ನೋಡದ ಜೋಶ್ ಹೇಝಲ್​ವುಡ್ ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬೀಳಲಿದೆ.