
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಇಂದು ಅಂದರೆ ಜೂನ್ 5 ರಂದು ಗ್ವಾಲಿಯರ್‌ನಲ್ಲಿ ಮಧ್ಯಪ್ರದೇಶ ಲೀಗ್‌ನ (MPL 2025) ಎರಡನೇ ಸೀಸನ್ ಅನ್ನು ಉದ್ಘಾಟಿಸಿದರು. ಆ ಬಳಿಕ ಕಾರ್ಯಕ್ರಮದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಕ್ರಿಕೆಟ್ ಇಂದು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಬೇರೂರಿದೆ. ಇದು ಕೇವಲ ಆಟವಲ್ಲ, ಇದು ದೇಶದ ಕೋಟ್ಯಂತರ ಜನರನ್ನು ಪರಸ್ಪರ ಸಂಪರ್ಕಿಸುವ ಚೈತನ್ಯವಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನಾನು ಹೊಸ ಶಕ್ತಿಯನ್ನು ಅನುಭವಿಸುತ್ತಿದ್ದೇನೆ ಎಂದು ಕೇಂದ್ರ ಸಚಿವರು ಹೇಳಿದರು.
ಮುಂದುವರೆದು ಮಾತನಾಡಿದ ಸಿಂಧಿಯಾ, ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ತಮ್ಮ ದಿವಂಗತ ತಂದೆ ಮಾಧವರಾವ್ ಸಿಂಧಿಯಾ ಅವರೊಂದಿಗೆ ಪ್ರಪಂಚದಾದ್ಯಂತದ ಶ್ರೇಷ್ಠ ಕ್ರಿಕೆಟಿಗರೊಂದಿಗೆ ಸಂವಹನ ನಡೆಸಲು ಅವಕಾಶವನ್ನು ಹೇಗೆ ಪಡೆದರು ಎಂಬುದನ್ನು ವಿವರಿಸಿದರು. ಅಂದಿನಿಂದ ಇಂದಿನವರೆಗೆ ಕ್ರಿಕೆಟ್‌ನಲ್ಲಿ ಬಹಳಷ್ಟು ಬದಲಾವಣೆಯಾಗಿದೆ ಎಂದು ಅವರು ಹೇಳಿದರು. ಅಲ್ಲದೆ ಈ ಸಂದರ್ಭದಲ್ಲಿ, MPL ನ ಯಶಸ್ವಿ ಸಂಘಟನೆಗಾಗಿ ಮಧ್ಯಪ್ರದೇಶ ಕ್ರಿಕೆಟ್ ಸಂಘವನ್ನು ಸಹ ಅವರು ಶ್ಲಾಘಿಸಿದರು.
ಈ ವರ್ಷದ ಐಪಿಎಲ್ ಟ್ರೋಫಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದಿದೆ. ಈ ತಂಡವನ್ನು ರಜತ್ ಪಾಟಿದಾರ್ ಮುನ್ನಡೆಸಿದ್ದರು. ರಜತ್ ಪಾಟಿದಾರ್ ಮೂಲತಃ ಮಧ್ಯಪ್ರದೇಶದವರು. ಸಿಂಧಿಯಾ ಕೂಡ ಇದನ್ನು ಉಲ್ಲೇಖಿಸಿ, ಈ ಬಾರಿಯ ಐಪಿಎಲ್ ವಿಜೇತ ತಂಡದ ನಾಯಕ ರಜತ್ ಪಾಟಿದಾರ್ ಮಧ್ಯಪ್ರದೇಶದ ಆಟಗಾರ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಅವರು ಅಪಾರ ನಾಯಕತ್ವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.
ಎಂಪಿಎಲ್‌ನ ಉದ್ಘಾಟನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಂಧಿಯಾ, ಈ ಬಾರಿ ಮಹಿಳಾ ತಂಡಗಳನ್ನು ಈ ಪಂದ್ಯಾವಳಿಯಲ್ಲಿ ಸೇರಿಸುವ ಮೂಲಕ ಎಂಪಿಎಲ್ ಮಹಿಳಾ ಸಬಲೀಕರಣದತ್ತ ಪ್ರಮುಖ ಹೆಜ್ಜೆ ಇಟ್ಟಿದೆ. ಐದು ಪುರುಷ ತಂಡಗಳು ಮತ್ತು ಮೂರು ಮಹಿಳಾ ತಂಡಗಳು ಈ ಬಾರಿ ತಮ್ಮ ಕ್ರೀಡಾ ಪ್ರದರ್ಶನದ ಆಧಾರದ ಮೇಲೆ ಹೊಸ ಇತಿಹಾಸವನ್ನು ಸೃಷ್ಟಿಸುತ್ತವೆ ಎಂದು ನನಗೆ ವಿಶ್ವಾಸವಿದೆ. ಇಂದು ಮಧ್ಯಪ್ರದೇಶದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಬಲಪಡಿಸುವುದರೊಂದಿಗೆ, ಕ್ರೀಡೆಗಳಲ್ಲಿ ಜನರ ಆಸಕ್ತಿ ಮತ್ತು ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಸಿಂಧಿಯಾ ಹೇಳಿದರು.
MPL 2025: ಪ್ರತಿಯೊಂದು ಡಾಲ್ ಬಾಲ್ಗೆ ಒಂದೊಂದು ಗಿಡ; ಎಂಪಿಎಲ್ನಲ್ಲಿ ಮಹತ್ವ ನಿರ್ಧಾರ
ಮಧ್ಯಪ್ರದೇಶ ಲೀಗ್ ಅನ್ನು ಲಾಂಚ್‌ಪ್ಯಾಡ್ ಎಂದು ಬಣ್ಣಿಸಿದ ಸಿಂಧಿಯಾ, ಐಪಿಎಲ್ ಆಯ್ಕೆದಾರರ ತಂಡದ ಸದಸ್ಯರು ಸಹ ಆಟಗಾರರ ಪ್ರದರ್ಶನವನ್ನು ನೋಡಲು ಇಲ್ಲಿಗೆ ಬರುವ ಕಾರ್ಯಕ್ರಮ ಇದಾಗಿದೆ. ಕಳೆದ ವರ್ಷ ಎಂಪಿಎಲ್‌ನ 11 ಆಟಗಾರರನ್ನು ಐಪಿಎಲ್‌ಗೆ ಆಯ್ಕೆ ಮಾಡಲಾಗಿತ್ತು ಎಂಬುದು ಇದಕ್ಕೆ ದೊಡ್ಡ ಉದಾಹರಣೆಯಾಗಿದೆ. ನಾವು ಮೊದಲು ಎಂಪಿಎಲ್ ಅನ್ನು ಪ್ರಾರಂಭಿಸಿದ ದೇಶದ ಮೊದಲ ಮತ್ತು ಏಕೈಕ ರಾಜ್ಯ ಮಧ್ಯಪ್ರದೇಶ ಎಂದರು.
ಜೂನ್ 12 ರಿಂದ ಪ್ರಾರಂಭವಾಗುವ ಎಂಪಿಎಲ್‌ನ ಎಲ್ಲಾ ಕ್ರಿಕೆಟ್ ಪಂದ್ಯಗಳನ್ನು ಗ್ವಾಲಿಯರ್‌ನ ವಿಶ್ವ ದರ್ಜೆಯ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಲಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:26 pm, Thu, 5 June 25