ಭರ್ಜರಿ ಸೆಂಚುರಿಯೊಂದಿಗೆ ಕೊಹ್ಲಿಯ ದಾಖಲೆ ಮುರಿದ ಕೇನ್ ವಿಲಿಯಮ್ಸನ್
New Zealand vs South Africa: ಸೌತ್ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ 304 ರನ್ ಕಲೆಹಾಕಿದರೆ, ಈ ಗುರಿಯನ್ನು ನ್ಯೂಝಿಲೆಂಡ್ 48.4 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಗೆಲುವಿನ ರೂವಾರಿ ಕೇನ್ ವಿಲಿಯಮ್ಸನ್.

ಪಾಕಿಸ್ತಾನದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ದ್ವಿತೀಯ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡದ ಅನುಭವಿ ದಾಂಡಿಗ ಕೇನ್ ವಿಲಿಯಮ್ಸನ್ ಭರ್ಜರಿ ಶತಕ ಸಿಡಿಸಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಲಿಯಮ್ಸನ್ ಅಜೇಯ 133 ರನ್ ಬಾರಿಸಿ ಮಿಂಚಿದ್ದಾರೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪರ ಆರಂಭಿಕ ಆಟಗಾರ ಮ್ಯಾಥ್ಯೂ ಬ್ರೀಟ್ಝ್ಕೆ 148 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 150 ರನ್ ಚಚ್ಚಿದ್ದರು. ಈ ಶತಕದ ನೆರವಿನಿಂದ ಸೌತ್ ಆಫ್ರಿಕಾ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 304 ರನ್ ಕಲೆಹಾಕಿತು.
305 ರನ್ಗಳ ಗುರಿ ಬೆನ್ನತ್ತಿದ ನ್ಯೂಝಿಲೆಂಡ್ ತಂಡಕ್ಕೆ ಡೆವೊನ್ ಕಾನ್ವೆ (97) ಉತ್ತಮ ಆರಂಭ ಒದಗಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತ್ಯಾಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಕೇನ್ ವಿಲಿಯಮ್ಸನ್ 72 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ 113 ಎಸೆತಗಳನ್ನು ಎದುರಿಸಿದ ಕೇನ್ 2 ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ ಅಜೇಯ 133 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಈ 133 ರನ್ಗಳೊಂದಿಗೆ ಕೇನ್ ವಿಲಿಯಮ್ಸನ್ ಏಕದಿನ ಕ್ರಿಕೆಟ್ನಲ್ಲಿ 7 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗವಾಗಿ 7000 ರನ್ ಕಲೆಹಾಕಿದ ವಿಶ್ವದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ವಿಲಿಯಮ್ಸನ್ ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದರು. ಕಿಂಗ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 7 ಸಾವಿರ ರನ್ ಪೂರೈಸಲು 161 ಇನಿಂಗ್ಸ್ಗಳನ್ನು ತೆಗೆದುಕೊಂಡಿದ್ದರು. ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಕೇನ್ ವಿಲಿಯಮ್ಸನ್ ಯಶಸ್ವಿಯಾಗಿದ್ದಾರೆ.
ಕೇನ್ ವಿಲಿಯಮ್ಸನ್ ಏಕದಿನ ಕ್ರಿಕೆಟ್ನಲ್ಲಿ 7 ಸಾವಿರ ರನ್ಗಳ ಗಡಿದಾಟಲು ತೆಗೆದುಕೊಂಡಿರುವುದು ಕೇವಲ 159 ಇನಿಂಗ್ಸ್ಗಳನ್ನು ಮಾತ್ರ. ಈ ಮೂಲಕ ಒಡಿಐ ಕ್ರಿಕೆಟ್ನಲ್ಲಿ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ 7000 ರನ್ ಕಲೆಹಾಕಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಸೌತ್ ಆಫ್ರಿಕಾದ ಮಾಜಿ ದಾಂಡಿಗ ಹಾಶಿಮ್ ಆಮ್ಲಾ. 150 ಇನಿಂಗ್ಸ್ಗಳ ಮೂಲಕ 7 ಸಾವಿರ ರನ್ ಪೂರೈಸಿ ಹಾಶಿಮ್ ಆಮ್ಲಾ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 2017 ರಲ್ಲಿ ನಿರ್ಮಾಣವಾದ ಈ ದಾಖಲೆಯನ್ನು ಮುರಿಯಲು ಈವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ.
ಇದನ್ನೂ ಓದಿ: IPL 2025: RCB ತಂಡಕ್ಕೆ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್..!
ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 7 ಸಾವಿರ ರನ್ ಕಲೆಹಾಕಿದವರ ಪಟ್ಟಿ:
- ಹಾಶಿಮ್ ಆಮ್ಲಾ (ಸೌತ್ ಆಫ್ರಿಕಾ): 150 ಇನಿಂಗ್ಸ್
- ಕೇನ್ ವಿಲಿಯಮ್ಸನ್ (ನ್ಯೂಝಿಲೆಂಡ್): 159 ಇನಿಂಗ್ಸ್
- ವಿರಾಟ್ ಕೊಹ್ಲಿ (ಭಾರತ): 161 ಇನಿಂಗ್ಸ್
- ಎಬಿ ಡಿ ವಿಲಿಯರ್ಸ್ (ಸೌತ್ ಆಫ್ರಿಕಾ): 166 ಇನಿಂಗ್ಸ್
- ಸೌರವ್ ಗಂಗೂಲಿ (ಭಾರತ): 174 ಇನಿಂಗ್ಸ್
- ರೋಹಿತ್ ಶರ್ಮಾ (ಭಾರತ): 181 ಇನಿಂಗ್ಸ್
- ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್): 183 ಇನಿಂಗ್ಸ್
- ಮಾರ್ಟಿನ್ ಗಪ್ಟಿಲ್ (ನ್ಯೂಝಿಲೆಂಡ್): 186 ಇನಿಂಗ್ಸ್
- ಡೆಸ್ಮಂಡ್ ಹೇನ್ಸ್ (ವೆಸ್ಟ್ ಇಂಡೀಸ್): 187 ಇನಿಂಗ್ಸ್
- ಜಾಕ್ಸ್ ಕಾಲಿಸ್ (ಸೌತ್ ಆಫ್ರಿಕಾ): 188 ಇನಿಂಗ್ಸ್
- ರಾಸ್ ಟೇಲರ್ (ನ್ಯೂಝಿಲೆಂಡ್): 188 ಇನಿಂಗ್ಸ್.
