
ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಕ್ರಿಕೆಟ್ ದಂತಕಥೆ ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ಜೈಲಿನಲ್ಲಿ ತೀವ್ರವಾಗಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ಜಾಗತಿಕ ಕ್ರಿಕೆಟ್ ಸಮುದಾಯವು ಅವರ ನೆರವಿಗೆ ಧಾವಿಸಿದೆ. ಭಾರತದ ಶ್ರೇಷ್ಠ ಆಟಗಾರರಾದ ಕಪಿಲ್ ದೇವ್, ಸುನಿಲ್ ಗವಾಸ್ಕರ್ ಮತ್ತು ದಿಲೀಪ್ ವೆಂಗ್‌ಸರ್ಕರ್ ಸೇರಿದಂತೆ ವಿಶ್ವದ 21 ಮಾಜಿ ಅಂತರರಾಷ್ಟ್ರೀಯ ಕ್ರಿಕೆಟ್ ನಾಯಕರು ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಅವರಿಗೆ ಜಂಟಿ ಮಾನವೀಯ ಮನವಿ ಪತ್ರವೊಂದನ್ನು ಬರೆದಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೆಗ್ ಚಾಪೆಲ್ ಅವರ ನೇತೃತ್ವದಲ್ಲಿ ಬರೆಯಲಾದ ಈ ಮನವಿ ಪತ್ರದಲ್ಲಿ, ಅದಿಯಾಲಾ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರಿಗೆ ತಕ್ಷಣವೇ ಸೂಕ್ತ ವೈದ್ಯಕೀಯ ಸೌಲಭ್ಯ ಹಾಗೂ ಮಾನವೀಯ ಹಕ್ಕುಗಳನ್ನು ಒದಗಿಸಬೇಕು ಎಂದು ಕೋರಲಾಗಿದೆ. ಇದರ ಜೊತೆ ಕೆಲ ಬೇಡಿಕೆಯನ್ನಿಟ್ಟಿದ್ದಾರೆ.
ಸ್ವತಂತ್ರ ವೈದ್ಯಕೀಯ ತಪಾಸಣೆ: ಇಮ್ರಾನ್ ಖಾನ್ ಅವರ ವೈಯಕ್ತಿಕ ವೈದ್ಯರನ್ನು ಒಳಗೊಂಡ, ಸುಪ್ರೀಂ ಕೋರ್ಟ್ ನಿರ್ದೇಶಿತ ವೈದ್ಯಕೀಯ ಮಂಡಳಿಯಿಂದ ಸಂಪೂರ್ಣ ಮತ್ತು ಸ್ವತಂತ್ರ ಆರೋಗ್ಯ ತಪಾಸಣೆಗೆ ತಕ್ಷಣ ಅವಕಾಶ ನೀಡಬೇಕು ಎಂದು ಕೋರಿದ್ದಾರೆ.
ಕುಟುಂಬದ ಭೇಟಿಗೆ ಮರುಸಮ್ಮತಿ: ಸುಪ್ರೀಂ ಕೋರ್ಟ್ ಈ ಹಿಂದೆ ಆದೇಶಿಸಿದಂತೆ, ಇಮ್ರಾನ್ ಖಾನ್ ಅವರನ್ನು ವಾರಕ್ಕೊಮ್ಮೆ ಭೇಟಿಯಾಗಲು ಅವರ ಕುಟುಂಬ ಸದಸ್ಯರಿಗೆ ಇದ್ದ ಅವಕಾಶವನ್ನು ತಕ್ಷಣವೇ ಮರುಸ್ಥಾಪಿಸಬೇಕು ಎಂದು ಈ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ವಿಳಂಬವಿಲ್ಲದೆ ಚಿಕಿತ್ಸೆ: ವೈದ್ಯಕೀಯ ಮಂಡಳಿಯು ಶಿಫಾರಸು ಮಾಡುವ ಯಾವುದೇ ಆರೋಗ್ಯ ಚಿಕಿತ್ಸೆ ಅಥವಾ ಹಸ್ತಕ್ಷೇಪಗಳನ್ನು ಯಾವುದೇ ಆಡಳಿತಾತ್ಮಕ ಅಡೆತಡೆಗಳಿಲ್ಲದೆ ತಕ್ಷಣವೇ ಒದಗಿಸಬೇಕು ಎಂದು ಕೋರಲಾಗಿದೆ.
ಇತ್ತೀಚಿನ ವರದಿಗಳ ಪ್ರಕಾರ, ಜೈಲಿನಲ್ಲಿ ಇಮ್ರಾನ್ ಖಾನ್ ಅವರ ಆರೋಗ್ಯ ತೀವ್ರವಾಗಿ ಕ್ಷೀಣಿಸಿದೆ. ವಿಶೇಷವಾಗಿ ಅವರು ತಮ್ಮ ಬಲಗಣ್ಣಿನ ಶೇಕಡಾ 85 ರಷ್ಟು ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ. ಸುಪ್ರೀಂ ಕೋರ್ಟ್ ಸೂಚಿಸಿದ ಸ್ವತಂತ್ರ ವೈದ್ಯಕೀಯ ಮಂಡಳಿಯ ಬದಲಿಗೆ, ಸರ್ಕಾರ ನೇಮಿಸಿದ ವೈದ್ಯರ ತಂಡವೊಂದು ಕೇವಲ ಕೆಲವೇ ಗಂಟೆಗಳ ಕಾಲ ತಪಾಸಣೆ ನಡೆಸಿ ಅವರನ್ನು ಮತ್ತೆ ಜೈಲಿಗೆ ಕಳುಹಿಸಿದೆ. ಇದು ಮಾಜಿ ಆಟಗಾರರ ತೀವ್ರ ಕಳವಳಕ್ಕೆ ಕಾರಣವಾಗಿದೆ.
“ಕ್ರಿಕೆಟ್ ಮೈದಾನದಲ್ಲಿ ನಮ್ಮ ನಡುವೆ ಇದ್ದ ಬಾಂಧವ್ಯವು ಗಡಿ ಮತ್ತು ದೇಶಗಳ ನಡುವಿನ ವಿವಾದಗಳನ್ನು ಮೀರಿದ್ದಾಗಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಿರುವ ದಿಗ್ಗಜರು, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು 1992ರ ವಿಶ್ವಕಪ್ ವಿಜೇತ ನಾಯಕನಿಗೆ ಕನಿಷ್ಠ ಮಾನವೀಯ ಗೌರವ ಮತ್ತು ಜೀವ ರಕ್ಷಣೆಯ ಹಕ್ಕನ್ನು ನೀಡಬೇಕು ಎಂದು ಪಾಕ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 70 ಕೋಟಿ ರೂ. ನಷ್ಟ: ಟೀಮ್ ಇಂಡಿಯಾ ಕಣಕ್ಕಿಳಿದರೆ 500 ಕೋಟಿ ರೂ. ಲಾಭ!
ಒಟ್ಟಾರೆಯಾಗಿ, ರಾಜಕೀಯ ಏರಿಳಿತಗಳು ಏನೇ ಇರಲಿ, ಇಮ್ರಾನ್ ಖಾನ್ ಕೇವಲ ಒಬ್ಬ ಮಾಜಿ ಪ್ರಧಾನಿಯಷ್ಟೇ ಅಲ್ಲ, ಜಾಗತಿಕ ಕ್ರಿಕೆಟ್ ಇತಿಹಾಸದ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಕಪಿಲ್ ದೇವ್ ಮತ್ತು ಸುನಿಲ್ ಗವಾಸ್ಕರ್ ಅವರಂತಹ ಭಾರತೀಯ ಕ್ರಿಕೆಟ್ ದಿಗ್ಗಜರು ಈ ಜಾಗತಿಕ ಅಭಿಯಾನದಲ್ಲಿ ಕೈಜೋಡಿಸಿರುವುದು, ಕ್ರೀಡಾ ಮನೋಭಾವವು ದೇಶದ ಗಡಿ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳಿಗಿಂತ ಮಿಗಿಲಾದುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.