ವಿಜಯ ಹಝಾರೆ ಟೂರ್ನಿಗೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Karnataka Squad: ಕರ್ನಾಟಕ ಏಕದಿನ ತಂಡ ಪ್ರಕಟವಾಗಿದೆ. ಆದರೆ ಈ ತಂಡಕ್ಕೆ ಅನುಭವಿ ಬ್ಯಾಟರ್ ಮನೀಶ್ ಪಾಂಡೆ ಆಯ್ಕೆಯಾಗಿಲ್ಲ. ಕರ್ನಾಟಕ ಪರ ಲಿಸ್ಟ್ ಎ ಕ್ರಿಕೆಟ್ನಲ್ಲಿ 192 ಪಂದ್ಯಗಳನ್ನಾಡಿರುವ 35 ವರ್ಷದ ಪಾಂಡೆ ಒಟ್ಟು 6310 ರನ್ ಗಳಿಸಿದ್ದಾರೆ. ಇದಾಗ್ಯೂ ಅವರನ್ನು ಈ ಆಯ್ಕೆಗೆ ಪರಿಗಣಿಸಲಾಗಿಲ್ಲ. ಇದಕ್ಕೆ ಮುಖ್ಯ ಕಾರಣ ವಯಸ್ಸು.
ಡಿಸೆಂಬರ್ 21 ರಿಂದ ಶುರುವಾಗಲಿರುವ ವಿಜಯ ಹಝಾರೆ ಏಕದಿನ ಟೂರ್ನಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರ ಈ ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸಲಿದ್ದು, ಉಪನಾಯಕನಾಗಿ ಶ್ರೇಯಸ್ ಗೋಪಾಲ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ತಂಡದಲ್ಲಿ ಅನುಭವಿ ಬ್ಯಾಟರ್ ಮನೀಶ್ ಪಾಂಡೆಗೆ ಸ್ಥಾನ ನೀಡಲಾಗಿಲ್ಲ. ಇದರೊಂದಿಗೆ ಕರ್ನಾಟಕ ತಂಡದಲ್ಲಿ ಪಾಂಡೆ ಅವರ ಯುಗಾಂತ್ಯವಾಗಿರುವುದು ಖಚಿತವಾಗಿದೆ.
ಕರ್ನಾಟಕ ಪರ ಲಿಸ್ಟ್ ಎ ಕ್ರಿಕೆಟ್ನಲ್ಲಿ 192 ಪಂದ್ಯಗಳನ್ನಾಡಿರುವ ಮನೀಶ್ ಪಾಂಡೆ 10 ಶತಕ ಹಾಗೂ 39 ಅರ್ಧಶತಕಗಳೊಂದಿಗೆ ಒಟ್ಟು 6310 ರನ್ ಗಳಿಸಿದ್ದಾರೆ. ಇದೀಗ ತಂಡದಿಂದ ಹೊರಬಿದ್ದಿರುವ ಅವರಿಗೆ ಮತ್ತೆ ರಾಜ್ಯ ತಂಡದಲ್ಲಿ ಚಾನ್ಸ್ ಸಿಗುವ ಸಾಧ್ಯತೆಯಿಲ್ಲ. ಏಕೆಂದರೆ ಭವಿಷ್ಯದ ದೃಷ್ಟಿಯಲ್ಲಿ ಯುವ ಆಟಗಾರರಿಗೆ ಮಣೆ ಹಾಕಲು ಕೆಎಸ್‌ಸಿಎ ಆಯ್ಕೆ ಸಮಿತಿ ನಿರ್ಧರಿಸಿದ್ದು, ಹೀಗಾಗಿ ಮನೀಶ್ ಪಾಂಡೆ ಸೇರಿದಂತೆ ಒಂದಷ್ಟು ಹಿರಿಯ ಆಟಗಾರರನ್ನು ಈ ಬಾರಿ ತಂಡಿದಂದ ಕೈ ಬಿಡಲಾಗಿದೆ.
ಹಾಗೆಯೇ ಈ ಬಾರಿ ತಂಡದಲ್ಲಿ ಅನುಭವಿಗಳ ಜೊತೆ ಯುವ ಆಟಗಾರರಿಗೆ ಅವಕಾಶ ನೀಡಲಾಗಿರುವುದು ವಿಶೇಷ. ಅಂದರಂತೆ ತಂಡದಲ್ಲಿ ನಿಕಿನ್ ಜೋಸ್, ಅನೀಶ್, ಹಾರ್ದಿಕ್ ರಾಜ್, ಮನೋಜ್ ಭಾಂಡಗೆ ಮತ್ತು ಲವ್ನೀತ್ ಸಿಸೋಡಿಯಾ ಕಾಣಿಸಿಕೊಂಡಿದ್ದಾರೆ.
ಇನ್ನು ಅನುಭವಿ ಆಟಗಾರರಾಗಿ ಮಯಾಂಕ್ ಅಗರ್ವಾಲ್, ಶ್ರೇಯಸ್ ಗೋಪಾಲ್, ಕೆಎಲ್ ಶ್ರೀಜಿತ್, ವೈಶಾಕ್ ವಿಜಯಕುಮಾರ್, ವಾಸುಕಿ ಕೌಶಿಕ್, ವಿದ್ಯಾಧರ್ ಪಾಟೀಲ್ ತಂಡದಲ್ಲಿದ್ದಾರೆ. ಅದರಂತೆ ವಿಜಯ ಹಝಾರೆ ಟೂರ್ನಿಗೆ ಕರ್ನಾಟಕ ತಂಡ ಈ ಕೆಳಗಿನಂತಿದೆ…
ವಿಜಯ್ ಹಝಾರೆ ಟೂರ್ನಿ ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಶ್ರೇಯಸ್ ಗೋಪಾಲ್ (ಉಪನಾಯಕ), ಎಸ್ ನಿಕಿನ್ ಜೋಸ್, ಕೆವಿ ಅನೀಶ್, ಆರ್ ಸ್ಮರನ್, ಕೆಎಲ್ ಶ್ರೀಜಿತ್, ಅಭಿನವ್ ಮನೋಹರ್, ಹಾರ್ದಿಕ್ ರಾಜ್, ವೈಶಾಕ್ ವಿಜಯ್ ಕುಮಾರ್, ವಾಸುಕಿ ಕೌಶಿಕ್, ವಿದ್ಯಾಧರ್ ಪಾಟೀಲ್, ಕಿಶನ್ ಬೇಡರೆ, ಅಭಿಲಾಷ್ ಶೆಟ್ಟಿ, ಮನೋಜ್ ಭಾಂಡಗೆ, ಪ್ರವೀಣ್ ದುಬೆ, ಲವ್ನೀತ್ ಸಿಸೋಡಿಯಾ.
ವಿಜಯ ಹಝಾರೆ ಟೂರ್ನಿ ಯಾವಾಗ ಶುರು?
ವಿಜಯ ಹಝಾರೆ ಏಕದಿನ ಟೂರ್ನಿಯು ಡಿಸೆಂಬರ್ 21 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಅಸ್ಸಾಂ ಮತ್ತು ಜಾರ್ಖಂಡ್ ತಂಡಗಳು ಮುಖಾಮುಖಿಯಾಗಲಿವೆ.
ಇದನ್ನೂ ಓದಿ: ಪಾಕಿಸ್ತಾನ್ ಪರ ಕಣಕ್ಕಿಳಿದ ಇಬ್ಬರು ಹಿಂದೂ ಕ್ರಿಕೆಟಿಗರು ಯಾರು ಗೊತ್ತಾ?
ಕರ್ನಾಟಕ ತಂಡ ತನ್ನ ಮೊದಲ ಪಂದ್ಯವನ್ನು ಮುಂಬೈ ವಿರುದ್ಧ ಆಡಲಿದ್ದು, ಡಿಸೆಂಬರ್ 21 ರಂದು ನಡೆಯಲಿರುವ ಈ ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯದ ಮೂಲಕ ಕರ್ನಾಟಕ ತಂಡದ ವಿಜಯ ಹಝಾರೆ ಟೂರ್ನಿಯ ಅಭಿಯಾನ ಆರಂಭವಾಗಲಿದೆ.
Published On - 12:23 pm, Thu, 19 December 24