IPL 2024: 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಮತ್ತೆ ಬಂದ ಕೇದಾರ್ ಜಾಧವ್..!
Kedar Jadav: ಮೂರು ವರ್ಷಗಳ ಕಾಲ ಸಿಎಸ್ಕೆ ತಂಡದಲ್ಲಿದ್ದ ಕೇದರ್ 2021 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಐಪಿಎಲ್ನಲ್ಲಿ ಐದು ಫ್ರಾಂಚೈಸಿಗಳ ಪರ ಆಡಿರುವ ಕೇದರ್ ಜಾಧವ್ ಅವರ ಪ್ರದರ್ಶನ.
IPL 2024: ಐಪಿಎಲ್ ಸೀಸನ್ 17 ಆಟಗಾರರ ಹರಾಜಿಗೆ ಡೇಟ್ ಫಿಕ್ಸ್ ಆಗಿದೆ. ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಮಿನಿ ಹರಾಜಿಗಾಗಿ 1166 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಆಟಗಾರರಲ್ಲಿ 38 ವರ್ಷದ ಕೇದಾರ್ ಜಾಧವ್ (Kedar Jadhav) ಹೆಸರು ಕೂಡ ಕಾಣಿಸಿಕೊಂಡಿರುವುದು ವಿಶೇಷ.
ಆದರೆ ಈ ಬಾರಿ ಕೂಡ 2 ಕೋಟಿ ರೂ. ಮೂಲ ಬೆಲೆಯನ್ನು ಘೋಷಿಸಿದ್ದಾರೆ. ಅಂದರೆ ಜಾಧವ್ ಅವರನ್ನು ಖರೀದಿಸಲು ಐಪಿಎಲ್ ಫ್ರಾಂಚೈಸಿಗಳ ಪ್ರಾರಂಭಿಕ ಬಿಡ್ 2 ಕೋಟಿ ರೂ. ಆಗಿರಲಿದೆ. ಕಳೆದ ಬಾರಿ ಕೂಡ ಒಂದು ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಜಾಧವ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.
ಇದಾಗ್ಯೂ ಆರ್ಸಿಬಿ ಆಟಗಾರ ಡೇವಿಡ್ ವಿಲ್ಲಿ ಗಾಯಗೊಂಡು ತಂಡದಿಂದ ಹೊರಬಿದ್ದಾಗ ಅವರ ಸ್ಥಾನಕ್ಕೆ ಬದಲಿಯಾಗಿ ಕೇದಾರ್ ಜಾಧವ್ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಜಾಧವ್ ಅವರನ್ನು ಆರ್ಸಿಬಿ ರಿಟೈನ್ ಮಾಡಿಕೊಂಡಿಲ್ಲ. ಹೀಗಾಗಿ ಮತ್ತೊಮ್ಮೆ ಹರಾಜಿನ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ 38 ವರ್ಷದ ಹಿರಿಯ ಆಟಗಾರ.
ಕೇದಾರ್ ಜಾಧವ್ 2009 ರಿಂದ ಐಪಿಎಲ್ ಟೂರ್ನಿ ಆಡುತ್ತಿದ್ದಾರೆ. ಆರ್ಸಿಬಿ ಪರ ಚೊಚ್ಚಲ ಬಾರಿ ಆಡಿದ್ದ ಜಾಧವ್ ಆ ಬಳಿಕ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪಾಲಾಗಿದ್ದರು.
ಇನ್ನು 2011 ರಲ್ಲಿ ಕೊಚ್ಚಿ ಟಸ್ಕರ್ಸ್ ತಂಡದ ಕಣಕ್ಕಿಳಿದಿದ್ದರು. ಇದಾದ ಬಳಿಕ ಮತ್ತೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ ಮೂರು ಸೀಸನ್ ಆಡಿದ್ದರು. 2016 ಮತ್ತು 2017 ರಲ್ಲಿ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿದ್ದ ಜಾಧವ್, 2018 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದರು.
ಮೂರು ವರ್ಷಗಳ ಕಾಲ ಸಿಎಸ್ಕೆ ತಂಡದಲ್ಲಿದ್ದ ಕೇದರ್ 2021 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಐಪಿಎಲ್ನಲ್ಲಿ ಐದು ಫ್ರಾಂಚೈಸಿಗಳ ಪರ ಆಡಿರುವ ಕೇದರ್ ಜಾಧವ್ ಅವರ ಪ್ರದರ್ಶನ. ಐದು ತಂಡಗಳ ಪರ ಒಟ್ಟು 92 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಜಾಧವ್ ಕಲೆಹಾಕಿರುವುದು 1184 ರನ್ ಮಾತ್ರ.
ಹಾಗೆಯೇ ಕಳೆದ ನಾಲ್ಕು ಸೀಸನ್ಗಳಲ್ಲಿ ಜಾಧವ್ ಒಟ್ಟು 28 ಪಂದ್ಯಗಳನ್ನಾಡಿದ್ದರು. ಇದರಲ್ಲಿ ಮೂಡಿ ಬಂದಿರುವುದು ಕೇವಲ 291 ರನ್ ಮಾತ್ರ. ಅಂದರೆ 297 ಎಸೆತಗಳನ್ನು ಎದುರಿಸಿ ಜಾಧವ್ ಕಲೆಹಾಕಿರುವುದು ಕೇವಲ 291 ರನ್ ಮಾತ್ರ. ಇಂತಹ ಕಳಪೆ ಪ್ರದರ್ಶನದ ಹೊರತಾಗಿಯೂ 2021 ರ ಹರಾಜಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ಜಾಧವ್ ಅವರನ್ನು 2 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಎಸ್ಆರ್ಹೆಚ್ ಪರ ಐದು ಇನಿಂಗ್ಸ್ಗಳಿಂದ ಕಲೆಹಾಕಿದ್ದು 43 ರನ್ ಮಾತ್ರ.
ಇದನ್ನೂ ಓದಿ: IPL 2024: ಕಡಿಮೆ ಮೂಲ ಬೆಲೆಯೊಂದಿಗೆ ಹೆಸರು ನೋಂದಾಯಿಸಿದ ರಚಿನ್ ರವೀಂದ್ರ
ಅಲ್ಲದೆ 2023 ರಲ್ಲಿ ಆರ್ಸಿಬಿ ಪರ 2 ಪಂದ್ಯಗಳನ್ನಾಡಿದ್ದ ಕೇದಾರ್ ಜಾಧವ್ ಕೇವಲ 12 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಇದೀಗ ಇದೀಗ ಮತ್ತೊಮ್ಮೆ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಮಿನಿ ಹರಾಜಿನಲ್ಲಿ ಕಾಣಿಸಿಕೊಂಡಿರುವ ಜಾಧವ್ ಅವರನ್ನು ಯಾವ ತಂಡ ಖರೀದಿಸಲಿದೆ ಎಂಬ ಕುತೂಹಲ ಹಲವರಲ್ಲಿದೆ.