KKR vs GT: 16,776 ಪಂದ್ಯಗಳ ಬಳಿಕ ಹೀಗೊಂದು ವಿಶ್ವ ದಾಖಲೆ..!

IPL 2026: GT vs KKR: ಇಂಡಿಯನ್ ಪ್ರೀಮಿಯರ್ ಲೀಗ್​ನ 60ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್​ಗಳಲ್ಲಿ 247 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್​ಗಳಲ್ಲಿ 218 ರನ್​ಗಳಿಸಲಷ್ಟೇ ಶಕ್ತರಾದರು.

KKR vs GT: 16,776 ಪಂದ್ಯಗಳ ಬಳಿಕ ಹೀಗೊಂದು ವಿಶ್ವ ದಾಖಲೆ..!
Kkr Vs Gt

Updated on: May 17, 2026 | 8:23 AM

ಟಿ20 ಕ್ರಿಕೆಟ್​ನಲ್ಲಿ 16,776 ಪಂದ್ಯಗಳು ನಡೆದಿದೆ. ಈ ಪಂದ್ಯಗಳಲ್ಲಿ ಕಂಡು ಬರದ ವಿಶೇಷ ವಿಶ್ವ ದಾಖಲೆಯೊಂದಕ್ಕೆ ಐಪಿಎಲ್​ನ 60ನೇ ಮ್ಯಾಚ್ ಸಾಕ್ಷಿಯಾಗಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಪರ ಫಿನ್ ಅಲೆನ್, ಅಂಗ್​ಕ್ರಿಶ್ ರಘುವಂಶಿ ಹಾಗೂ ಕ್ಯಾಮರೋನ್ ಗ್ರೀನ್ ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕಗಳ ನೆರವಿನೊಂದಿಗೆ ಕೆಕೆಆರ್ ತಂಡವು 20 ಓವರ್​ಗಳಲ್ಲಿ 247 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಪರ ಶುಭ್​ಮನ್ ಗಿಲ್, ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಇದಾಗ್ಯೂ ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 29 ರನ್​ಗಳಿಂದ ಸೋತಿದೆ. ಈ ಸೋಲಿನ ಹೊರತಾಗಿಯೂ ಈ ಮ್ಯಾಚ್  ದಾಖಲೆಯ ಪುಟ ಸೇರಿದೆ.

ವಿಶ್ವ ದಾಖಲೆ:

ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪಂದ್ಯವೊಂದರಲ್ಲಿ ಒಟ್ಟು ಆರು ಬ್ಯಾಟರ್​ಗಳು 50ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಕೆಕೆಆರ್ ಮತ್ತು ಜಿಟಿ ಬ್ಯಾಟರ್​ಗಳು ಜೊತೆಗೂಡಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.ಲ

  • ಫಿನ್ ಅಲೆನ್ (KKR): 93 ರನ್ (35 ಎಸೆತ)
  • ಶುಭ್‌ಮನ್ ಗಿಲ್ (GT): 85 ರನ್ (49 ಎಸೆತ)
  • ಅಂಗ್‌ಕ್ರಿಶ್ ರಘುವಂಶಿ (KKR): 82* ರನ್ (44 ಎಸೆತ)
  • ಜೋಸ್ ಬಟ್ಲರ್ (GT): 57 ರನ್ (35 ಎಸೆತ)
  • ಸಾಯಿ ಸುದರ್ಶನ್ (GT): 53* ರನ್ (28 ಎಸೆತ)
  • ಕ್ಯಾಮರೋನ್ ಗ್ರೀನ್ (KKR): 52* ರನ್ (28 ಎಸೆತ)

ಇದನ್ನೂ ಓದಿ: 16 ಅಂಕಗಳಿದ್ದರೂ ಹೊರಬೀಳುವ ಭೀತಿಯಲ್ಲಿ ಗುಜರಾತ್ ಟೈಟಾನ್ಸ್!

ಹಳೆಯ ದಾಖಲೆ ಧೂಳೀಪಟ:

ಇದಕ್ಕೂ ಮುನ್ನ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಕೇವಲ 20 ಬಾರಿ ಮಾತ್ರ ಒಂದೇ ಪಂದ್ಯದಲ್ಲಿ 5 ಅರ್ಧಶತಕಗಳು ದಾಖಲಾಗಿದ್ದವು. ಅಂದರೆ ಈವರೆಗೆ ಯಾವುದೇ ಮ್ಯಾಚ್​ನಲ್ಲೂ 6 ಅರ್ಧಶತಕ ಮೂಡಿಬಂದಿರಲಿಲ್ಲ.

  • ಭಾರತ ಮತ್ತು ನ್ಯೂಝಿಲೆಂಡ್ (ಆಕ್ಲೆಂಡ್, 2020): ಅಂತಾರಾಷ್ಟ್ರೀಯ ಟಿ20 ಇತಿಹಾಸದಲ್ಲೇ ಮೊದಲ ಬಾರಿಗೆ  ಪಂದ್ಯವೊಂದರಲ್ಲಿ 5 ಅರ್ಧಶತಕಗಳು ದಾಖಲಾಗಿದ್ದವು. ನ್ಯೂಝಿಲೆಂಡ್ ಪರ ಕಾಲಿನ್ ಮುನ್ರೊ (59), ಕೇನ್ ವಿಲಿಯಮ್ಸನ್ (51), ಮತ್ತು ರಾಸ್ ಟೇಲರ್ (54*) ಫಿಫ್ಟಿ ಬಾರಿಸಿದರೆ, ಭಾರತದ ಪರ ಕೆ.ಎಲ್. ರಾಹುಲ್ (56) ಮತ್ತು ಶ್ರೇಯಸ್ ಅಯ್ಯರ್ (58*) ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದರು.
  • ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ (ಸೆಂಚುರಿಯನ್, 2023): ವೆಸ್ಟ್ ಇಂಡೀಸ್ ನೀಡಿದ 258 ರನ್‌ಗಳ ಬೃಹತ್ ಗುರಿಯನ್ನು ಸೌತ್ ಆಫ್ರಿಕಾ ಬೆನ್ನಟ್ಟಿದ ಈ ಐತಿಹಾಸಿಕ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ ಸೇರಿದಂತೆ ಒಟ್ಟು 5 ಆಟಗಾರರು ಅರ್ಧಶತಕದ ಗಡಿ ದಾಟಿದ್ದರು.
  • ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಐಪಿಎಲ್ 2024): ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ರನ್ ಮಳೆಯ ಪಂದ್ಯದಲ್ಲಿ ಎಸ್‌ಆರ್‌ಹೆಚ್ ಮತ್ತು ಆರ್‌ಸಿಬಿ ತಂಡದ ಬ್ಯಾಟರ್‌ಗಳು ಸೇರಿ ಒಟ್ಟು 5 ಅರ್ಧಶತಕಗಳನ್ನು ಸಿಡಿಸಿದ್ದರು.

ಆದರೆ ಇದೀಗ ಗುಜರಾತ್ ಟೈಟಾನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಣ ಪಂದ್ಯದಲ್ಲಿ ಶುಭ್​ಮನ್ ಗಿಲ್, ಸಾಯಿ ಸುದರ್ಶನ್, ಜೋಸ್ ಬಟ್ಲರ್, ಫಿನ್ ಅಲೆನ್, ಅಂಗ್​ಕ್ರಿಶ್ ರಘುವಂಶಿ ಹಾಗೂ ಕ್ಯಾಮರೋನ್ ಗ್ರೀನ್ ಅರ್ಧಶತಕ ಸಿಡಿಸಿ ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ ಪಂದ್ಯವೊಂದು 6 ಅರ್ಧಶತಕಗಳಿಗೆ ಸಾಕ್ಷಿಯಾಗಿದೆ.

 

Follow Us