ವಿಶ್ವ ಯೂತ್ ಚೆಸ್‌ನಲ್ಲಿ ಭಾರತಕ್ಕೆ ಏಕೈಕ ಪದಕ ತಂದುಕೊಟ್ಟ ಬೆಂಗಳೂರಿನ 13ರ ಬಾಲಕಿ: ಗಣಿತ ಒಲಂಪಿಯಾಡ್ನಲ್ಲೂ ಮಹತ್ವದ ಸಾಧನೆ
ಬೆಂಗಳೂರಿನ 13 ವರ್ಷದ ಪ್ರತೀತಿ ಬೋರ್ಡೊಲೊಯ್ ಇಟಲಿಯ FIDE ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಏಕೈಕ ಬೆಳ್ಳಿ ಪದಕ ಗೆದ್ದು 'WFM' ಗೌರವಕ್ಕೆ ಪಾತ್ರರಾಗಿದ್ದಾರೆ. ಕೇವಲ ಚೆಸ್ ಮಾತ್ರವಲ್ಲದೆ, ಇವರು ಅಂತರರಾಷ್ಟ್ರೀಯ ಗಣಿತ ಒಲಂಪಿಯಾಡ್‌ಗಳಲ್ಲಿಯೂ ಭಾರತವನ್ನು ಪ್ರತಿನಿಧಿಸಿದ್ದಾರೆ. ಚೆಸ್ ದಂತಕಥೆ ಗ್ಯಾರಿ ಕಸ್ಪರೋವ್ ಅವರಂತೆಯೇ ಏಪ್ರಿಲ್ 13 ರಂದು ಜನಿಸಿರುವ ಪ್ರತೀತಿ, ಕಿರಿಯ ವಯಸ್ಸಿನಲ್ಲಿಯೇ ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಮುಖ್ಯಾಂಶಗಳು
- ಬೆಂಗಳೂರಿನ 13 ವರ್ಷದ ಬಾಲಕಿ ಪ್ರತೀತಿ ಬೋರ್ಡೊಲೊಯ್ ವಿಶೇಷ ಸಾಧನೆ
- ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್
- ಭಾರತದ ಪರ ಏಕೈಕ ಪದಕ ಗೆಲ್ಲುವ ಮೂಲಕ ಈಕೆ ಇಡೀ ದೇಶವೇ ಹೆಮ್ಮೆ
ಬೆಂಗಳೂರು,ಜು.6: ಪ್ರತಿಭೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಬೆಂಗಳೂರಿನ 13 ವರ್ಷದ ಶಾಲಾ ಬಾಲಕಿ ಪ್ರತೀತಿ ಬೋರ್ಡೊಲೊಯ್ (Pratitee Bordoloi) ಸಾಬೀತುಪಡಿಸಿದ್ದಾರೆ. ಇಟಲಿಯಲ್ಲಿ ನಡೆದ ಪ್ರತಿಷ್ಠಿತ ಫಿಡೆ (FIDE) ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪರ ಏಕೈಕ ಪದಕ ಗೆಲ್ಲುವ ಮೂಲಕ ಈಕೆ ಇಡೀ ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ, ಪ್ರತೀತಿ ಕೇವಲ ಚೆಸ್‌ನಲ್ಲಿ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಟ್ಟದ ಗಣಿತ ಒಲಂಪಿಯಾಡ್‌ಗಳಲ್ಲೂ ಭಾರತವನ್ನು ಪ್ರತಿನಿಧಿಸಿದ ಅಪರೂಪದ ಗಣಿತ ಪ್ರತಿಭೆಯಾಗಿದ್ದಾರೆ.
ಇಟಲಿಯ ಮಾಂಟೆಸಿಲ್ವಾನೊದಲ್ಲಿ ನಡೆದ FIDE ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್‌ನ 18 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ ಪ್ರತೀತಿ ಬೋರ್ಡೊಲೊಯ್ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ವಿಶ್ವದ ಅತ್ಯುತ್ತಮ ಯುವ ಆಟಗಾರರ ವಿರುದ್ಧ ಸೆಣಸಾಡಿ ಪೋಡಿಯಂ ಮುಗಿಸಿದ ಈಕೆ, ಈ ವರ್ಷದ ಟೂರ್ನಿಯಲ್ಲಿ ಭಾರತಕ್ಕೆ ಸಿಕ್ಕ ಏಕೈಕ ಪದಕ ವಿಜೇತರಾಗಿದ್ದಾರೆ. ಇದರೊಂದಿಗೆ ಪ್ರತೀತಿ ಅವರು ‘ವುಮನ್ ಫಿಡೆ ಮಾಸ್ಟರ್’ (WFM) ಗೌರವಕ್ಕೂ ಪಾತ್ರರಾಗಿದ್ದಾರೆ.
ಪ್ರತೀತಿ ಅವರ ಕುರಿತಾದ ಒಂದು ಅದ್ಭುತವಾದ ವಿಷಯವು ವಿಶ್ವದಾದ್ಯಂತ ಚೆಸ್ ಪ್ರೇಮಿಗಳನ್ನು ಅಚ್ಚರಿ ಮೂಡಿಸಿದೆ. ಈಕೆ ಚೆಸ್ ಲೋಕದ ಸಾರ್ವಕಾಲಿಕ ಶ್ರೇಷ್ಠ ದಂತಕಥೆ ಗ್ಯಾರಿ ಕಸ್ಪರೋವ್ (Garry Kasparov) ಹುಟ್ಟಿದ ಸರಿಯಾಗಿ 50 ವರ್ಷಗಳ ನಂತರ ಜನಿಸಿದ್ದಾರೆ! ಕಸ್ಪರೋವ್ ಅವರು ಏಪ್ರಿಲ್ 13, 1963 ರಂದು ಜನಿಸಿದರೆ, ಪ್ರತೀತಿ ಏಪ್ರಿಲ್ 13, 2013 ರಂದು ಜನಿಸಿದ್ದಾರೆ. ಇಬ್ಬರೂ ಒಂದೇ ಜನ್ಮದಿನವನ್ನು ಹಂಚಿಕೊಳ್ಳುವುದರ ಜೊತೆಗೆ, ಬಾಲ್ಯದಿಂದಲೇ ಚೆಸ್‌ನತ್ತ ಆಕರ್ಷಣೆ ಮತ್ತು ಜಾಣ್ಮೆಯನ್ನು ಹೊಂದಿರುವುದು ವಿಶೇಷ.

ಪ್ರತೀತಿ ಅವರ ಕೋಚ್ ಹಾಗೂ ಗ್ರ್ಯಾಂಡ್‌ಮಾಸ್ಟರ್ ಪ್ರವೀಣ್ ಥಿಪ್ಸೆ ಅವರ ಪ್ರಕಾರ, “ಇದು ಕೇವಲ ಜನ್ಮದಿನದ ಕಾಕತಾಳೀಯವಲ್ಲ, ಕಸ್ಪರೋವ್ ಅವರ ಕೆಲವು ಆಟದ ಲಕ್ಷಣಗಳು ಪ್ರತೀತಿ ಅವರಲ್ಲೂ ಇವೆ. ಟೂರ್ನಿಯ ಕಠಿಣ ಪರಿಸ್ಥಿತಿಯಲ್ಲಿ ಒಂದು ಪಾಯಿಂಟ್ ಹಿಂದೆ ಬಿದ್ದಿದ್ದರೂ, ಧೃತಿಗೆಡದೆ ಎದುರಾಳಿಯನ್ನು ಹೇಗೆ ಸೋಲಿಸಬೇಕು ಮತ್ತು ಅಗ್ರಸ್ಥಾನಕ್ಕೇರಬೇಕು ಎಂದು ಆಕೆ ಅದ್ಭುತವಾಗಿ ಯೋಜನೆ ರೂಪಿಸುತ್ತಾಳೆ.” ಎಂದು ಹೇಳಿದ್ದಾರೆ.
ಇದನ್ನೂ ಓದಿ: 23 ವರ್ಷಗಳಿಂದ ನನ್ನನ್ನು ಮುಗಿಸಲು ನೋಡ್ತಿದ್ದೀರಿ: ಸಿಡಿದೆದ್ದ ರೊನಾಲ್ಡೊ!
ಬೆಂಗಳೂರಿನ ಶಿಷ್ಯ ಬಿಇಎಂಎಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯಾಗಿರುವ ಪ್ರತೀತಿ, ಕೇವಲ ಕ್ರೀಡೆಯಷ್ಟೇ ಅಲ್ಲದೆ ಓದಿನಲ್ಲೂ ಸೈ ಎನಿಸಿಕೊಂಡಿದ್ದಾರೆ. ಗಣಿತದಲ್ಲಿ ಅಪಾರ ಪಾಂಡಿತ್ಯ ಹೊಂದಿರುವ ಈಕೆ, ಈಗಾಗಲೇ ಭಾರತದ ಯುವ ಗಣಿತದ ಮನಸ್ಸುಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದಾರೆ. ದೇಶದ ಹಲವು ಪ್ರತಿಷ್ಠಿತ ಗಣಿತ ಒಲಂಪಿಯಾಡ್‌ಗಳಿಗೆ ಅರ್ಹತೆ ಪಡೆದಿರುವ ಪ್ರತೀತಿ, ಜಾಗತಿಕ ಗಣಿತ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಉನ್ನತ ಗೌರವಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇಂಟರ್ನ್ಯಾಷನಲ್ ಮಟ್ಟದಲ್ಲಿ ಪದಕ ಗೆಲ್ಲುವುದು ರಾತ್ರೋರಾತ್ರಿ ಬಂದ ಯಶಸ್ಸಲ್ಲ. ಇದರ ಹಿಂದೆ ಪ್ರತೀತಿ ಅವರ ನಿರಂತರ ಪರಿಶ್ರಮ, ಚೆಸ್ ಒಪನಿಂಗ್ಸ್ ಮತ್ತು ಒಗಟುಗಳನ್ನು ಬಿಡಿಸುವ ಶಿಸ್ತು ಹಾಗೂ ಅವರ ಕುಟುಂಬದ ಬಲವಾದ ಬೆಂಬಲವಿದೆ.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




