KKR vs RCB Playing XI: ಆರ್‌ಸಿಬಿ ತಂಡದಲ್ಲಿ ಬದಲಾವಣೆ; ಕೋಲ್ಕತ್ತಾಗೆ ಹೊಸ ಆಟಗಾರ ಎಂಟ್ರಿ
KKR vs RCB Playing XI: ಐಪಿಎಲ್‌ನಲ್ಲಿ ಈ ಎರಡೂ ತಂಡಗಳ ನಡುವೆ 30 ಪಂದ್ಯಗಳು ನಡೆದಿದ್ದು, ಇದರಲ್ಲಿ ಕೋಲ್ಕತ್ತಾ 16 ಬಾರಿ ಗೆದ್ದಿದ್ದರೆ, ಬೆಂಗಳೂರು 14 ಬಾರಿ ಗೆಲುವು ಕಂಡಿದೆ.

ಐಪಿಎಲ್ನ (IPL 2023) 9 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು (Kolkata Knight Riders vs Royal Challengers Bangalore) ಮುಖಾಮುಖಿಯಾಗುತ್ತಿವೆ. ಆಡಿದ ಮೊದಲ ಪಂದ್ಯದಲ್ಲೇ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ಗೆ ಮಣ್ಣು ಮುಕ್ಕಿಸಿದ ಆರ್‌ಸಿಬಿ ತನ್ನ ಅಭಿಯಾನವನ್ನು ಗೆಲುವಿನೊಂದಿಗೆ ಶುಭಾರಂಭ ಮಾಡಿತ್ತು. ಇತ್ತ ಕೆಕೆಆರ್ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಹೀಗಾಗಿ ನಿತೀಶ್ ರಾಣಾ ನೇತೃತ್ವದ ಕೆಕೆಆರ್ ತಂಡ ತನ್ನ ತವರಿನಲ್ಲಿ ಇಂದು ಮೊದಲ ಪಂದ್ಯವನ್ನಾಡುತ್ತಿದ್ದು, ಗೆಲುವಿನ ಖಾತೆ ತೆರೆಯುವತ್ತ ಕಣ್ಣಿಟ್ಟಿದೆ. ಇನ್ನು ಈ ಪಂದ್ಯ ಟಾಸ್ ಈಗಾಗಲೇ ಮುಗಿದಿದ್ದು, ಟಾಸ್ ಗೆದ್ದ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ (Faf du Plessis) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಕೆಕೆಆರ್ ಮೊದಲು ಬ್ಯಾಟ್ ಮಾಡಲಿದೆ. ಟಾಸ್ ಜೊತೆಗೆ ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್ ಹೊರಬಿದ್ದಿದ್ದು, ಉಭಯ ತಂಡಗಳು ತಲಾ ಒಂದೊಂದು ಬದಲಾವಣೆ ಮಾಡಿವೆ.
ಸ್ಪಿನ್ ಆಲ್ ರೌಂಡರ್ ಅನುಕುಲ್ ರಾಯ್ ಬದಲಿಗೆ ಕೋಲ್ಕತ್ತಾ 19 ವರ್ಷದ ಲೆಗ್ ಸ್ಪಿನ್ನರ್ ಸುಯಾಶ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ. ಸುಯಶ್ ಶರ್ಮಾ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡಲಿದ್ದಾರೆ. ಅದೇ ಹೊತ್ತಿಗೆ ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ಎಡಗೈ ವೇಗಿ ರೀಸ್ ಟೋಪ್ಲಿ ಅವರ ಜಾಗದಲ್ಲಿ ಬೆಂಗಳೂರು ಎಡಗೈ ವೇಗಿ ಡೇವಿಡ್ ವಿಲ್ಲಿ ಅವರನ್ನು ಕಣಕ್ಕಿಳಿಸಿದೆ.
ಐಪಿಎಲ್ ಇತಿಹಾಸದ ಮೊಟ್ಟಮೊದಲ ಪಂದ್ಯ ಈ ಎರಡು ತಂಡಗಳ ನಡುವೆ ನಡೆದಿದ್ದು, ಅಂದಿನಿಂದ ಈ ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿದೆ. ಐಪಿಎಲ್‌ನಲ್ಲಿ ಈ ಎರಡೂ ತಂಡಗಳ ನಡುವೆ 30 ಪಂದ್ಯಗಳು ನಡೆದಿದ್ದು, ಇದರಲ್ಲಿ ಕೋಲ್ಕತ್ತಾ 16 ಬಾರಿ ಗೆದ್ದಿದ್ದರೆ, ಬೆಂಗಳೂರು 14 ಬಾರಿ ಗೆಲುವು ಕಂಡಿದೆ.
RCB vs KKR Live Score IPL 2023: ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ; ತಂಡದಲ್ಲಿ 1 ಬದಲಾವಣೆ
A look at the Playing XI for #KKRvRCB
Live – https://t.co/V0OS7tFZTB #TATAIPL #KKRvRCB #IPL2023 pic.twitter.com/SN3tP3EC5e
— IndianPremierLeague (@IPL) April 6, 2023
ಉಭಯ ತಂಡಗಳು ಹೀಗಿವೆ
ಕೆಕೆಆರ್: ನಿತೀಶ್ ರಾಣಾ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಮನ್ದೀಪ್ ಸಿಂಗ್, ರಿಂಕು ಸಿಂಗ್, ಆಂಡ್ರೆ ರಸೆಲ್, ಸುಯಾಶ್ ಶರ್ಮಾ, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಟಿಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ.
ಆರ್‌ಸಿಬಿ: ಫಾಫ್ ಡುಪ್ಲೆಸಿ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮೈಕಲ್ ಬ್ರೇಸ್‌ವೆಲ್, ಶಹಬಾಜ್ ಅಹ್ಮದ್, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:19 pm, Thu, 6 April 23
