ಟೀಂ ಇಂಡಿಯಾ ನ್ಯೂಜಿಲೆಂಡ್ (India Vs New Zealand) ತಂಡವನ್ನು ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡುವ ತಯಾರಿಯಲ್ಲಿ ನಿರತರಾಗಿದ್ದರೆ, ಇತ್ತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಪ್ರಸ್ತುತ ತಮ್ಮ ಮದುವೆ ಸಂಭ್ರಮದಲ್ಲಿದ್ದಾರೆ. ಭಾರತ ತಂಡದ ಈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬಾಲಿವುಡ್ ನಟಿ ಅಥಿಯಾ ಶೆಟ್ಟಿ (Athiya Shetty and KL Rahul) ಅವರೊಂದಿಗೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸುದ್ದಿ ಪ್ರಕಾರ, ಸೋಮವಾರ (ಜನವರಿ 23) ಮದುವೆ ನಡೆಯಲಿದ್ದು, ಈ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಏತನ್ಮಧ್ಯೆ, ಅಥಿಯಾ ಮತ್ತು ರಾಹುಲ್ ಅವರ ಸಂಗೀತ ಕಾರ್ಯಕ್ರಮದ ವಿಡಿಯೋ ಕೂಡ ಟ್ವಿಟರ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.
ಬಾಲಿವುಡ್ ಹಿರಿಯ ನಟ ಸುನಿಲ್ ಶೆಟ್ಟಿ ಅವರ ಮಗಳಾದ ಅಥಿಯಾ, ಕನ್ನಡಿಗ ರಾಹುಲ್ ಜೊತೆ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಹಾಗೆಯೇ ಐಪಿಎಲ್ ಮತ್ತು ಟೀಂ ಇಂಡಿಯಾದ ಪಂದ್ಯಗಳಲ್ಲಿ ಅಥಿಯಾ ಅನೇಕ ಬಾರಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಈ ಜೋಡಿಗಳು ಪ್ರೀತಿಯಲ್ಲಿ ಬಿದ್ದಿರುವುದು ಖಚಿತವಾಗಿತ್ತು. ಇದೀಗ ಈ ಪ್ರಣಯ ಪಕ್ಷಿಗಳು ಖಂಡಾಲಾದಲ್ಲಿರುವ ಸುನೀಲ್ ಅವರ ಐಷಾರಾಮಿ ಬಂಗಲೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಸಮಾರಂಭಕ್ಕೆ ಆಪ್ತ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಮದುವೆಯಲ್ಲಿ ಸುಮಾರು 100 ಅತಿಥಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ವರದಿಯಾಗಿದೆ.
View this post on Instagram
ಇದೀಗ ಜನವರಿ 22 ರ ರಾತ್ರಿ ನಡೆದ ಅಥಿಯಾ ಮತ್ತು ರಾಹುಲ್ ಮದುವೆಯ ಸಂಗೀತ ಕಾರ್ಯಕ್ರಮದ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಮದುವಣಗಿತ್ತಿಗಿಂತೂ ಒಂದು ತೂಕ ಹೆಚ್ಚಾಗಿಯೇ ಅಲಂಕೃತಗೊಂಡಿರುವ ಸುನಿಲ್ ಶೆಟ್ಟಿ ಅವರ ಮನೆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಸಂಗೀತ ಕಾರ್ಯಕ್ರಮದ ಹಾಡುಗಳನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ. ಇದೀಗ ಈ ಜೋಡಿಯ ಮದುವೆಯ ಫೋಟೋಗಳನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ಭಾನುವಾರ, ಸುನಿಲ್ ಶೆಟ್ಟಿ ತಮ್ಮ ಪ್ರೀತಿಯ ಮಗಳು ಮತ್ತು ರಾಹುಲ್ ಅವರ ಮದುವೆಯ ಸುದ್ದಿಯನ್ನು ಖಚಿತಪಡಿಸಿದ್ದರು. ಈ ವೇಳೆ ಮಾತನಾಡಿದ್ದ ಸುನೀಲ್ ಶೆಟ್ಟಿ, ಮದುವೆಯ ನಂತರ ದಂಪತಿಯೊಂದಿಗೆ ಬಂಗಲೆಯಿಂದ ಹೊರಗೆ ಬಂದು ಫೋಟೋಗೆ ಪೋಸ್ ಕೊಡುತ್ತೇವೆ ಎಂದು ಮಾಧ್ಯಮದವರಿಗೆ ಭರವಸೆ ನೀಡಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ