KL Rahul: ಐಪಿಎಲ್ಗೂ ಮುನ್ನ ಕೆಎಲ್ ರಾಹುಲ್ಗೆ ಫಿಟ್ನೆಸ್ ಟೆಸ್ಟ್
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಮಾರ್ಚ್ 22 ರಿಂದ ಶುರುವಾಗಲಿದೆ. ಇದಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕು. ಇಲ್ಲದಿದ್ದರೆ ರಾಹುಲ್ಗೆ ಐಪಿಎಲ್ ಆಡಲು ಅವಕಾಶ ಇರುವುದಿಲ್ಲ. ಹೀಗಾಗಿ ಈ ವಾರದೊಳಗೆ ಕೆಎಲ್ಆರ್ ಅವರ ಫಿಟ್ನೆಸ್ ಟೆಸ್ಟ್ ನಡೆಯುವ ಸಾಧ್ಯತೆಯಿದೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆಎಲ್ ರಾಹುಲ್ (KL Rahul) ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ತೊಡೆಸಂಧು ನೋವಿನ ಸಮಸ್ಯೆಗೆ ಒಳಗಾಗಿದ್ದ ರಾಹುಲ್ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಕೊನೆಯ ಟೆಸ್ಟ್ ಪಂದ್ಯದಿಂದಲೂ ಹಿಂದೆ ಸರಿದಿದ್ದಾರೆ.
ಇತ್ತ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವ ಕೆಎಲ್ ರಾಹುಲ್, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಣಕ್ಕಿಳಿಯಬೇಕಿದ್ದರೆ ಫಿಟ್ನೆಸ್ ಟೆಸ್ಟ್ಗೆ ಒಳಗಾಗಬೇಕಿರುವುದು ಅನಿವಾರ್ಯ. ಅಂದರೆ ಬಿಸಿಸಿಐ ನಿಯಮದ ಪ್ರಕಾರ ಟೀಮ್ ಇಂಡಿಯಾ ಆಟಗಾರರು ಗಾಯಗೊಂಡ ಬಳಿಕ ಐಪಿಎಲ್ನಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಿಂದ ಫಿಟ್ನೆಸ್ ಟೆಸ್ಟ್ ಸರ್ಟಿಫಿಕೇಟ್ ಪಡೆಯಬೇಕು.
ಅದರಂತೆ ಇದೀಗ ಕೆಎಲ್ ರಾಹುಲ್ ಐಪಿಎಲ್ಗೂ ಮುನ್ನ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಿದೆ. ಈ ಟೆಸ್ಟ್ನಲ್ಲಿ ರಾಹುಲ್ ವಿಫಲರಾದರೆ ಐಪಿಎಲ್ನಿಂದ ಹೊರಬೀಳಲಿದ್ದಾರೆ. ಹೀಗಾಗಿ ಐಪಿಎಲ್ ಆರಂಭಕ್ಕೂ ಮುನ್ನ ಕೆಎಲ್ ರಾಹುಲ್ ಅಗ್ನಿಪರೀಕ್ಷೆಯನ್ನು ಎದುರಿಸಲಿರುವುದು ಖಚಿತ.
ಲಂಡನ್ಗೆ ತೆರಳಿದ್ದ ಕೆಎಲ್ ರಾಹುಲ್:
ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯದ ವೇಳೆ ಕೆಎಲ್ ರಾಹುಲ್ ಶೇ.90 ರಷ್ಟು ಫಿಟ್ ಆಗಿದ್ದಾರೆ ಎನ್ನಲಾಗಿತ್ತು. ಇದಾಗ್ಯೂ ನೋವಿನ ಸಮಸ್ಯೆಯು ತಲೆದೂರಿದ್ದರಿಂದ ಅವರು ಲಂಡನ್ನಲ್ಲಿ ಉನ್ನತ ವೈದ್ಯಕೀಯ ತಜ್ಞರನ್ನು ಭೇಟಿಯಾಗಿದ್ದರು. ಇದೀಗ ಚಿಕಿತ್ಸೆ ಮುಗಿಸಿ ಭಾನುವಾರ ಭಾರತಕ್ಕೆ ಮರಳಿದ್ದಾರೆ.
ಅಲ್ಲದೆ ಇದೀಗ ಬೆಂಗಳೂರಿನಲ್ಲಿರುವ ಬಿಸಿಸಿಐನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. NCA ನಲ್ಲಿ ಕೆಎಲ್ ರಾಹುಲ್ ಫಿಟ್ನೆಸ್ಗೆ ಒಳಗಾಗಲಿದ್ದು, ಇದರಲ್ಲಿ ಪಾಸ್ ಆದರೆ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ: IPL 2024: 10 ತಂಡಗಳ ನಾಯಕರುಗಳ ಪಟ್ಟಿ ಇಲ್ಲಿದೆ
LSG ಗೆ ಹೊಸ ಉಪನಾಯಕ:
ಈ ಬಾರಿಯ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ. ಇವರ ಜೊತೆಗೆ ಉಪನಾಯಕನಾಗಿ ನಿಕೋಲಸ್ ಪೂರನ್ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಉಪನಾಯಕರಾಗಿ ಕೃಣಾಲ್ ಪಾಂಡ್ಯ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ಅವರನ್ನು ವೈಸ್ ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿಸಲಾಗಿದ್ದು, ಬದಲಿಗೆ ವೆಸ್ಟ್ ಇಂಡೀಸ್ನ ನಿಕೋಲಸ್ ಪೂರನ್ಗೆ ಉಪನಾಯಕತ್ವ ನೀಡಲಾಗಿದೆ.