ಕೆಎಲ್ ರಾಹುಲ್ ದೀಪಾವಳಿ ಧಮಾಕಾ: ಹಳೆಯ ದಾಖಲೆಗಳು ಠುಸ್ ಪಟಾಕಿ..!
KL Rahul Century: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ (61) ಹಾಗೂ ಶುಭ್ಮನ್ ಗಿಲ್ (51) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಆ ಬಳಿಕ ಬಂದ ವಿರಾಟ್ ಕೊಹ್ಲಿ (51) ಕೂಡ ಅರ್ಧಶತಕದ ಕೊಡುಗೆ ನೀಡಿದರು. ಆ ಬಳಿಕ ಕಣಕ್ಕಿಳಿದ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದರು.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ನ 45ನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ನೆದರ್ಲೆಂಡ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ (61) ಹಾಗೂ ಶುಭ್ಮನ್ ಗಿಲ್ (51) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಆ ಬಳಿಕ ಬಂದ ವಿರಾಟ್ ಕೊಹ್ಲಿ (51) ಕೂಡ ಅರ್ಧಶತಕದ ಕೊಡುಗೆ ನೀಡಿದರು.
ಇದಾದ ಬಳಿಕ ಜೊತೆಗೂಡಿದ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ನೆದರ್ಲೆಂಡ್ಸ್ ಬೌಲರ್ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ಈ ಜೋಡಿ 3ನೇ ವಿಕೆಟ್ಗೆ 208 ರನ್ಗಳ ಜೊತೆಯಾಟವಾಡಿದರು.
ಇದರ ನಡುವೆ ಶ್ರೇಯಸ್ ಅಯ್ಯರ್ 84 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಶತಕ ಪೂರೈಸಿದರು. ಅಯ್ಯರ್ ಶತಕ ಪೂರೈಸುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಕೆಎಲ್ ರಾಹುಲ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು.
ಪರಿಣಾಮ ಕೆಎಲ್ ರಾಹುಲ್ ಬ್ಯಾಟ್ನಿಂದ ಕೇವಲ 62 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಸ್ಪೋಟಕ ಶತಕ ಮೂಡಿಬಂತು. ಇದರೊಂದಿಗೆ ಏಕದಿನ ವಿಶ್ವಕಪ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ದಾಖಲೆ ಕೂಡ ಕೆಎಲ್ಆರ್ ಪಾಲಾಯಿತು.
ಇದಕ್ಕೂ ಮುನ್ನ ಈ ದಾಖಲೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ಹಿಟ್ಮ್ಯಾನ್ ಈ ಬಾರಿಯ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಕೇವಲ 63 ಎಸೆತಗಳಲ್ಲಿ ಶತಕ ಪೂರೈಸಿ ದಾಖಲೆ ನಿರ್ಮಿಸಿದ್ದರು.
ಇದೀಗ ನೆದರ್ಲೆಂಡ್ಸ್ ವಿರುದ್ಧ ಕೇವಲ 62 ಎಸೆತಗಳಲ್ಲಿ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಕೆಎಲ್ ರಾಹುಲ್ ಏಕದಿನ ವಿಶ್ವಕಪ್ನಲ್ಲಿ ಭಾರತದ ಪರ ಅತೀ ವೇಗದ ಶತಕ ಸಿಡಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದಲ್ಲದೆ ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪರ ಶತಕ ಬಾರಿಸಿದ 2ನೇ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಕೆಎಲ್ ರಾಹುಲ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ಸಾಧನೆ ಮಾಡಿದ್ದು ರಾಹುಲ್ ದ್ರಾವಿಡ್. 1999 ರ ವಿಶ್ವಕಪ್ನಲ್ಲಿ ಶ್ರೀಲಂಕಾ ವಿರುದ್ಧ ದ್ರಾವಿಡ್ 145 ರನ್ ಬಾರಿಸಿ ಮಿಂಚಿದ್ದರು.
ಇದೀಗ ಕೆಎಲ್ ರಾಹುಲ್ ನೆದರ್ಲೆಂಡ್ಸ್ ವಿರುದ್ಧ ಶತಕ ಸಿಡಿಸುವ ಮೂಲಕ ಏಕದಿನ ವಿಶ್ವಕಪ್ನಲ್ಲಿ ಸೆಂಚುರಿ ಬಾರಿಸಿ ಭಾರತದ 2ನೇ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇನ್ನು ಶ್ರೇಯಸ್ ಅಯ್ಯರ್ (128) ಹಾಗೂ ಕೆಎಲ್ ರಾಹುಲ್ (102) ಅವರ ಶತಕದ ನೆರವಿನಿಂದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್ ನಷ್ಟಕ್ಕೆ 410 ರನ್ ಕಲೆಹಾಕಿತು. ವಿಶೇಷ ಎಂದರೆ ಇದು ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಕಲೆಹಾಕಿದ 2ನೇ ಗರಿಷ್ಠ ಸ್ಕೋರ್. 2007ರ ವಿಶ್ವಕಪ್ನಲ್ಲಿ ಬರ್ಮುಡಾ ವಿರುದ್ಧ 413 ರನ್ ಬಾರಿಸಿರುವುದು ಭಾರತ ತಂಡ ಕಲೆಹಾಕಿದ ಅತ್ಯಧಿಕ ರನ್ ಮೊತ್ತವಾಗಿದೆ.
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: ಭರ್ಜರಿ ಸೆಂಚುರಿ ಸಿಡಿಸಿ ಮತ್ತೊಂದು ವಿಶ್ವ ದಾಖಲೆ ಬರೆದ ಕಿಂಗ್ ಕೊಹ್ಲಿ
ನೆದರ್ಲೆಂಡ್ಸ್ (ಪ್ಲೇಯಿಂಗ್ XI): ವೆಸ್ಲಿ ಬ್ಯಾರೆಸಿ, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಸೈಬ್ರಾಂಡ್ ಎಂಗಲ್ಬ್ರೆಕ್ಟ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಬಾಸ್ ಡಿ ಲೀಡೆ, ತೇಜ ನಿಡಮನೂರು, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್ತ್, ಪಾಲ್ ವ್ಯಾನ್ ಮೀಕೆರೆನ್.