ಪ್ರತಿ ಪಂದ್ಯದ ಬಳಿಕವೂ ‘ವಿ’ಚಿತ್ರಹಿಂಸೆ! ಕಹಿ ಅನುಭವ ಬಿಚ್ಚಿಟ್ಟ ಕೆ.ಎಲ್ ರಾಹುಲ್

KL Rahul: ಐಪಿಎಲ್‌ನಲ್ಲಿ ಕಪ್ ಗೆಲ್ಲುವುದಷ್ಟೇ ಅಲ್ಲ, ಕ್ರಿಕೆಟ್‌ ಹಿನ್ನೆಲೆಯೇ ಇಲ್ಲದ ಕಾರ್ಪೊರೇಟ್‌ ಮಾಲೀಕರ ಪ್ರಶ್ನೆಗಳಿಗೆ ಉತ್ತರಿಸುವುದೇ ನಾಯಕನಿಗೆ ದೊಡ್ಡ ತಲೆನೋವು! – ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯಲ್ಲಿ ತಮಗಾದ ಕಹಿ ಅನುಭವಗಳನ್ನು ನೆನೆದು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆ.ಎಲ್. ರಾಹುಲ್ ಆಡಿರುವ ಮಾತುಗಳು ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ.

ಪ್ರತಿ ಪಂದ್ಯದ ಬಳಿಕವೂ ವಿಚಿತ್ರಹಿಂಸೆ! ಕಹಿ ಅನುಭವ ಬಿಚ್ಚಿಟ್ಟ ಕೆ.ಎಲ್ ರಾಹುಲ್
Kl Rahul
Image Credit source: IPL

Updated on: Aug 06, 2026 | 11:34 AM

ಟೀಮ್ ಇಂಡಿಯಾ ಪರ 10 ತಿಂಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದರೂ ಆಗದಷ್ಟು ಮಾನಸಿಕ ಮತ್ತು ದೈಹಿಕ ಆಯಾಸ, ಕೇವಲ 2 ತಿಂಗಳ ಐಪಿಎಲ್ ಆಡುವುದರಿಂದ ಆಗುತ್ತಿತ್ತು! – ಹೀಗಂದಿರುವುದು ಮತ್ಯಾರೂ ಅಲ್ಲ, ಭಾರತ ತಂಡದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್. ಈ ಹೇಳಿಕೆಗೆ ಮುಖ್ಯ ಕಾರಣ ಈ ಹಿಂದೆ ಐಪಿಎಲ್​ನಲ್ಲಾದ ಕಹಿ ಅನುಭವ. ಖ್ಯಾತ ಕ್ರೀಡಾ ನಿರೂಪಕ ಜತಿನ್ ಸಪ್ರೂ ಅವರೊಂದಿಗಿನ ಪಾಡ್‌ಕಾಸ್ಟ್​ನಲ್ಲಿ ಮಾತನಾಡಿದ ಕೆಎಲ್ ರಾಹುಲ್, ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೇ, ಅವರ ವಿರುದ್ಧ ಪರೋಕ್ಷವಾಗಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಕ್ರೀಡಾ ಹಿನ್ನೆಲೆ ಇಲ್ಲದವರಿಗೆ ಅರ್ಥ ಮಾಡಿಸುವುದು ಕಷ್ಟ!

ಸಂದರ್ಶನದಲ್ಲಿ ಐಪಿಎಲ್ ನಾಯಕತ್ವದ ಕಹಿ ಅನುಭವಗಳನ್ನು ಹಂಚಿಕೊಂಡ ಕೆಎಲ್ ರಾಹುಲ್, “ಕ್ರೀಡಾ ಹಿನ್ನೆಲೆ ಇಲ್ಲದ  ಕಾರ್ಪೊರೇಟ್ ಮಾಲೀಕರಿಗೆ ಪಂದ್ಯದ ಪರಿಸ್ಥಿತಿಯನ್ನು ಅರ್ಥ ಮಾಡಿಸುವುದು ಅತ್ಯಂತ ಕಷ್ಟದ ಮತ್ತು ನಿರಾಸೆ ಮೂಡಿಸುವ ಕೆಲಸ” ಎಂದು ಹೇಳಿದ್ದಾರೆ.

“ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾವು ತರಬೇತುದಾರರು ಮತ್ತು ಆಯ್ಕೆಗಾರರಿಗೆ ಮಾತ್ರ ಉತ್ತರದಾಯಿಯಾಗಿರುತ್ತೇವೆ. ಏಕೆಂದರೆ ಅವರಿಗೆ ಆಟದ ಸೂಕ್ಷ್ಮತೆಗಳು ತಿಳಿದಿರುತ್ತವೆ. ಆದರೆ ಐಪಿಎಲ್‌ನಲ್ಲಿ ಪ್ರತಿ ಪಂದ್ಯ ಮುಗಿದ ತಕ್ಷಣ ಮಾಲೀಕತ್ವದ ಮಟ್ಟದಲ್ಲಿ ಸಭೆಗಳು, ವಿಮರ್ಶೆಗಳು ಆರಂಭವಾಗುತ್ತವೆ”.

“ಎದುರಾಳಿ ತಂಡ 200 ರನ್ ಹೊಡೆದಾಗ ನಾವು ಯಾಕೆ 120 ಕ್ಕೆ ಆಲೌಟ್ ಆದೇವು?, ಈ ನಿರ್ಧಾರವನ್ನು ಏಕೆ ತೆಗೆದುಕೊಂಡಿರಿ?, ಆ ಆಟಗಾರನಿಗೆ ಆ ರೋಲ್ ಏಕೆ ನೀಡಿದಿರಿ? ಎಂಬಿತ್ಯಾದಿ ವಿಚಿತ್ರ ಪ್ರಶ್ನೆಗಳಿಗೆ ನಾವು ನಿರಂತರವಾಗಿ ವಿವರಣೆ ನೀಡುತ್ತಲೇ ಇರಬೇಕಾಗುತ್ತಿತ್ತು”

“10 ತಿಂಗಳುಗಳು ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿದ್ದಕ್ಕಿಂತ ಹೆಚ್ಚು ಮಾನಸಿಕ, ದೈಹಿಕ ಬಳಿಕೆಯನ್ನು ನಾನು ಅನುಭವಿಸಿದ್ದೆ. ನನ್ನ ನಿರ್ಧಾರ, ಆಟಗಾರರ ಆಯ್ಕೆ, ಕಳಪೆ ಪ್ರದರ್ಶನ… ಹೀಗೆ ಪ್ರತಿಯೊಂದಕ್ಕೂ ನಾನು ವಿವರಣೆ ನೀಡಬೇಕಿತ್ತು. ಕ್ರೀಡಾ ಹಿನ್ನಲೆ ಇಲ್ಲದವರಿಗೆ ಇವೆಲ್ಲವನ್ನೂ ವಿವರಿಸಿ ಅರ್ಥ ಮಾಡಿಸುವುದು ಕಷ್ಟ” ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.

2024ರ ಆ ಘಟನೆಯೇ ಮುಳುವಾಯಿತೇ?

ಐಪಿಎಲ್ 2024 ರ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ತಂಡ ಹೀನಾಯವಾಗಿ ಸೋತಿತ್ತು. ಆ ಪಂದ್ಯ ಮುಗಿದ ತಕ್ಷಣ ಮೈದಾನದಲ್ಲೇ ಲೈವ್ ಕ್ಯಾಮೆರಾಗಳ ಮುಂದೆಯೇ ಮಾಲೀಕ ಸಂಜೀವ್ ಗೋಯೆಂಕಾ ಅವರು ನಾಯಕ ಕೆ.ಎಲ್. ರಾಹುಲ್ ಅವರ ಮೇಲೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಭಾರತ ತಂಡವನ್ನು ಮುನ್ನಡೆಸಿದ ಅನುಭವವಿರುವ ಹಿರಿಯ ಆಟಗಾರನಿಗೆ ಮೈದಾನದಲ್ಲೇ ಸಾರ್ವಜನಿಕವಾಗಿ ಅಪಮಾನ ಮಾಡಿದ್ದಕ್ಕೆ ಗೋಯೆಂಕಾ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಮತ್ತು ದಿಗ್ಗಜರು ಆಕ್ರೋಶ ಹೊರಹಾಕಿದ್ದರು. ಆ ಘಟನೆಯ ನಂತರ ರಾಹುಲ್ ಅವರ ತಂದೆ-ತಾಯಿ ಹಾಗೂ ಮಾವ, ನಟ ಸುನಿಲ್ ಶೆಟ್ಟಿ ಕೂಡ ತೀವ್ರ ಬೇಸರಗೊಂಡಿದ್ದರು ಎಂದು ವರದಿಯಾಗಿತ್ತು.

‘ಸ್ವಾತಂತ್ರ್ಯ ಬೇಕಿತ್ತು, ಅದಕ್ಕೇ ಹೊರಬಂದೆ’

ಈ ವಿವಾದದ ನಂತರ ಸಂಜಯ್ ಗೋಯೆಂಕಾ ಅವರು ರಾಹುಲ್ ಅವರನ್ನು ಮನೆಗೆ ಕರೆದು ಭೋಜನ ಔತಣಕೂಟ ನೀಡಿ ವಿವಾದ ತಿಳಿಗೊಳಿಸಲು ಯತ್ನಿಸಿದರಾದರೂ, ಇಬ್ಬರ ನಡುವಿನ ಸಂಬಂಧ ಮೊದಲಿನಂತಿರಲಿಲ್ಲ. “ನನಗೆ ಮುಕ್ತವಾಗಿ ಆಡಲು ಸ್ವಾತಂತ್ರ್ಯ ಬೇಕಿತ್ತು, ಆದ್ದರಿಂದಲೇ ಎಲ್‌ಎಸ್‌ಜಿ ನಾಯಕತ್ವ ಮತ್ತು ತಂಡವನ್ನು ತೊರೆದು ಹೊಸ ತಂಡ ಸೇರಿಕೊಂಡೆ” ಎಂದು ರಾಹುಲ್ ಈ ಹಿಂದೆ ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ಏಕದಿನ ವಿಶ್ವಕಪ್​ಗೆ ಬಲಿಷ್ಠ ಭಾರತ ತಂಡ ಹೆಸರಿಸಿದ ಸುನಿಲ್ ಗವಾಸ್ಕರ್

ಪ್ರಸ್ತುತ ಐಪಿಎಲ್‌ನಲ್ಲಿ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಹಳೆಯ ಕಹಿ ನೆನಪುಗಳಿಂದ ಹೊರಬಂದಿದ್ದಾರೆ. ಆದರೆ ಅವರ ಈ ಹೊಸ ಸಂದರ್ಶನ ಮಾತ್ರ ಐಪಿಎಲ್‌ನಲ್ಲಿ ಹಣದ ಬಲವಿರುವ ಕಾರ್ಪೊರೇಟ್ ಮಾಲೀಕರು ಆಟಗಾರರಿಗೆ ನೀಡುವ ಗೌರವ ಮತ್ತು ಫ್ರಾಂಚೈಸಿಗಳ ಒಳಗಿನ ಒತ್ತಡದ ವಾತಾವರಣವನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ.

 

Published On - 11:31 am, Thu, 6 August 26

Loading...
Unable to load recommendations.
Follow Us