KL Rahul: ಗೆದ್ದರೂ ಸಿಟ್ಟಾದ ಕೆಎಲ್ ರಾಹುಲ್: ಪಂದ್ಯ ಮುಗಿದ ಬಳಿಕ ಏನಂದ್ರು ಕೇಳಿ

KL Rahul: ಗೆದ್ದರೂ ಸಿಟ್ಟಾದ ಕೆಎಲ್ ರಾಹುಲ್: ಪಂದ್ಯ ಮುಗಿದ ಬಳಿಕ ಏನಂದ್ರು ಕೇಳಿ
KL Rahul post-match presentation PBKS vs LSG

PBKS vs LSG, IPL 2022: ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯ ಮುಗಿದ ಬಳಿಕ ಮಾತನಾಡಿದ ಲಖನೌ ತಂಡದ ನಾಯಕ ಕೆಎಲ್ ರಾಹುಲ್ ತಂಡದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಮೊದಲ ಇನ್ನಿಂಗ್ಸ್​ ನಾವು ಮುಗಿಸಿದ್ದು ಕೆಟ್ಟದಾಗಿತ್ತು. ಇದೊಂದು ಮೂರ್ಖತನದ ಬ್ಯಾಟಿಂಗ್ ಎಂದು ಹೇಳಿದ್ದಾರೆ.

TV9kannada Web Team

| Edited By: Vinay Bhat

Apr 30, 2022 | 9:05 AM

ಐಪಿಎಲ್ 2022 ರಲ್ಲಿ (IPL 2022) ಶುಕ್ರವಾರ ನಡೆದ ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ ಜೇಂಟ್ಸ್ (PBKS vs LSG) ಗೆಲುವನ್ನೇನೊ ಸಾಧಿಸಿತು. ಆದರೆ, ರಾಹುಲ್ ಪಡೆಯ ಬ್ಯಾಟಿಂಗ್ ವೈಫಲ್ಯಗೊಂಡಿದ್ದು ಎದ್ದು ಕಾಣುತ್ತಿದೆ. ಸಂಪೂರ್ಣವಾಗಿ ಬೌಲರ್​ಗಳ ಸಹಾಯದಿಂದ ಪಂದ್ಯ ಲಖನೌ ಪಾಲಾಯಿತು ಎಂದರೆ ತಪ್ಪಾಗಲಾರದು. ಬ್ಯಾಟಿಂಗ್ ವಿಭಾಗದಲ್ಲಿ ನಿರೀಕ್ಷಿತ ನಿರ್ವಹಣೆ ತೋರದಿದ್ದರೂ, ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಲಖನೌ ಸೂಪರ್‌ ಜೈಂಟ್ಸ್ ತಂಡ ಆರನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು. ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಲಖನೌ ತಂಡ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಕುಸಿತದಿಂದಾಗಿ 8 ವಿಕೆಟ್‌ಗೆ 153 ರನ್‌ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ತೃಪ್ತಿಪಟ್ಟಿತು. ಪ್ರತಿಯಾಗಿ ಪಂಜಾಬ್ ಕಿಂಗ್ಸ್ ತಂಡ ಕ್ರುನಾಲ್ ಪಾಂಡ್ಯ, ಮೊಹ್ಸಿನ್ ಖಾನ್ ಹಾಗೂ ಚಮೀರ ದಾಳಿಗೆ ನಲುಗಿ 133 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ರಾಹುಲ್ (KL Rahul) ಏನು ಹೇಳಿದರು ಕೇಳಿ.

ಲಖನೌ ನಾಯಕ ಕೆಎಲ್ ರಾಹುಲ್ ತಂಡದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. “ಮೊದಲ ಇನ್ನಿಂಗ್ಸ್​ ನಾವು ಮುಗಿಸಿದ್ದು ಕೆಟ್ಟದಾಗಿತ್ತು. ಇದರಿಂದ ತುಂಬಾನೆ ಬೇಸರವಾಗಿದೆ. ಇದೊಂದು ಮೂರ್ಖತನದ ಬ್ಯಾಟಿಂಗ್. ಈ ಬಗ್ಗೆ ಚರ್ಚೆ ನಡೆಸಬೇಕಿದೆ,” ಎಂದು ಹೇಳಿದ್ದಾರೆ. “ಎರಡನೇ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಇದು ಅತ್ಯುತ್ತಮ ಪಿಚ್ ಅಲ್ಲದಿರುವುದರಿಂದ 160 ರನ್​ಗಳ ಒಳಗೆ ಎದುರಾಳಿಯನ್ನು ಕಟ್ಟಿಹಾಕಬಹುದೆಂದು ಯೋಚಿಸುದ್ದೆವು. ಬ್ಯಾಕ್​ಎಂಡ್​ನಲ್ಲಿನ ನಿರ್ಣಾಯಕ ರನ್​ಗಳು ಮತ್ತು ಬೌಲಿಂಗ್ ಮಾಡಿದ ರೀತಿ ನಮ್ಮ ಗೆಲುವಿಗೆ ಕಾರಣವಾಯಿತು. ನಮ್ಮ ಬ್ಯಾಟಿಂಗ್ ವಿಭಾಗ ಇನ್ನಷ್ಟು ಸುಧಾರಿಸಬೇಕಿದೆ. ಡಿಕಾಕ್ ಮತ್ತು ಹೂಡ ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಕಠಿಣ ಪಿಚ್​ನಲ್ಲಿ 9 ಓವರ್​ಗೆ 60 ರನ್ ಗಳಿಸಿದ್ದು ಗ್ರೇಟ್. ಅದೇರೀತಿ ನಾವು ಬ್ಯಾಟಿಂಗ್ ಮುಂದುವರೆಸುತ್ತಿದ್ದರೆ 180-190 ಟಾರ್ಗೆಟ್ ನೀಡಬಹುದಿತ್ತು,” ಎಂದು ಹೇಳಿದ್ದಾರೆ.

ಮಾತು ಮುಂದುವರೆಸಿದ ಅವರು, “ಬೌಲಿಂಗ್ ಮೂಲಕ ಎದುರಾಳಿಗೆ ಉತ್ತರ ಕೊಟ್ಟಿದ್ದು ಅದ್ಭುತವಾಗಿತ್ತು. ಈ ಟೂರ್ನಮೆಂಟ್​​ನಲ್ಲಿ ಕ್ರುನಾಲ್ ಪಾಂಡ್ಯ ಅತ್ಯುತ್ತಮ ಬೌಲಿಂಗ್ ಮಾಡಿದ್ದಾರೆ. ಈ ಸೀಸನ್​ನಲ್ಲಿ ಅವರು ಬೌಲಿಂಗ್ ಬಗ್ಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಬೌಲಿಂಗ್ ಎಕಾನಮಿ ಮುಖ್ಯ, ಮಧ್ಯಮ ಓವರ್​ನಲ್ಲಿ ಅವರು ನಮಗೆ ಎರಡು ಮೂರು ಪ್ರಮುಖ ವಿಕೆಟ್​ಗಳನ್ನು ತೆಗೆದುಕೊಟ್ಟರು. ರವಿ ಬಿಷ್ಟೋಯ್ ಆಕ್ರಮಣಕಾರಿ ಬೌಲರ್. ಕೆಲ ಸಿಕ್ಸ್-ಫೋರ್ ಅವರ ಓವರ್​ನಲ್ಲಿ ಹೋಗಿದ್ದರೂ ತೊಂದರೆಯಿಲ್ಲ, ಅದು ವಿಕೆಟ್​ ಪಡೆಯಲು ಮಾಡಿದ ತಂತ್ರ. ನಮ್ಮ ಫೀಲ್ಡಿಂಗ್ ಕೂಡ ಚೆನ್ನಾಗಿತ್ತು. ಕೆಟ್ಟ ಹೊಡೆತಕ್ಕೆ ಮಾರು ಹೋಗದೆ ನೋಡಿ ಆಡಿದರೆ ಇನ್ನಷ್ಟು ಚೆನ್ನಾಗಿ ಬ್ಯಾಟಿಂಗ್ ಮಾಡಬಹುದಿತ್ತು,” ಎಂಬುದು ರಾಹುಲ್ ಮಾತು.

ಸೋತ ತಂಡದ ನಾಯಕ ಮಯಾಂಕ್ ಅಗರ್ವಾಲ್ ಮಾತನಾಡಿ, “ನಾವು ವಿಕೆಟ್​ಗಳನ್ನು ಕಳೆದುಕೊಳ್ಳದೆ ಹಿಡಿದಿಟ್ಟುಕೊಳ್ಳಬೇಕಿತ್ತು. ಒಬ್ಬ ಸೆಟಲ್ ಆದ ಬ್ಯಾಟ್ಸ್​ಮನ್​ನ ಅಗತ್ಯವಿತ್ತು. ನಮ್ಮ ಬ್ಯಾಟಿಂಗ್ ಕೆಟ್ಟದಾಗಿತ್ತು. ಹೊಸ ಬಾಲ್​​ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ಚೆಂಡು ಚೆನ್ನಾಗಿ ಸ್ವಿಂಗ್ ಮತ್ತು ಬೌನ್ಸ್ ಆಗುತ್ತಿದ್ದ ಕಾರಣ ಇದನ್ನು ಎಚ್ಚರಿಕೆಯಿಂದ ಎದುರಿಸಿದರೆ ನಾವು ಮುಂದೆ ಸಾಗಬಹುದಿತ್ತು. ಆದರೆ, ನಮ್ಮ ಬೌಲಿಂಗ್ ಯುನಿಟ್ ಉತ್ತಮವಾಗಿತ್ತು. ಅರ್ಶ್​ದೀಪ್, ರಾಹುಲ್ ಚಹರ್ ಮತ್ತು ಕಗಿಸೊ ರಬಾಡ ಮಾರಕ ದಾಳಿ ಮಾಡಿದರು,” ಎಂದು ಹೇಳಿದ್ದಾರೆ.

PBKS vs LSG: ಲಖನೌ ಬೌಲರ್​ಗಳ ಕಠಿಣ ಶ್ರಮಕ್ಕೆ ಸಿಕ್ಕ ಫಲ: ರಾಹುಲ್ ಪಡೆಯ ಪ್ಲೇ ಆಫ್ ಹಾದಿ ಕೊಂಚ ಸುಗಮ

Follow us on

Related Stories

Most Read Stories

Click on your DTH Provider to Add TV9 Kannada