KL Rahul: ಭರ್ಜರಿ ಅಭ್ಯಾಸ ಆರಂಭಿಸಿದ ಕೆಎಲ್ ರಾಹುಲ್
Team India: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್
ಟೀಮ್ ಇಂಡಿಯಾದ (Team India) ಆರಂಭಿಕ ಆಟಗಾರ ಕೆಎಲ್ ರಾಹುಲ್ (KL Rahul) ಕಂಬ್ಯಾಕ್ ಮಾಡಲು ಭರ್ಜರಿ ಅಭ್ಯಾಸವನ್ನು ಆರಂಭಿಸಿದ್ದಾರೆ. ಸೌತ್ ಆಫ್ರಿಕಾ ವಿರುದ್ದದ ಸರಣಿಗೂ ಮುನ್ನ ಗಾಯಗೊಂಡಿದ್ದ ಕೆಎಲ್ ರಾಹುಲ್ ಆ ಬಳಿಕ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಇತ್ತೀಚೆಗೆ ಜರ್ಮನಿಯಲ್ಲಿ ಕ್ರೀಡಾ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಅವರು ಸಂಪೂರ್ಣ ಫಿಟ್ ಆಗಿದ್ದು, ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಗಾಗಿ ಅಭ್ಯಾಸವನ್ನು ಆರಂಭಿಸಿದ್ದಾರೆ. ವಿಂಡೀಸ್ ವಿರುದ್ದದ ಏಕದಿನ ಸರಣಿ ಮೊದಲು ನಡೆಯಲಿದ್ದು, ಒನ್ಡೇ ತಂಡಕ್ಕೆ ರಾಹುಲ್ ಆಯ್ಕೆಯಾಗಿಲ್ಲ. ಇದಾಗ್ಯೂ ಟಿ20 ಸರಣಿಗಾಗಿ ಆಯ್ಕೆ ಮಾಡಲಾದ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಸಿಸಿಐ ಇತ್ತೀಚೆಗೆ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಆದರೆ, ಫಿಟ್ ನೆಸ್ ಸಾಬೀತುಪಡಿಸುವಂತೆ ಕೆಎಲ್ ರಾಹುಲ್ಗೆ ತಿಳಿಸಲಾಗಿದೆ. ಹೀಗಾಗಿ ಕೆಎಲ್ಆರ್ ಅಭ್ಯಾಸವನ್ನು ಆರಂಭಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅವರು ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಕೆಎಲ್ ರಾಹುಲ್ ಅವರ ಫ್ಯಾನ್ ಪೇಜ್ ಶೇರ್ ಮಾಡಿದೆ. ಮೇಲ್ನೋಟಕ್ಕೆ ಕೆಎಲ್ ರಾಹುಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಈ ಮೂಲಕ ಫಿಟ್ನೆಸ್ ಸಾಬೀತುಪಡಿಸಿ ವೆಸ್ಟ್ ಇಂಡೀಸ್ಗೆ ತೆರಳುವ ಇರಾದೆಯಲ್ಲಿದ್ದಾರೆ ಕೆಎಲ್ ರಾಹುಲ್.
ಇತ್ತೀಚೆಗೆ ಮುಗಿದ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಕೆಎಲ್ ರಾಹುಲ್ ನಾಯಕನಾಗಿ ಆಯ್ಕೆಯಾಗಿದ್ದರು. ಆದರೆ, ತೊಡೆಸಂದು ಗಾಯದಿಂದಾಗಿ ಈ ಸರಣಿಯಿಂದ ಹೊರಗುಳಿದಿದ್ದರು . ಅಲ್ಲದೆ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಮರು ನಿಗದಿತ ಐದನೇ ಟೆಸ್ಟ್‌ನಲ್ಲಿಯೂ ಆಡಲು ಸಾಧ್ಯವಾಗಲಿಲ್ಲ. ಹಾಗೆಯೇ ಇಂಗ್ಲೆಂಡ್ ವಿರುದ್ದದ ಸೀಮಿತ ಓವರ್ಗಳ ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದರು. ಇದೀಗ ವೆಸ್ಟ್ ಇಂಡೀಸ್ ವಿರುದ್ದದ ಪಂದ್ಯದ ಮೂಲಕ ಟೀಮ್ ಇಂಡಿಯಾ ಪರ ಬ್ಯಾಟ್ ಬೀಸಲು ಸಿದ್ದತೆಗಳನ್ನು ಶುರು ಮಾಡಿಕೊಂಡಿದ್ದಾರೆ.
#KLRAHUL backs to nets.Started practicing Ahead of #IndvsWI series. pic.twitter.com/JRhT8A1Ngl
— KLRAHUL TRENDS™ (@KLRahulTrends_) July 16, 2022
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.