ನ್ಯೂಜಿಲೆಂಡ್ ಕ್ರಿಕೆಟ್ ತಂಡದ ವೇಗದ ಬೌಲರ್ ಕೈಲ್ ಜೇಮಿಸನ್ ಈ ಬಾರಿಯ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ಜೇಮಿಸನ್ ಬಹಿರಂಗಪಡಿಸಿದ್ದಾರೆ. ಕ್ವಾರಂಟೈನ್ ಮತ್ತು ಬಯೋ ಬಬಲ್ ಕಾರಣದಿಂದಾಗಿ ಮತ್ತು ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯಲು ಐಪಿಎಲ್ನಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ. ಅಷ್ಟೇ ಅಲ್ಲದೆ ಈ ಅವಧಿಯಲ್ಲಿ ತನ್ನ ಆಟವನ್ನು ಕೂಡ ಸುಧಾರಿಸಬೇಕೆಂದಿರುವೆ ಎಂದು ಜೇಮಿಸನ್ ತಿಳಿಸಿದ್ದಾರೆ. ಕಳೆದ ವರ್ಷ ಐಪಿಎಲ್‌ನಲ್ಲಿ ಜೇಮಿಸನ್ ಎರಡನೇ ಅತ್ಯಂತ ದುಬಾರಿ ಆಟಗಾರರಾಗಿದ್ದರು. ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 15 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಈ ಸೀಸನ್ನಲ್ಲಿ ಮಿಂಚಿರಲಿಲ್ಲ. ಏಕೆಂದರೆ RCB ಪರ ಒಂಬತ್ತು ಪಂದ್ಯಗಳನ್ನು ಆಡಿದ್ದ ಜೇಮಿಸನ್ ಒಂಬತ್ತು ವಿಕೆಟ್ಗಳನ್ನು ಮಾತ್ರ ಪಡೆದಿದ್ದರು. ಅಂದರೆ, ಅವರ ಒಂದು ವಿಕೆಟ್ ಆರ್‌ಸಿಬಿಗೆ 1.66 ಕೋಟಿ ರೂ. ನೀಡಿತ್ತು ಎನ್ನಬಹುದು.
ಈ ಬಾರಿ ಐಪಿಎಲ್‌ನಲ್ಲಿ ಭಾಗವಹಿಸದಿರುವ ಬಗ್ಗೆ ಮಾತನಾಡಿದ ಜೇಮಿಸನ್ ‘ನಾನು ಅನೇಕ ಕಾರಣಗಳಿಗಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಕಳೆದ ಹನ್ನೆರಡು ತಿಂಗಳುಗಳಿಂದ ಬಯೋ ಬಬಲ್ ಮತ್ತು ಕ್ವಾರಂಟೈನ್‌ನಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದೇನೆ. ಮುಂದಿನ 12 ತಿಂಗಳ ವೇಳಾಪಟ್ಟಿಯನ್ನು ನೋಡಿದರೆ, ಈಗ ನಾನು ಕುಟುಂಬದೊಂದಿಗೆ ಸಮಯ ಕಳೆಯಲು ಬಯಸುತ್ತೇನೆ. ಎರಡನೆಯದಾಗಿ, ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ತುಂಬಾ ಹೊಸಬ. ನಾನು ಆಟದಲ್ಲಿ ಮತ್ತಷ್ಟು ಸುಧಾರಿಸಬೇಕಿದೆ. ನೀವು ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಲು ಬಯಸಿದರೆ, ನೀವು ಕಠಿಣ ಪರಿಶ್ರಮ ಮಾಡಬೇಕಿದೆ. ಹೀಗಾಗಿ ನಾನು ಈ ಬಾರಿಯ ಐಪಿಎಲ್ನಿಂದ ಹೊರಗುಳಿಯಲು ನಿರ್ಧರಿಸಿದ್ದೇನೆ ಎಂದು ಜೇಮಿಸನ್ ತಿಳಿಸಿದರು.
ಫೆಬ್ರವರಿ 2020 ರಲ್ಲಿ ಭಾರತದ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಜೇಮಿಸನ್ 12 ಟೆಸ್ಟ್, ಐದು ಏಕದಿನ ಮತ್ತು ಎಂಟು ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದಾಗ್ಯೂ ಈ ಬಾರಿ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳದಿರಲು ಬಯಸಿರುವ ಜೇಮಿಸನ್ ಭವಿಷ್ಯದಲ್ಲಿ ಲೀಗ್‌ನ ಭಾಗವಾಗಲಿದ್ದೇನೆ ಎಂದು ತಿಳಿಸಿದ್ದಾರೆ. ‘ಆರಂಭದಲ್ಲಿ ಇದು ತುಂಬಾ ಕಷ್ಟಕರವಾದ ನಿರ್ಧಾರವಾಗಿತ್ತು. ನಾನು ಈ ಬಗ್ಗೆ ತುಂಬಾ ಯೋಚಿಸಿದೆ. ಆದರೆ ನಾನು ನನ್ನ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಲು ಮತ್ತು ನನ್ನ ಆಟವನ್ನು ಸುಧಾರಿಸಲು ಬಯಸುತ್ತೇನೆ. ಹೀಗಾಗಿ ಈ ನಿರ್ಧಾರ ತೆಗೆದುಕೊಂಡೆ ಎಂದು ಜೇಮಿಸನ್ ಹೇಳಿದ್ದಾರೆ.
ಐಪಿಎಲ್ ಅನುಭವದ ಬಗ್ಗೆ ಜೇಮಿಸನ್ ಹೇಳಿದ್ದೇನು?
ಐಪಿಎಲ್‌ನಲ್ಲಿ ಆಡಿದ ಅನುಭವದ ಬಗ್ಗೆ ಮಾತನಾಡಿದ ಕೈಲ್ ಜೇಮಿಸನ್, ‘ಇದು ಒಳ್ಳೆಯದು ಅಥವಾ ಕೆಟ್ಟದು ಎಂದು ನಾನು ಭಾವಿಸುವುದಿಲ್ಲ. ಅದೊಂದು ಪಾಠ, ಇನ್ನೊಂದು ಅನುಭವ. ಇದು ನನ್ನ ಜೀವನವನ್ನು ಬದಲಾಯಿಸಿದೆ. ಟಿ20 ಕ್ರಿಕೆಟ್‌ನ ಬಗ್ಗೆ ಈಗ ಸಾಕಷ್ಟು ತಿಳಿದಿದೆ. ಆಟದ ಸಮಯದಲ್ಲಿ ಅನೇಕ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ನಾನು ಈಗ ಅವರನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ನನ್ನ ಆಟ ಎಲ್ಲಿದೆ ಮತ್ತು ನಾನು ಎಲ್ಲಿ ಕೆಲಸ ಮಾಡಬೇಕೆಂದು ನನಗೆ ತಿಳಿದಿದೆ. ಕಳೆದ 12 ತಿಂಗಳುಗಳಲ್ಲಿ ಯೋಗ್ಯ ಟಿ20 ಕ್ರಿಕೆಟ್ ಆಡಿದ್ದೇನೆ. ಇದರಿಂದ ಬಹಳಷ್ಟು ಕಲಿಯಲು ಸಹಾಯವಾಗಿದೆ ಎಂದು ಜೇಮಿಸನ್ ತಿಳಿಸಿದರು.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ
ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್
(Kyle jamieson reveals why he skip IPL 2022 auction)