
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಸ್ಥಾನಕ್ಕೆ ಕುತ್ತು ಬಂದಿದ್ದು, ಅವರ ಜಾಗಕ್ಕೆ ಭಾರತದ ಮಾಜಿ ದಿಗ್ಗಜ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರನ್ನು ನೇಮಿಸಲು ಮಂಡಳಿ ಗಂಭೀರ ಚಿಂತನೆ ನಡೆಸುತ್ತಿದೆ. ಇತ್ತೀಚಿನ ಆಂತರಿಕ ಭಿನ್ನಾಭಿಪ್ರಾಯಗಳು ಹಾಗೂ ರೋಹಿತ್ ಶರ್ಮಾ ಅವರ ಭವಿಷ್ಯಕ್ಕೆ ಸಂಬಂಧಿಸಿದ ವಿವಾದಗಳ ಬೆನ್ನಲ್ಲೇ ಈ ಹೊಚ್ಚ ಹೊಸ ಬೆಳವಣಿಗೆ ಮುಂಚೂಣಿಗೆ ಬಂದಿದೆ.
ಪ್ರಸ್ತುತ ಮಾಹಿತಿ ಪ್ರಕಾರ, ಬಿಸಿಸಿಐ ಆಯ್ಕೆ ಸಮಿತಿಯ ಪುನರ್ರಚನೆಗೆ ತೆರೆಮರೆಯಲ್ಲಿ ಭಾರಿ ಸಿದ್ಧತೆಗಳು ನಡೆಯುತ್ತಿವೆ. ಈ ಪುನರ್ರಚನೆ ವೇಳೆಗೆ ಆಯ್ಕೆ ಸಮಿತಿಯ ಮುಖ್ಯಸ್ಥನ ಸ್ಥಾನವನ್ನು ಬದಲಿಸಲು ಮುಂದಾಗಿದೆ. ಇದಕ್ಕೆ ಮುಖ್ಯ ಕಾರಣ ಇತ್ತೀಚಿನ ವಿವಾದ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ನಂತರ ಆಯ್ಕೆ ಸಮಿತಿ ಮತ್ತು ಬಿಸಿಸಿಐ ಉನ್ನತ ಅಧಿಕಾರಿಗಳ ನಡುವೆ ಹೊಂದಾಣಿಕೆಯ ಕೊರತೆ ಎದ್ದುಕಂಡಿತ್ತು. 2027ರ ಏಕದಿನ ವಿಶ್ವಕಪ್‌ನಿಂದ ರೋಹಿತ್ ಶರ್ಮಾ ಅವರನ್ನು ಕೈಬಿಡುವ ಅಥವಾ ಹಂತಹಂತವಾಗಿ ಹೊರಗಿಡುವ ಬಗ್ಗೆ ಅಗರ್ಕರ್ ನೇತೃತ್ವದ ಸಮಿತಿ ಯೋಚಿಸುತ್ತಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಸೋರಿಕೆಯಾಗಿತ್ತು.
ಆದರೆ ಬಿಸಿಸಿಐ ಜಂಟಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು, “ರೋಹಿತ್ ಶರ್ಮಾ ನಮ್ಮ ಮುಂದಿನ ಯೋಜನೆಗಳ ಪ್ರಮುಖ ಭಾಗ” ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡುವ ಮೂಲಕ ಆಯ್ಕೆಗಾರರ ನಿರ್ಧಾರಕ್ಕೆ ವಿರುದ್ಧ ನಿಲುವು ತಳೆದಿದ್ದರು. ಇದಾದ ಬೆನ್ನಲ್ಲೇ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ದು, ಅಗರ್ಕರ್ ಅವರ ಸ್ಥಾನವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.
ಪ್ರಸ್ತುತ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರು ಭಾರತೀಯ ಕ್ರಿಕೆಟ್‌ನಲ್ಲಿ ಅಪಾರ ಗೌರವ ಹೊಂದಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರಂತಹ ಹಿರಿಯ ಆಟಗಾರರೊಂದಿಗೆ ಮುಕ್ತವಾಗಿ ಸಂವಹನ ನಡೆಸಲು ಮತ್ತು ಕಠಿಣ ನಿರ್ಧಾರಗಳನ್ನು ಒಪ್ಪಿಸಲು ಲಕ್ಷ್ಮಣ್ ಅವರಂತಹ ದಿಗ್ಗಜನ ಸಮ್ಮುಖ ಅತ್ಯಗತ್ಯ ಎಂದು ಬಿಸಿಸಿಐ ಭಾವಿಸಿದೆ.
ಹಾಗೆಯೇ ಯುವ ಪ್ರತಿಭೆಗಳನ್ನು ಬೆಳೆಸಿದ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಮುನ್ನಡೆಸಿದ ದೀರ್ಘ ಅನುಭವ ಲಕ್ಷ್ಮಣ್ ಅವರಿಗಿದೆ. ಹೀಗಾಗಿ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥನ ಹುದ್ದೆಗೆ ವಿವಿಎಸ್ ಲಕ್ಷ್ಮಣ್ ಅವರನ್ನು ಪರಿಗಣಿಸಿದ್ದಾರೆ ಎಂದು ವರದಿಯಾಗಿದೆ.
ಅಜಿತ್ ಅಗರ್ಕರ್ ಅವರ ಅಧಿಕೃತ ಅವಧಿ ಜೂನ್ 2026ಕ್ಕೆ ಮುಕ್ತಾಯಗೊಂಡಿತ್ತಾದರೂ, ಮಂಡಳಿಯು ಅವರಿಗೆ ಸೆಪ್ಟೆಂಬರ್ 2026ರವರೆಗೆ 3 ತಿಂಗಳ ಅಲ್ಪಾವಧಿ ವಿಸ್ತರಣೆ ನೀಡಿತ್ತು. ಮೊದಲು ಅವರನ್ನು 2027ರ ವಿಶ್ವಕಪ್‌ವರೆಗೂ ಮುಂದುವರಿಸುವ ಯೋಚನೆ ಇತ್ತಾದರೂ, ಸದ್ಯದ ಪರಿಸ್ಥಿತಿಯಲ್ಲಿ ಅದು ಕಷ್ಟಸಾಧ್ಯ ಎನ್ನಲಾಗುತ್ತಿದೆ.
ಇದನ್ನೂ ಓದಿ: ಗೌತಮ್ ಗಂಭೀರ್ ವಿರುದ್ಧ ತಿರುಗಿ ನಿಂತ ಟೀಮ್ ಇಂಡಿಯಾ ಆಟಗಾರರು!
ಸೆಪ್ಟೆಂಬರ್ 2026ರಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ (AGM) ಭಾರತದ ಮುಂದಿನ ಮುಖ್ಯ ಆಯ್ಕೆಗಾರ ಯಾರು ಎಂಬ ಬಗ್ಗೆ ಅಧಿಕೃತ ಮುದ್ರೆ ಬೀಳಲಿದೆ. ಲಕ್ಷ್ಮಣ್ ಜೊತೆಗೆ ರವಿಶಾಸ್ತ್ರಿ ಮತ್ತು ರವಿಚಂದ್ರನ್ ಅಶ್ವಿನ್ ಅವರ ಹೆಸರುಗಳೂ ಕೂಡ ಹರಿದಾಡುತ್ತಿವೆ. ಹೀಗಾಗಿ ಬಿಸಿಸಿಐ ಅಂತಿಮವಾಗಿ ಯಾರನ್ನು ಆಯ್ಕೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.