IND vs ENG: ಬೇಗ ರೆಡಿ ಆಗು ಗುರು; ಇಂಗ್ಲೆಂಡ್‌ ಬ್ಯಾಟ್ಸ್‌ಮನ್ ತಂತ್ರಕ್ಕೆ ಸಿರಾಜ್ ಗರಂ

Heated Leeds Test: ಲೀಡ್ಸ್‌ನಲ್ಲಿ ನಡೆದ ಐದನೇ ದಿನದ ಟೆಸ್ಟ್ ಪಂದ್ಯದ ಮೊದಲ ಸೆಷನ್‌ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಜ್ಯಾಕ್ ಕ್ರೌಲಿ ಊಟಕ್ಕೂ ಮುನ್ನ ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ ಮಾಡಿದ್ದು, ಮೊಹಮ್ಮದ್ ಸಿರಾಜ್ ಜೊತೆ ಘರ್ಷಣೆಗೆ ಕಾರಣವಾಯಿತು. ಇದು ಭಾರತೀಯ ತಂಡದಲ್ಲಿ ಅಸಮಾಧಾನವನ್ನು ಉಂಟುಮಾಡಿತು. ಕ್ರೌಲಿಯ ತಂತ್ರ ಯಶಸ್ವಿಯಾದರೂ, ಸಾಮಾಜಿಕ ಮಾಧ್ಯಮದಲ್ಲಿ ಇದನ್ನು ಟೀಕಿಸಲಾಗುತ್ತಿದೆ.

IND vs ENG: ಬೇಗ ರೆಡಿ ಆಗು ಗುರು; ಇಂಗ್ಲೆಂಡ್‌ ಬ್ಯಾಟ್ಸ್‌ಮನ್ ತಂತ್ರಕ್ಕೆ ಸಿರಾಜ್ ಗರಂ
Ind Vs Eng

Updated on: Jun 24, 2025 | 6:47 PM

ಲೀಡ್ಸ್ ಟೆಸ್ಟ್‌ನ (Leeds Test Match) ಐದನೇ ದಿನದ ಮೊದಲ ಸೆಷನ್ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಹೆಸರಿನಲ್ಲಿತ್ತು. ಊಟದ ವಿರಾಮದ ವೇಳೆಗೆ, ಇಂಗ್ಲೆಂಡ್ ಯಾವುದೇ ವಿಕೆಟ್ ಕಳೆದುಕೊಳ್ಳದೆ 117 ರನ್ ಗಳಿಸಿದ್ದು, ವಿಕೆಟ್ ಉರುಳಿಸುವುದೇ ಭಾರತೀಯ ಬೌಲರ್‌ಗಳಿಗೆ ಸವಾಲಾಗಿ ಪರಿಣಮಿಸಿದೆ. ಆದರೆ ಊಟದ ವಿರಾಮಕ್ಕೂ ಸ್ವಲ್ಪ ಮೊದಲು ಬೌಲ್ ಮಾಡಿದ ಕೊನೆಯ ಓವರ್‌ನಲ್ಲಿ, ಮೊಹಮ್ಮದ್ ಸಿರಾಜ್ (Mohammad Siraj) ಮತ್ತು ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜ್ಯಾಕ್ ಕ್ರೌಲಿ (Jack Crawley) ನಡುವೆ ನಡೆದ ಘಟನೆಯು ಮೈದಾನದಲ್ಲಿ ಬಿಸಿಯಾದ ವಾತಾವರಣವನ್ನು ಸೃಷ್ಟಿಸಿತು. ಈ ಘಟನೆಯು ಆಟದ ತಂತ್ರದ ಒಂದು ಭಾಗ ಮಾತ್ರವಲ್ಲದೆ, ಎರಡೂ ತಂಡಗಳ ನಡುವಿನ ಉದ್ವಿಗ್ನತೆಯನ್ನು ಬಹಿರಂಗಪಡಿಸಿತು.

ಸ್ಟ್ರೈಕ್ ತೆಗೆದುಕೊಳ್ಳದ ಜ್ಯಾಕ್ ಕ್ರೌಲಿ

ಐದನೇ ದಿನದ ಮೊದಲ ಸೆಷನ್​ನಲ್ಲಿ ಇಂಗ್ಲೆಂಡ್‌ನ ಆರಂಭಿಕರಾದ ಜ್ಯಾಕ್ ಕ್ರೌಲಿ ಮತ್ತು ಬೆನ್ ಡಕೆಟ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಸೆಷನ್​ನಲ್ಲೊ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರಂತಹ ವೇಗದ ಬೌಲರ್‌ಗಳು ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ್ದಲ್ಲದೆ, ರನ್‌ರೇಟ್ ಅನ್ನು ಸಹ ಕಾಯ್ದುಕೊಂಡರು. ಆದಾಗ್ಯೂ ಊಟಕ್ಕೆ ಹೋಗುವ ಮುನ್ನ ನಡೆದ ಅದೊಂದು ಘಟನೆ ಮೈದಾನದಲ್ಲಿ ಬಿಸಿ ವಾತಾವರಣವನ್ನು ಸೃಷ್ಟಿಸಿತು.

ವಾಸ್ತವವಾಗಿ, ಮೊಹಮ್ಮದ್ ಸಿರಾಜ್ ಊಟಕ್ಕೆ ಸ್ವಲ್ಪ ಮೊದಲು ಕೊನೆಯ ಓವರ್ ಬೌಲ್ ಮಾಡುತ್ತಿದ್ದರು. ಭಾರತ ತಂಡದ ತಂತ್ರವೆಂದರೆ ಊಟದ ಸಮಯಕ್ಕೂ ಮೊದಲು ಇನ್ನೊಂದು ಓವರ್ ಬೌಲ್ ಮಾಡುವುದು, ಇದರಿಂದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರಬಹುದು. ಹೀಗಾಗಿ ಸಿರಾಜ್ ಈ ಓವರ್ ಅನ್ನು ವೇಗವಾಗಿ ಪೂರ್ಣಗೊಳಿಸಲು ಪ್ರಯತ್ನಿಸಿದರು ಮತ್ತು ರನ್-ಅಪ್‌ನಲ್ಲಿ ವೇಗವಾಗಿ ಓಡಿ ತಮ್ಮ ಕೊನೆಯ ಎಸೆತವನ್ನು ಬೌಲ್ ಮಾಡಲು ಮುಂದಾದರು. ಆದರೆ ಈ ವೇಳೆ ಸ್ಟ್ರೈಕ್​ನಲ್ಲಿದ್ದ ಜ್ಯಾಕ್ ಕ್ರೌಲಿ ಉದ್ದೇಶಪೂರ್ವಕವಾಗಿ ಕ್ರೀಸ್‌ನಿಂದ ದೂರ ಸರಿದರು. ವಾಸ್ತವವಾಗಿ ಕ್ರೌಲಿ ಸಮಯವನ್ನು ವ್ಯರ್ಥಗೊಳಿಸಲು ಹೀಗೆ ಮಾಡಿದರು. ಹೀಗೆ ಮಾಡುವುದರಿಂದ ಭಾರತ ತಂಡಕ್ಕೆ ಮತ್ತೊಂದು ಓವರ್ ಬೌಲ್ ಮಾಡಲು ಸಾಧ್ಯವಾಗುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಕ್ರೌಲಿ ಸಮಯ ವ್ಯರ್ಥ ಮಾಡಿದರು. ಅಂತಿಮವಾಗಿ ಕ್ರೌಲಿ ತಂತ್ರ ಫಲ ನೀಡಿದ್ದು, ಊಟಕ್ಕೂ ಮೊದಲು ಟೀಂ ಇಂಡಿಯಾಕ್ಕೆ ಮತ್ತೊಂದು ಓವರ್ ಮಾಡಲು ಸಾಧ್ಯವಾಗಲಿಲ್ಲ.

IND vs ENG Test: ಲೀಡ್ಸ್ ಟೆಸ್ಟ್‌ನ ಕೊನೆಯ ದಿನದಂದು ಆಟಗಾರರು ಕಪ್ಪು ಪಟ್ಟಿ ಧರಿಸಿದ್ದೇಕೆ?: ಇಲ್ಲಿದೆ ಕಾರಣ

ಕೋಪಗೊಂಡ ಟೀಂ ಇಂಡಿಯಾ ಆಟಗಾರರು

ಕ್ರೌಲಿ ಅವರ ಈ ನಡೆ ಭಾರತೀಯ ಪಾಳಯದಲ್ಲಿ ಅಸಮಾಧಾನವನ್ನು ಉಂಟುಮಾಡಿತು. ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾದ ಸಿರಾಜ್, ಕ್ರೌಲಿ ಅವರ ಈ ನಡೆಗೆ ಅಸಮಾಧಾನಗೊಂಡರು. ಕ್ರಾಲಿಯ ಈ ನಡೆಯ ಬಗ್ಗೆ ಭಾರತದ ನಾಯಕ ಶುಭ್​ಮನ್ ಗಿಲ್ ಮತ್ತು ಉಳಿದ ಆಟಗಾರರು ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಮೈದಾನದಲ್ಲಿ ಕೆಲವು ಕ್ಷಣಗಳ ಕಾಲ ಉದ್ವಿಗ್ನ ವಾತಾವರಣವಿತ್ತು, ಇದು ಇನ್ನಷ್ಟು ಚರ್ಚೆಯ ವಿಷಯವಾಯಿತು. ಆದಾಗ್ಯೂ, ಇದು ಯಾವುದೇ ನಿಯಮಕ್ಕೆ ವಿರುದ್ಧವಾಗಿರಲಿಲ್ಲ. ಹಲವು ಬಾರಿ ಆಟಗಾರರು ಇದನ್ನು ತಂತ್ರದ ಭಾಗವಾಗಿ ಮಾಡುತ್ತಾರೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ, ಭಾರತೀಯ ಅಭಿಮಾನಿಗಳು ಈ ಘಟನೆಯನ್ನು ಟೀಕಿಸುತ್ತಿದ್ದು, ಇಂಗ್ಲೆಂಡ್ ಬ್ಯಾಟ್ಸ್‌ಮನ್​ ಮೇಲೆ ಅಪ್ರಾಮಾಣಿಕತೆಯ ಆರೋಪ ಮಾಡುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:41 pm, Tue, 24 June 25