
ಲೀಡ್ಸ್ ಟೆಸ್ಟ್‌ನಲ್ಲಿ (Leeds Test) ಟೀಂ ಇಂಡಿಯಾ ಸೋಲುವ ಭೀತಿಯಲ್ಲಿದೆ. ತಂಡದ ಈ ಭೀತಿಗೆ ಕಳಪೆ ಫೀಲ್ಡಿಂಗ್ ಕಾರಣವೆನ್ನಬಹುದು. ಮೊದಲ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 5 ಕ್ಯಾಚ್ಗಳನ್ನು ಕೈಚೆಲ್ಲಿದ್ದ ಟೀಂ ಇಂಡಿಯಾ 2ನೇ ಇನ್ನಿಂಗ್ಸ್ನಲ್ಲೂ ಅದೇ ಪ್ರವೃತ್ತಿಯನ್ನು ಮುಂದುವರೆಸಿದೆ. ಅದರಲ್ಲೂ ಮೊದಲ ಇನ್ನಿಂಗ್ಸ್‌ನಲ್ಲಿ ಪ್ರಮುಖ 3 ಕ್ಯಾಚ್ ಬಿಟ್ಟಿದ್ದ ಜೈಸ್ವಾಲ್ (Yashasvi Jaiswal) 2ನೇ ಇನ್ನಿಂಗ್ಸ್ನಲ್ಲೂ ಪಂದ್ಯದ ಗತ್ತಿಯನ್ನೇ ಬದಲಿಸಬಹುದಾಗಿದ್ದ ಕ್ಯಾಚ್ ಅನ್ನು ಕೈಚೆಲ್ಲಿದ್ದಾರೆ. ವಾಸ್ತವವಾಗಿ ಇಂಗ್ಲೆಂಡ್ ಆರಂಭಿಕ ಬೆನ್ ಡಕೆಟ್ 97ರನ್ ಬಾರಿಸಿ ಆಡುತ್ತಿದ್ದಾಗ ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಬೌಂಡರಿ ಗೆರೆ ಬಳಿ ನಿಂತಿದ್ದ ಜೈಸ್ವಾಲ್ಗೆ ಕ್ಯಾಚ್ ನೀಡಿದರು. ಆದರೆ ಜೈಸ್ವಾಲ್ ಮತ್ತೊಮ್ಮೆ ಕ್ಯಾಚ್ ತೆಗೆದುಕೊಳ್ಳುವಲ್ಲಿ ವಿಫಲರಾದರು.
ವಾಸ್ತವವಾಗಿ ಇದೇ ಜೈಸ್ವಾಲ್ ಮೊದಲ ಇನ್ನಿಂಗ್ಸ್ನಲ್ಲೂ ಡಕೆಟ್ ಕ್ಯಾಚ್ ಕೈಚೆಲ್ಲಿದ್ದರು. ಇದರ ಲಾಭ ಪಡೆದಿದ್ದ ಡಕೆಟ್ ಅರ್ಧಶತಕದ ಇನ್ನಿಂಗ್ಸ್ ಆಡಿದ್ದರು. ಇದೀಗ ಎರಡನೇ ಇನ್ನಿಂಗ್ಸ್ನಲ್ಲೂ ಜೀವದಾನದ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಂಡಿರುವ ಡಕೆಟ್, ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಅಲ್ಲದೆ ಶತಕದ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿರುವ ಡಕೆಟ್, ಟೀಂ ಇಂಡಿಯಾವನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ.
Catches win Matches but Yashasvi Jaiswal was dropped 4 of them in this Match. 😢
📷 JioHotstar pic.twitter.com/WLh4Xno1ac
— CricketGully (@thecricketgully) June 24, 2025
ಲೀಡ್ಸ್ ಟೆಸ್ಟ್‌ನ ಐದನೇ ದಿನದಂದು 371 ರನ್‌ಗಳ ಗುರಿಯನ್ನು ಬೆನ್ನಟ್ಟುವುದು ಯಾವುದೇ ತಂಡಕ್ಕೆ ಸುಲಭವಲ್ಲ. ವಿಶೇಷವಾಗಿ ಎದುರಾಳಿ ತಂಡವು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರಂತಹ ಬೌಲರ್‌ಗಳನ್ನು ಹೊಂದಿರುವಾಗ. ಆದರೆ ಡಕೆಟ್ ಒತ್ತಡವನ್ನು ತಡೆದುಕೊಳ್ಳುವುದಲ್ಲದೆ, ತಮ್ಮ ಅತ್ಯುತ್ತಮ ತಂತ್ರ ಮತ್ತು ತಾಳ್ಮೆಯಿಂದ ಶತಕವನ್ನು ಪೂರೈದರು. ಕೇವಲ 121 ಎಸೆತಗಳಲ್ಲಿ 14 ಬೌಂಡರಿಗಳ ಸಹಿತ ಶತಕ ಪೂರೈಸಿದ್ದು ಅವರ ಆಕ್ರಮಣಕಾರಿ ಆಟಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
ಬೆನ್ ಡಕೆಟ್ ಇಂಗ್ಲೆಂಡ್ ತಂಡಕ್ಕೆ ಮೊದಲ ಇನ್ನಿಂಗ್ಸ್ನಲ್ಲೂ ಉತ್ತಮ ಆರಂಭ ನೀಡುವಲ್ಲಿ ಯಶಸ್ವಿಯಾಗಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಅವರು 94 ಎಸೆತಗಳಲ್ಲಿ 9 ಬೌಂಡರಿಗಳ ಸಹಿತ 62 ರನ್ ಗಳಿಸಿದ್ದರು. ಇದೀಗ ಅವರು ಶತಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ 15 ವರ್ಷಗಳಲ್ಲಿ ಇಂಗ್ಲಿಷ್ ಬ್ಯಾಟರ್ ಒಬ್ಬರು ನಾಲ್ಕನೇ ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿದ್ದು ಇದೇ ಮೊದಲು. ಇದಕ್ಕೂ ಮೊದಲು ಅಲಸ್ಟೈರ್ ಕುಕ್ ಈ ಸಾಧನೆ ಮಾಡಿದ್ದರು.
ಈ ಇನ್ನಿಂಗ್ಸ್‌ನಲ್ಲಿ ಬೆನ್ ಡಕೆಟ್ ಮತ್ತು ಜ್ಯಾಕ್ ಕ್ರೌಲಿ ಐತಿಹಾಸಿಕ ಜೊತೆಯಾಟವನ್ನು ಕಟ್ಟಿದರು. ಇಬ್ಬರೂ ಆಟಗಾರರು ಮೊದಲ ವಿಕೆಟ್‌ಗೆ 188 ರನ್‌ಗಳ ಜೊತೆಯಾಟವನ್ನಾಡಿದರು. 2000ನೇ ಇಸವಿಯ ನಂತರ ಆರಂಭಿಕ ಜೋಡಿ ಟೆಸ್ಟ್ ಪಂದ್ಯದಲ್ಲಿ ಇಷ್ಟೊಂದು ರನ್‌ಗಳ ಪಾಲುದಾರಿಕೆಯನ್ನು ಗಳಿಸಿದ್ದು ಇದೇ ಮೊದಲು. ಅದೇ ಸಮಯದಲ್ಲಿ, ಈ ಮೈದಾನದಲ್ಲಿ ಟೆಸ್ಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಇದು ಅತಿದೊಡ್ಡ ಪಾಲುದಾರಿಕೆಯಾಗಿದೆ. 1949 ರ ಆರಂಭದಲ್ಲಿ, ನ್ಯೂಜಿಲೆಂಡ್‌ನ ವರ್ಡನ್ ಸ್ಕಾಟ್ ಮತ್ತು ಬರ್ಟ್ ಸಟ್‌ಕ್ಲಿಫ್ ಜೋಡಿ ಲೀಡ್ಸ್ ಟೆಸ್ಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಮೊದಲ ವಿಕೆಟ್‌ಗೆ 112 ರನ್‌ಗಳ ಪಾಲುದಾರಿಕೆ ನಡೆಸಿ ದಾಖಲೆ ಬರೆದಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:59 pm, Tue, 24 June 25