ವಿಕೆಟ್​ಗಳ ಸಿಕ್ಸರ್​ ಸಿಡಿಸಿದ ಹಸರಂಗ; ಲೀಗ್​ನಿಂದ ಹೊರಬಿದ್ದ 3 ಬಾರಿಯ ಚಾಂಪಿಯನ್ ಜಾಫ್ನಾ ಕಿಂಗ್ಸ್

|

Updated on: Aug 18, 2023 | 3:38 PM

Wanindu Hasaranga: ಬಿ-ಲುವ್ ಕ್ಯಾಂಡಿ ತಂಡದ ವಿರುದ್ಧ 61 ರನ್‌ಗಳ ಸೋತ ಜಾಫ್ನಾ ಕಿಂಗ್ಸ್ ತಂಡ ನಾಲ್ಕನೇ ಬಾರಿಗೆ ಚಾಂಪಿಯನ್ ಆಗುವ ಅವಕಾಶವನ್ನು ಕಳೆದುಕೊಂಡಿತು. ಕ್ಯಾಂಡಿ ತಂಡದ ಪರ ಶ್ರೇಷ್ಠ ಪ್ರದರ್ಶನ ನೀಡಿದ ಶ್ರೀಲಂಕಾದ ಲೆಗ್ ಸ್ಪಿನ್ನರ್ ವನಿಂದು ಹಸರಂಗ 6 ವಿಕೆಟ್ ಪಡೆದು ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.

ವಿಕೆಟ್​ಗಳ ಸಿಕ್ಸರ್​ ಸಿಡಿಸಿದ ಹಸರಂಗ; ಲೀಗ್​ನಿಂದ ಹೊರಬಿದ್ದ 3 ಬಾರಿಯ ಚಾಂಪಿಯನ್ ಜಾಫ್ನಾ ಕಿಂಗ್ಸ್
ವನಿಂದು ಹಸರಂಗ
Follow us on

ಲಂಕಾ ಪ್ರೀಮಿಯರ್ ಲೀಗ್​ನಲ್ಲಿ (Lanka premier league) ಈ ಬಾರಿ ಹೊಸ ತಂಡ ಚಾಂಪಿಯನ್ ಪಟ್ಟಕ್ಕೇರುವುದು ಖಚಿತವಾಗಿದೆ. ಮೂರು ಬಾರಿ ಈ ಲೀಗ್‌ನಲ್ಲಿ ಪ್ರಶಸ್ತಿ ಗೆದ್ದಿರುವ ಜಾಫ್ನಾ ಕಿಂಗ್ಸ್ ತಂಡ ಗುರುವಾರ ಈ ಲೀಗ್‌ನಿಂದ ಹೊರಬಿದ್ದಿದೆ. ಬಿ-ಲುವ್ ಕ್ಯಾಂಡಿ ತಂಡದ ವಿರುದ್ಧ 61 ರನ್‌ಗಳ ಸೋತ ಜಾಫ್ನಾ ಕಿಂಗ್ಸ್ (jaffna kings vs B-love kandy) ತಂಡ ನಾಲ್ಕನೇ ಬಾರಿಗೆ ಚಾಂಪಿಯನ್ ಆಗುವ ಅವಕಾಶವನ್ನು ಕಳೆದುಕೊಂಡಿತು. ಕ್ಯಾಂಡಿ ತಂಡದ ಪರ ಶ್ರೇಷ್ಠ ಪ್ರದರ್ಶನ ನೀಡಿದ ಶ್ರೀಲಂಕಾದ ಲೆಗ್ ಸ್ಪಿನ್ನರ್ ವನಿಂದು ಹಸರಂಗ (Wanindu Hasaranga ) 6 ವಿಕೆಟ್ ಪಡೆದು ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕ್ಯಾಂಡಿ ತಂಡ ಎಂಟು ವಿಕೆಟ್ ಕಳೆದುಕೊಂಡು 188 ರನ್ ಟಾರ್ಗೆಟ್ ಸೆಟ್ ಮಾಡಿತು. ಈ ಗುರಿ ಬೆನ್ನಟ್ಟಿದ ಜಾಫ್ನಾ ತಂಡ ಹಸರಂಗ ದಾಳಿಗೆ ತತ್ತರಿಸಿ ಕೇವಲ 127 ರನ್‌ಗಳಿಗೆ ಆಲ್​ಔಟ್ ಆಯಿತು.

ಸೀಮಿತ ಓವರ್‌ಗಳತ್ತ ಗಮನ ಹರಿಸಲು ಹಸರಂಗ ಎರಡು ದಿನಗಳ ಹಿಂದೆ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಅಲ್ಲದೆ ಈ ಬಾರಿಯ ಲೀಗ್​ನಲ್ಲಿ ಕ್ಯಾಂಡಿ ತಂಡದ ನಾಯಕತ್ವವಹಿಸಿಕೊಂಡಿರುವ ಹಸರಂಗ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್​ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್​ನಲ್ಲೂ ಸಹ ಹಸರಂಗ ತಮ್ಮ ಮ್ಯಾಜಿಕ್ ತೋರಿದ್ದಾರೆ.

IND vs SL: ಲಂಕಾ ತಂಡಕ್ಕೆ ಮತ್ತಷ್ಟು ಹಿನ್ನಡೆ; ಮೊದಲ ಟಿ20ಯಿಂದ ಹಸರಂಗ ಜೊತೆ ಇನ್ನಿಬ್ಬರು ಆಟಗಾರರು ಔಟ್!

ವಿಕೆಟ್‌ಗಳ ಸಿಕ್ಸರ್ ಸಿಡಿಸಿದ ಹಸರಂಗ

ಈ ಪಂದ್ಯದಲ್ಲಿ ಆರು ವಿಕೆಟ್ ಪಡೆದ ಹಸರಂಗ ವಿಕೆಟ್​ಗಳ ಸಿಕ್ಸರ್ ಸಿಡಿಸಿ ಮಿಂಚಿದರು. ಈ ಪಂದ್ಯದಲ್ಲಿ ಹಸರಂಗ 3.2 ಓವರ್‌ ಬೌಲ್ ಮಾಡಿ ಕೇವಲ ಒಂಬತ್ತು ರನ್ ನೀಡಿ ಆರು ವಿಕೆಟ್‌ಗಳನ್ನು ಪಡೆದರು. 189 ರನ್‌ಗಳ ಗುರಿ ಬೆನ್ನತ್ತಿದ ಜಾಫ್ನಾ ತಂಡಕ್ಕೆ ಚರಿತಾ ಅಸಲಂಗಾ ರೂಪದಲ್ಲಿ ಮೊದಲ ಪೆಟ್ಟು ಬಿತ್ತು. ಆ ಬಳಿಕ ಮುಜೀಬ್ ಉರ್ ರೆಹಮಾನ್ ಕೂಡ ಬೇಗನೇ ಔಟಾದರು. ಇದಾದ ಬಳಿಕ ದುನಿತ್ ವೆಲಾಲ್ಗೆ ಅವರನ್ನು ಔಟ್ ಮಾಡುವ ಮೂಲಕ ಮೊದಲ ವಿಕೆಟ್ ಕಬಳಿಸಿದ ಹಸರಂಗ ಇಲ್ಲಿಂದ ಸರಣಿ ವಿಕೆಟ್ ಪಡೆದರು. ಏಳನೇ ಓವರ್​ನ ಮೂರನೇ ಎಸೆತದಲ್ಲಿ ಖಾತೆ ತೆರೆದ ಅವರು ಐದನೇ ಎಸೆತದಲ್ಲಿ ಕ್ರಿಸ್ ಲಿನ್ (19) ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು.

13ನೇ ಓವರ್​ನಲ್ಲಿ ಮತ್ತೆ ಬೌಲಿಂಗ್​ಗೆ ಮರಳಿದ ಹಸರಂಗ ಎರಡನೇ ಎಸೆತದಲ್ಲಿ ಡೇವಿಡ್ ಮಿಲ್ಲರ್​ಗೆ ಪೆವಿಲಿಯನ್ ಹಾದಿ ತೋರಿಸಿದರು. ಡೇವಿಡ್ ಮಿಲ್ಲರ್ ಕೇವಲ 26 ರನ್ ಗಳಿಸಲಷ್ಟೇ ಶಕ್ತರಾದರು. ಒಂದು ಎಸೆತದ ನಂತರ ಅಸೆಲಾ ಗುಣರತ್ನೆ ಕೂಡ ಹಸರಂಗಗೆ ಬಲಿಯಾದರು.18ನೇ ಓವರ್‌ನಲ್ಲಿ ಮತ್ತೆ ದಾಳಿಗಿಳಿದ ಹಸರಂಗ ಆರಂಭಿಕ ಎರಡೂ ಎಸೆತಗಳಲ್ಲಿ ವಿಕೆಟ್‌ಗಳನ್ನು ಕಬಳಿಸಿ ತಂಡಕ್ಕೆ ಜಯ ತಂದುಕೊಟ್ಟರು. ಇದು ಎಲ್‌ಪಿಎಲ್‌ನಲ್ಲಿ ಯಾವುದೇ ಬೌಲರ್‌ನ ಅತ್ಯುತ್ತಮ ಪ್ರದರ್ಶನವಾಗಿದೆ.

ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಹ್ಯಾರಿಸ್

ಇದಕ್ಕೂ ಮುನ್ನ ಕ್ಯಾಂಡಿ ಪರ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಮೊಹಮ್ಮದ್ ಹ್ಯಾರಿಸ್, 49 ಎಸೆತಗಳನ್ನು ಎದುರಿಸಿ ಎಂಟು ಬೌಂಡರಿ, ನಾಲ್ಕು ಸಿಕ್ಸರ್‌ಗಳ ನೆರವಿನಿಂದ 79 ರನ್ ಚಚ್ಚಿದರು. ಇವರಲ್ಲದೆ ದಿನೇಶ್ ಚಾಂಡಿಮಾಲ್ 24 ಎಸೆತಗಳಲ್ಲಿ 41 ರನ್, ಹಸರಂಗ 11 ಎಸೆತಗಳಲ್ಲಿ 19 ರನ್ ಬಾರಿಸಿ ತಂಡವನ್ನು ಬೃಹತ್ ಟಾರ್ಗೆಟ್​ನತ್ತ ಕೊಂಡೊಯ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:38 pm, Fri, 18 August 23