ಸಮಿತ್ ದ್ರಾವಿಡ್ ಏಕಾಂಗಿ ಹೋರಾಟ ವ್ಯರ್ಥ; ಚೊಚ್ಚಲ ಮಹಾರಾಜ ಟ್ರೋಫಿ ಗೆದ್ದ ಶಿವಮೊಗ್ಗ

Maharaja T20 Trophy Final 2026: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟಿ20 ಟ್ರೋಫಿ ಫೈನಲ್‌ನಲ್ಲಿ ಶಿವಮೊಗ್ಗ ಯೋಧಾಸ್ ತಂಡ ಬೆಂಗಳೂರು ಬ್ಲಾಸ್ಟರ್ಸ್‌ಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿತು. ಟೂರ್ನಿಯುದ್ದಕ್ಕೂ ಪ್ರಬಲವಾಗಿದ್ದ ಬೆಂಗಳೂರು ಅಂತಿಮ ಪಂದ್ಯದಲ್ಲಿ ಎಡವಿತು. ಸಮಿತ್ ದ್ರಾವಿಡ್ ಏಕಾಂಗಿ ಹೋರಾಟ ನಡೆಸಿದರೂ ತಂಡಕ್ಕೆ ಗೆಲುವು ತರಲಾಗಲಿಲ್ಲ. ಶಿವಮೊಗ್ಗದ ಲುವ್ನಿತ್ ಸಿಸೋಡಿಯಾ ಮತ್ತು ಅನೀಶ್ ಕೆವಿ ಅವರ ಅಬ್ಬರದ ಬ್ಯಾಟಿಂಗ್ ತಂಡಕ್ಕೆ ಐತಿಹಾಸಿಕ ಜಯ ತಂದಿತು.

ಸಮಿತ್ ದ್ರಾವಿಡ್ ಏಕಾಂಗಿ ಹೋರಾಟ ವ್ಯರ್ಥ; ಚೊಚ್ಚಲ ಮಹಾರಾಜ ಟ್ರೋಫಿ ಗೆದ್ದ ಶಿವಮೊಗ್ಗ
Maharaja Trophy 2026

Updated on: Jul 13, 2026 | 4:30 PM

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟಿ20 ಟ್ರೋಫಿ ಐದನೇ ಆವೃತ್ತಿಯ ಫೈನಲ್ ( Maharaja T20 Trophy Final) ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಶಿವಮೊಗ್ಗ ಯೋಧಾಸ್ (Bengaluru Blasters vs Shivamogga yodhas) ತಂಡಗಳು ಮುಖಾಮುಖಿಯಾಗಿದ್ದವು. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ್ದ ಬೆಂಗಳೂರು ತಂಡ ಲೀಗ್ ಹಂತದಲ್ಲಿ ಆಡಿದ್ದ 10 ಪಂದ್ಯಗಳಲ್ಲಿ 9 ರಲ್ಲಿ ಗೆದ್ದು ಫೈನಲ್​ಗೇರಿತ್ತು. ಇತ್ತ ಶಿವಮೊಗ್ಗ ತಂಡ ಕೇವಲ 5 ಪಂದ್ಯಗಳನ್ನು ಗೆದ್ದು ಆ ಬಳಿಕ ಪ್ಲೇಆಫ್​ನಲ್ಲಿ ಮಂಗಳೂರು ತಂಡವನ್ನು ಮಣಿಸಿ ಫೈನಲ್​ಗೇರಿತ್ತು. ಶಿವಮೊಗ್ಗ ತಂಡಕ್ಕೆ ಹೋಲಿಸಿದರೆ, ಬೆಂಗಳೂರು ತಂಡ ಬಲಿಷ್ಠವಾಗಿ ಕಾಣುತ್ತಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಶಿವಮೊಗ್ಗ ತಂಡದ ಸಾಂಘಿಕ ಪ್ರದರ್ಶನ ಬೆಂಗಳೂರು ತಂಡದ ಚಾಂಪಿಯನ್ ಕನಸನ್ನು ಭಗ್ನಗೊಳಿಸಿತು. ಬೆಂಗಳೂರು ತಂಡದ ಪರ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ (Samit Dravid) ಬೌಲಿಂಗ್ ಹಾಗೂ ಬ್ಯಾಟಿಂಗ್‌ ಎರಡರಲ್ಲೂ ಏಕಾಂಗಿ ಹೋರಾಟ ನೀಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಇತರರಿಂದ ನೆರವು ಸಿಗಲಿಲ್ಲ.

ಸಮಿತ್ ದ್ರಾವಿಡ್ ಏಕಾಂಗಿ ಹೋರಾಟ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 185 ರನ್ ಗಳಿಸಿತು. ತಂಡದ ಪರ ಅತ್ಯಧಿಕ ಇನ್ನಿಂಗ್ಸ್ ಆಡಿದ ಸಮಿತ್ ದ್ರಾವಿಡ್ 37 ಎಸೆತಗಳಲ್ಲಿ 37 ರನ್ ಗಳಿಸುವುದರ ಜೊತೆಗೆ ನಾಯಕ ಶುಭಾಂಗ್ ಹೆಗ್ಡೆ (31) ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 56 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಕೊನೆಯಲ್ಲಿ ವಾಹಿದ್ ಫೈಜಾನ್ ಖಾನ್ 29 ರನ್ ಹಾಗೂ ರೋಹನ್ ನವೀನ್ 25 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ತಂಡಕ್ಕೆ ಉತ್ತಮ ಆರಂಭ ಸಿಕ್ಕಿದ್ದರೆ, ತಂಡದ ಮೊತ್ತ 200 ರನ್​ಗಳ ಗಡಿಯನ್ನು ಸುಲಭವಾಗಿ ದಾಟುತ್ತಿತ್ತು.

ಲುವ್ನಿತ್ ಸಿಸೋಡಿಯಾ 87 ರನ್

ಈ ಗುರಿ ಬೆನ್ನಟ್ಟಿದ ಶಿವಮೊಗ್ಗ ತಂಡ ಕೂಡ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಕೊನೆಯ ಓವರ್​ನಲ್ಲಿ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ತಂಡದ ಪರ ನಾಯಕ ಲುವ್ನಿತ್ ಸಿಸೋಡಿಯಾ 9 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 87 ರನ್ ಗಳಿಸಿದರೆ, ಮೊದಲಿಗೆ ನವೀನ್ ಎಂಜಿ ಅವರೊಂದಿಗೆ 68 ರನ್‌ಗಳ ಜೊತೆಯಾಟ, ಆ ನಂತರ ಅನೀಶ್ ಕೆವಿ ಅವರೊಂದಿಗೆ ಕೇವಲ 22 ಎಸೆತಗಳಲ್ಲಿ 53 ರನ್‌ಗಳನ್ನು ಗಳಿಸಿ ಶಿವಮೊಗ್ಗದ ಗೆಲುವನ್ನು ಖಚಿತಪಡಿಸಿದರು. ಕೊನೆಯಲ್ಲಿ, ಅನೀಶ್ ಕೆವಿ 19 ಎಸೆತಗಳಲ್ಲಿ 38 ರನ್ ಗಳಿಸಿ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಭಾರತ ಅಂಡರ್ 19 ತಂಡಕ್ಕೆ ಸಮಿತ್ ದ್ರಾವಿಡ್ ಆಯ್ಕೆ

4 ವಿಕೆಟ್ ಕಬಳಿಸಿದ ಸಮಿತ್ ದ್ರಾವಿಡ್

ಈ ಪಂದ್ಯದಲ್ಲಿ ಬ್ಯಾಟಿಂಗ್‌ ಜೊತೆಗೆ ಬೌಲಿಂಗ್‌ನಲ್ಲೂ ಮಿಂಚಿದ ಸಮಿತ್ ದ್ರಾವಿಡ್ 3.4 ಓವರ್​ಗಳನ್ನು ಬೌಲ್ ಮಾಡಿ 36 ರನ್​ಗಳನ್ನು ಬಿಟ್ಟುಕೊಟ್ಟು ಅತ್ಯಧಿಕ 4 ವಿಕೆಟ್‌ಗಳನ್ನು ಕಬಳಿಸಿದರು. ಆದರೆ ಅವರಿಗೆ ಇತರರಿಂದ ಬೆಂಬಲ ಸಿಗಲಿಲ್ಲ. ಇದರ ಪರಿಣಾಮವಾಗಿ ಬೆಂಗಳೂರು ತಂಡ ಕೊನೆಯ ಓವರ್​ನಲ್ಲಿ ಸೋಲೊಪ್ಪಿಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:24 pm, Mon, 13 July 26

Follow Us