Mark Chapman: ಅಂದು ಹಾಂಕಾಂಗ್ ಬ್ಯಾಟ್ಸ್ಮನ್, ಇಂದು ನ್ಯೂಜಿಲೆಂಡ್ ಆಲ್ರೌಂಡರ್
T20 World Cup: ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆಸ್ಟ್ಲೆ, ಟ್ರೆಂಟ್ ಬೋಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲುಕಿ ಫರ್ಗುಸನ್, ಮಾರ್ಟಿನ್ ಗಪ್ಟಿಲ್
ಟಿ20 ವಿಶ್ವಕಪ್ಗಾಗಿ ಸಿದ್ಧತೆಗಳು ಆರಂಭವಾಗಿವೆ. ಇದರ ಮೊದಲ ಹೆಜ್ಜೆ ಎಂಬಂತೆ ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ತಮ್ಮ ತಂಡವನ್ನು ಪ್ರಕಟಿಸಿದೆ. ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಯುಎಇ ಮತ್ತು ಒಮಾನ್‌ನಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಇದಕ್ಕಾಗಿ, ನ್ಯೂಜಿಲೆಂಡ್ ತನ್ನ 15 ಸದಸ್ಯರ ತಂಡವನ್ನು ಘೋಷಿಸಿದೆ. ಇದರಲ್ಲಿ 2014 ಟಿ20 ವಿಶ್ವಕಪ್ ನಲ್ಲಿ ಹಾಂಕಾಂಗ್ ಪರ ಆಡಿದ ಬ್ಯಾಟ್ಸ್ ಮನ್ ಕೂಡ ಇರುವುದು ವಿಶೇಷ. ಹೌದು, ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿರುವ ಮಾರ್ಕ್ ಚಾಪ್ಮನ್ ಈ ಹಿಂದೆ ಹಾಂಕಾಂಗ್ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ನ್ಯೂಜಿಲೆಂಡ್ ತಂಡದ ಮೂಲಕ ವಿಶ್ವಕಪ್ನಲ್ಲಿ ಸೆಕೆಂಡ್ ಇನಿಂಗ್ಸ್ ಆರಂಭಿಸಲು ಹೊರಟಿದ್ದಾರೆ.
ಚಾಪ್ಮನ್ ಹುಟ್ಟಿದ್ದು ಹಾಂಕಾಂಗ್ ನಲ್ಲಿ. ಆದರೆ ಅವರ ತಂದೆ ನ್ಯೂಜಿಲೆಂಡ್ ಮೂಲದವರು. ಹೀಗಾಗಿ ಕಿವೀಸ್ ತಂಡದಲ್ಲಿ ಆಡುವ ಅವಕಾಶವನ್ನು ಪಡೆದರು. ಹಾಂಕಾಂಗ್ ತಂಡದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಚಾಪ್ಮನ್ 2015 ರಲ್ಲಿ ಯುಎಇ ವಿರುದ್ಧ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ಅಜೇಯ 124 ರನ್ ಬಾರಿಸಿ ಅಬ್ಬರಿಸಿದ್ದರು. ಆ ಬಳಿಕ ನ್ಯೂಜಿಲೆಂಡ್ನತ್ತ ಮುಖ ಮಾಡಿದ್ದ ಯುವ ಬ್ಯಾಟ್ಸ್ಮನ್ ದೇಶೀಯ ಕ್ರಿಕೆಟ್ ನಲ್ಲಿ ಆಕ್ಲೆಂಡ್ ಪರ ಹೊಸ ಇನಿಂಗ್ಸ್ ಆರಂಭಿಸಿದರು.
2017-18ರ ದೇಶೀಯ ಸೀಸನ್ನಲ್ಲಿ ಕಣಕ್ಕಿಳಿದು ಆಲ್ರೌಂಡರ್ ಆಟದ ಮೂಲಕ ಗಮನ ಸೆಳೆದರು. ಅದರಲ್ಲೂ ಸೂಪರ್ ಸ್ಮ್ಯಾಶ್ ಟೂರ್ನಿಯಲ್ಲಿ 300 ರನ್ ಮತ್ತು ಫೋರ್ಡ್ ಟ್ರೋಫಿಯಲ್ಲಿ 400 ಕ್ಕೂ ಹೆಚ್ಚು ರನ್ ಬಾರಿಸಿದ್ದರು. ಈ ಪ್ರದರ್ಶನದಿಂದಾಗಿ, ಅವರು 2018 ರಲ್ಲಿ ಮೊದಲ ಬಾರಿಗೆ ಟಿ 20 ಸರಣಿಗೆ ನ್ಯೂಜಿಲೆಂಡ್ ತಂಡದಲ್ಲಿ ಆಲ್ರೌಂಡರ್ ಆಗಿ ಸ್ಥಾನ ಪಡೆದರು. ಆದರೆ ತಂಡದ ಖಾಯಂ ಸದಸ್ಯರಾಗಲು ಸಾಧ್ಯವಾಗಿರಲಿಲ್ಲ. ಇದೀಗ ಭರ್ಜರಿ ಪ್ರದರ್ಶನದೊಂದಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದುವರೆಗೆ 30 ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಚಾಪ್ಮನ್ ಕಾಣಿಸಿಕೊಂಡಿದ್ದಾರೆ . ಈ ಪೈಕಿ 19 ಪಂದ್ಯಗಳನ್ನು ಹಾಂಕಾಂಗ್ ಪರ ಆಡಿದರೆ, 11 ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ ಕಿವೀಸ್ ಪರ 143 ರನ್ಗಳಿಸಿದರೆ, ಹಾಂಕಾಂಗ್‌ಗಾಗಿ 392 ರನ್ ಬಾರಿಸಿದ್ದಾರೆ. ಇದೀಗ ಹೊಸ ಆರಂಭದ ಉತ್ಸಾಹದಲ್ಲಿರುವ ಯುವ ಆಲ್ರೌಂಡರ್ ಈ ಬಾರಿ ಟಿ20 ವಿಶ್ವಕಪ್ನಲ್ಲಿ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.
ನ್ಯೂಜಿಲೆಂಡ್ ಟಿ20 ವಿಶ್ವಕಪ್ ತಂಡ ಹೀಗಿದೆ: ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆಸ್ಟ್ಲೆ, ಟ್ರೆಂಟ್ ಬೋಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲುಕಿ ಫರ್ಗುಸನ್, ಮಾರ್ಟಿನ್ ಗಪ್ಟಿಲ್, ಕೈಲ್ ಜೆಮಿಸನ್, ಡ್ಯಾರೆಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಇಶ್ ಸೋಧಿ, ಟಿಮ್ ಸೌಥಿ.
ಇದನ್ನೂ ಓದಿ: IPL 2021: ಐಪಿಎಲ್ಗಾಗಿ 2 ತಂಡ ಕಟ್ಟಿದ್ದ ನ್ಯೂಜಿಲೆಂಡ್..!
ಇದನ್ನೂ ಓದಿ: IPL 2021: ಐಪಿಎಲ್ನ ಹೊಸ ನಿಯಮದಿಂದ ಯಾರಿಗೆ ಅನುಕೂಲ?
(Mark Chapman represented Hong Kong in the 2014 T20 World Cup now he will represent New Zealand)