
ಮಳೆ ನಿಂತರೂ ಹನಿ ನಿಂತಿಲ್ಲ ಎಂಬಂತೆ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಚರ್ಚೆ ಮುಂದುವರೆದಿದೆ. ಮಾರ್ಚ್ 8 ರಂದು ಅಹಮದಾಬಾದ್ನಲ್ಲಿ ನಡೆದ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು ಹೀನಾಯವಾಗಿ ಸೋಲಿಸಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಬರೋಬ್ಬರಿ 255 ರನ್ಗಳು. 256 ರನ್ಗಳ ಗುರಿ ಪಡೆದ ನ್ಯೂಝಿಲೆಂಡ್ ತಂಡವು 19 ಓವರ್ಗಳಲ್ಲಿ 159 ರನ್ ಬಾರಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 96 ರನ್ಗಳ ವಿಜಯದೊಂದಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಹೀಗೆ ಭಾರತ ತಂಡ ಅಮೋಘ ಗೆಲುವು ದಾಖಲಿಸಿದರೂ, ಅದು ನ್ಯೂಝಿಲೆಂಡ್ ತಂಡ ನೀಡಿದ ಉಡುಗೊರೆ ಎಂದು ಅಣಕಿಸಿದ್ದಾರೆ ಪಾಕಿಸ್ತಾನ್ ತಂಡದ ಮಾಜಿ ವೇಗಿ ಮೊಹಮ್ಮದ್ ಅಮಿರ್.
ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ತೆಗೆದುಕೊಂಡ ಕೆಲ ಅಚ್ಚರಿಯ ನಿರ್ಧಾರಗಳಿಂದಲೇ ಭಾರತ ಚಾಂಪಿಯನ್ ಆಗಿದೆ.
ಏಕೆಂದರೆ ಸ್ಪಿನ್ ವಿರುದ್ಧ ತಿಣುಕಾಡುವ ಅಭಿಷೇಕ್ ಶರ್ಮಾಗೆ ಆಫ್-ಸ್ಪಿನ್ನರ್ನಿಂದ ಕೈಯಿಂದ ಬೌಲಿಂಗ್ ಮಾಡಿಸುವ ಬದಲು ಸ್ಯಾಂಟ್ನರ್ ವೇಗಿ ಜೇಕಬ್ ಡಫಿಗೆ ಬೌಲಿಂಗ್ ಮಾಡಿಸಿದ್ದರು. ಇಂದೆಂತಹ ಸ್ಟ್ರಾಟಜಿ ಎಂಬುದೇ ಅರ್ಥವಾಗಿಲ್ಲ ಎಂದು ಅಮಿರ್ ಕಿವೀಸ್ ನಾಯಕನ ನಡೆಯನ್ನು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲದೆ ಸೆಮಿಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕೋಲ್ ಮೆಕಾಂಕಿಯನ್ನು ಕೈಬಿಟ್ಟಿದ್ದಕ್ಕೂ ಮೊಹಮ್ಮದ್ ಅಇರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
85,000 ಪ್ರೇಕ್ಷಕರ ಸಮ್ಮುಖದಲ್ಲಿ ನ್ಯೂಝಿಲೆಂಡ್ ಆಟಗಾರರು ಮೊದಲು ಮಾನಸಿಕವಾಗಿ ಸೋತರು. ಆ ಬಳಿಕ ಸಡಿಲವಾದ ಬೌಲಿಂಗ್ ಮೂಲಕ ಭಾರತಕ್ಕೆ ಹೆಚ್ಚಿನ ರನ್ ಬಿಟ್ಟುಕೊಟ್ಟರು.
ಇದು ಒಂದಾರ್ಥದಲ್ಲಿ ಟೀಮ್ ಇಂಡಿಯಾದ ಭರ್ಜರಿ ಗೆಲುವಲ್ಲ. ಬದಲಾಗಿ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಭಾರತಕ್ಕೆ ಪ್ರಶಸ್ತಿಯನ್ನು ತಟ್ಟೆಯಲ್ಲಿ ಇಟ್ಟು “ಉಡುಗೊರೆ”ಯಾಗಿ ನೀಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇದಕ್ಕೂ ಮುನ್ನ ಮೊಹಮ್ಮದ್ ಅಮಿರ್, ಈ ಬಾರಿ ಟೀಮ್ ಇಂಡಿಯಾ ಸೆಮಿಫೈನಲ್ಗೆ ಪ್ರವೇಶಿಸಲ್ಲ ಎಂದು ಭವಿಷ್ಯ ನುಡಿದಿದ್ದರು. ಇದಾದ ಬಳಿಕ ಫೈನಲ್ನಲ್ಲಿ ಭಾರತ ತಂಡ ಸೋಲಲಿದೆ ಎಂದಿದ್ದರು.
ಇದನ್ನೂ ಓದಿ: T20 World Cup 2028: ಟಿ20 ವಿಶ್ವಕಪ್ಗೆ 12 ತಂಡಗಳು ನೇರ ಆಯ್ಕೆ
ಆದರೆ ಅಮಿರ್ ಅವರ ಈ ಪ್ರೆಡಿಕ್ಷನ್ಗಳು ತಲೆಕೆಳಗಾಗಿದ್ದವು. ಇದೀಗ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿರುವುದನ್ನು ನ್ಯೂಝಿಲೆಂಡ್ ನೀಡಿದ ಗಿಫ್ಟ್ ಎಂದು ಅಣಕಿಸಿದ್ದಾರೆ.