India vs Pakistan: ಪಂದ್ಯದ ನಡುವೆ ಮೈದಾನದಲ್ಲೇ ನಮಾಜ್ ಮಾಡಿದ ಪಾಕ್ ಆಟಗಾರ
Mohammad Rizwan Prayer: ಒಂದೆಡೆ ಬಾಬರ್ ಎಚ್ಚರಿಕೆಯ ಆಟಕ್ಕೆ ಮುಂದಾದರೆ ಮತ್ತೊಂದೆ ರಿಜ್ವಾನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಂತೆ ಅಂತಿಮವಾಗಿ 55 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 79 ರನ್ ಬಾರಿಸಿ ಮಿಂಚಿದ್ದರು.
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ (T20 World Cup 2021) ಪಂದ್ಯದಲ್ಲಿ ಭಾರತದ ವಿರುದ್ದ ಪಾಕಿಸ್ತಾನ್ (India vs Pakistan) 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಇದಕ್ಕೂ ಮುನ್ನ ಟಾಸ್ ಗೆದ್ದ ಪಾಕ್ ನಾಯಕ ಬಾಬರ್ ಆಜಂ (Babar Azam) ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಪಾಕ್ ವೇಗಿ ಶಾಹಿನ್ ಅಫ್ರಿದಿ (Shaheen Afridi) ಟೀಮ್ ಇಂಡಿಯಾ (Team India) ಆರಂಭಿಕರನ್ನು ಪವರ್ಪ್ಲೇನಲ್ಲೇ ಪೆವಿಲಿಯನ್ಗೆ ಕಳುಹಿಸಿ ನಾಯಕನ ನಿರ್ಧಾರವನ್ನು ಸಮರ್ಥಿಸಿದ್ದರು. ಅಷ್ಟೇ ಅಲ್ಲದೆ ಭಾರತ ತಂಡವನ್ನು 20 ಓವರ್ನಲ್ಲಿ ಪಾಕ್ ಬೌಲರುಗಳು ಕೇವಲ 151 ರನ್ಗಳಿಗೆ ನಿಯಂತ್ರಿಸಿದ್ದರು. ಈ ಸ್ಪರ್ಧಾತ್ಮಕ ಸವಾಲನ್ನು ಬೆನ್ನತ್ತಿದ ಪಾಕ್ ತಂಡಕ್ಕೆ ಆರಂಭಿಕರಾದ ಬಾಬರ್ ಆಜಂ ಹಾಗೂ ಮೊಹಮ್ಮದ್ ರಿಜ್ವಾನ್ ಭರ್ಜರಿ ಆರಂಭ ಒದಗಿಸಿದ್ದರು. ಟೀಮ್ ಇಂಡಿಯಾ ಬೌಲರುಗಳನ್ನು ಲೀಲಾಜಾಲವಾಗಿ ಎದುರಿಸಿದ ಈ ಜೋಡಿ ವಿಶ್ವಕಪ್ ಇತಿಹಾಸದಲ್ಲೇ ಭಾರತದ ವಿರುದ್ದ ಪಾಕಿಸ್ತಾನಕ್ಕೆ ಮೊದಲ ಜಯ ತಂದುಕೊಟ್ಟಿದ್ದರು.
ಒಂದೆಡೆ ಬಾಬರ್ ಎಚ್ಚರಿಕೆಯ ಆಟಕ್ಕೆ ಮುಂದಾದರೆ ಮತ್ತೊಂದೆ ರಿಜ್ವಾನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಂತೆ ಅಂತಿಮವಾಗಿ 55 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 79 ರನ್ ಬಾರಿಸಿ ಮಿಂಚಿದ್ದರು. ಈ ಭರ್ಜರಿ ಇನಿಂಗ್ಸ್ ನಡುವೆ ಮೊಹಮ್ಮದ್ ರಿಜ್ವಾನ್ ಮೈದಾನದಲ್ಲೇ ಪ್ರಾರ್ಥನೆ ಸಲ್ಲಿಸಿ ಗಮನ ಸೆಳೆದಿದ್ದರು.
ಟೀಮ್ ಇಂಡಿಯಾದ ಬೌಲಿಂಗ್ ಇನಿಂಗ್ಸ್ ಬ್ರೇಕ್ ವೇಳೆ ಭಾರತೀಯ ಆಟಗಾರರು ಕಾರ್ಯತಂತ್ರ ರೂಪಿಸುತ್ತಿದ್ದರೆ, ಅತ್ತ ಬಾಬರ್ ಆಜಂ ರಿಫ್ರೆಶ್ ಆಗುತ್ತಿದ್ದರು. ಆದರೆ ಇದೇ ಸಮಯದಲ್ಲಿ ಮೊಹಮ್ಮದ್ ರಿಜ್ವಾನ್ ದೇವರಿಗೆ ಕೃತಜ್ಞತೆ ಸಲ್ಲಿಸಲು ನಮಾಜ್ಗೆ ಮುಂದಾಗಿದ್ದರು. ಅದರಂತೆ ಇನಿಂಗ್ಸ್ ವಿರಾಮದ ವೇಳೆ ಮೊಹಮ್ಮದ್ ರಿಜ್ವಾನ್ ಮೈದಾನದಲ್ಲೇ ಪ್ರಾರ್ಥಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋವನ್ನು ಪಾಕ್ ತಂಡ ಮಾಜಿ ವೇಗದ ಬೌಲರ್ ಶೊಯೇಬ್ ಅಖ್ತರ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಯಾರು ದೇವರ ಮುಂದೆ ತಲೆಬಾಗುತ್ತಾರೋ ಅವರನ್ನು ದೇವರು ಯಾರ ಮುಂದೆಯೂ ತಲೆತಗ್ಗಿಸುವಂತೆ ಮಾಡಲ್ಲ ಎಂದು ಅಖ್ತರ್ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಟೀಮ್ ಇಂಡಿಯಾ ಬೌಲರುಗಳ ವಿರುದ್ದ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಮೊಹಮ್ಮದ್ ರಿಜ್ವಾನ್ ಹಾಗೂ ಬಾಬರ್ ಆಜಂ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಮಂಡಿಯೂರಿದ್ದು ಯಾಕೆ ಗೊತ್ತಾ?
ಇದನ್ನೂ ಓದಿ: Virat Kohli: ಸೋತರೂ ಟಿ20 ವಿಶ್ವಕಪ್ನಲ್ಲಿ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಇದನ್ನೂ ಓದಿ: T20 World Cup 2021: ಟಿ20 ರ್ಯಾಂಕಿಂಗ್ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?
(Mohammad Rizwan performs namaz during a break in IND vs PAK match)