Pak Vs Aus: ಮಿಸ್​ಫೀಲ್ಡಿಂಗ್​ ಮಾಡಿದ ಪಾಕ್ ಆಟಗಾರ; ಆದರೂ ರನ್​ ಔಟ್ ಆದ ಆಸ್ಟ್ರೇಲಿಯಾ ಬ್ಯಾಟರ್- ಹೇಗೆ? ವಿಡಿಯೋ ಇಲ್ಲಿದೆ

| Updated By: shivaprasad.hs

Updated on: Mar 30, 2022 | 2:16 PM

Ben McDermott: ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದಿದ್ದ ಆಸ್ಟ್ರೇಲಿಯಾದ ಬೆನ್​​ ಮೆಕ್​ಡರ್ಮಾಟ್​​ ಉತ್ತಮವಾಗಿ ಆಡುತ್ತಿದ್ದರು. ಆದರೆ ಅನಿರೀಕ್ಷಿತ ರೀತಿಯಲ್ಲಿ ರನ್​ಔಟ್ ಆದರು. ಈ ಸಂದರ್ಭದ ವಿಡಿಯೋ ಈಗ ವೈರಲ್ ಆಗಿದೆ.

Pak Vs Aus: ಮಿಸ್​ಫೀಲ್ಡಿಂಗ್​ ಮಾಡಿದ ಪಾಕ್ ಆಟಗಾರ; ಆದರೂ ರನ್​ ಔಟ್ ಆದ ಆಸ್ಟ್ರೇಲಿಯಾ ಬ್ಯಾಟರ್- ಹೇಗೆ? ವಿಡಿಯೋ ಇಲ್ಲಿದೆ
ಬೆನ್ ಮೆಕ್​ಡರ್ಮಾಟ್ ರನ್​ಔಟ್ ಸಂದರ್ಭ
Follow us on

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕ್ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ (Pak vs Aus) ಸರಣಿಯಲ್ಲಿ ಅಚ್ಚರಿಯ ರೀತಿಯಲ್ಲಿ ರನ್​ಔಟ್ ಒಂದು ಸಂಭವಿಸಿದೆ. ಲಾಹೋರ್​ನ ಗಡಾಫಿ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಿತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಭರ್ಜರಿ ಪ್ರದರ್ಶನ ನೀಡಿ ಉತ್ತಮ ಮೊತ್ತ ಪೇರಿಸಿತು. ಆರಂಭಿಕರಾಗಿ ಕಣಕ್ಕಿಳಿದ ಆರನ್ ಫಿಂಚ್ ಹಾಗೂ ಟ್ರೇವಿಸ್ ಹೆಡ್ ಮೊದಲ 15 ಓವರ್​ಗಳಲ್ಲೇ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಆಸ್ಟ್ರೇಲಿಯಾ ತಂಡದ ಬ್ಯಾಟರ್​ಗಳು ಉತ್ತಮ ಪ್ರದರ್ಶನ ನೀಡಿದ್ದರಿಂದ ತಂಡವು 313 ರನ್​ಗಳ ಸವಾಲಿನ ಗುರಿ ಪೇರಿಸಲು ಸಾಧ್ಯವಾಯಿತು. ಟ್ರೇವಿಸ್ ಹೆಡ್ 101 ರನ್​ಗಳ ಭರ್ಜರಿ ಶತಕ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದಿದ್ದ ಬೆನ್​​ ಮೆಕ್​ಡರ್ಮಾಟ್​​ ಉತ್ತಮವಾಗಿ ಆಡುತ್ತಿದ್ದರು. ಆದರೆ ಅನಿರೀಕ್ಷಿತ ರೀತಿಯಲ್ಲಿ ರನ್​ಔಟ್ ಆದರು. ಈ ಸಂದರ್ಭದ ವಿಡಿಯೋ ಈಗ ವೈರಲ್ ಆಗಿದೆ.

33ನೇ ಓವರ್​ನ ಕೊನೆಯ ಎಸೆತದಲ್ಲಿ ಬೆನ್​ ಮೆಕ್​ಡರ್ಮಾಟ್ ಥರ್ಡ್​ ಮ್ಯಾನ್ ಕಡೆಗೆ ಚೆಂಡನ್ನು ಬಾರಿಸಿದರು. ಅಲ್ಲಿ ಫೀಲ್ಡಿಂಗ್​ನಲ್ಲಿದ್ದ ವಾಸಿಂ ಜೂ. ಚೆಂಡನ್ನು ಡೈವ್ ಮಾಡಿ ತಡೆದರು. ಅದರೆ ಅದು ಅವರ ಹಿಡಿತಕ್ಕೆ ಸಿಕ್ಕಲಿಲ್ಲ. ಮಿಸ್​ಫೀಲ್ಡ್​ ಆದ ಚೆಂಡು ಬೌಂಡರಿ ಗೆರೆಯತ್ತ ನುಗ್ಗಿತು. ಅದನ್ನು ಬೆನ್ನಟ್ಟಿದ ವಾಸಿಂ ಚೆಂಡನ್ನು ಬೌಂಡರಿ ಗೆರೆ ಬಳಿ ತಡೆದು ಕೀಪರ್ ಮೊಹಮ್ಮದ್ ರಿಜ್ವಾನ್​ಗೆ ತಲುಪಿಸಿದರು.

ಆದರೆ ಈ ಸಂದರ್ಭದಲ್ಲಿ ನಿಧಾನವಾಗಿ ರನ್ ಓಡುತ್ತಿದ್ದ ಬೆನ್​ ಇನ್ನೂ ಕ್ರೀಸ್ ತಲುಪಿರಲಿಲ್ಲ. ಅನಿರೀಕ್ಷಿತ ರೀತಿಯಲ್ಲಿ ಅವರು ಔಟ್ ಆದರು. ಡೈವ್ ಮಾಡಿದರೂ ಕೂಡ ಅವರ ಯತ್ನ ಫಲಿಸಲಿಲ್ಲ. ಹೀಗೆ ವಿಕೆಟ್​ಗೆ ಪರದಾಡುತ್ತಿದ್ದ ಪಾಕಿಸ್ತಾನಕ್ಕೆ ಮಿಸ್​ಫೈಲ್ಡ್​ನಿಂದ ಅನಿರೀಕ್ಷಿತವಾಗಿ ರನ್​ಔಟ್ ಸಿಕ್ಕಂತಾಯಿತು. 70 ಎಸೆತಗಳಲ್ಲಿ 55 ರನ್​ ಗಳಿಸಿದ್ದ ಬೆನ್​ ಪೆವಿಲಿಯನ್​ಗೆ ಮರಳಿದರು. ಇದರ ನಂತರ ಪಾಕ್ ಕೆಲವೇ ರನ್​ಗಳ ಅಂತರದಲ್ಲಿ ಮತ್ತೆರಡು ವಿಕೆಟ್ ಪಡೆಯಿತು.

ಬೆನ್​ ಮೆಕ್​ಡರ್ಮಾಟ್ ರನ್​ ಔಟ್ ವಿಡಿಯೋ ಇಲ್ಲಿದೆ:

225ಕ್ಕೆ ಸರ್ವಪತನ ಕಂಡ ಪಾಕ್:

ಆಸ್ಟ್ರೇಲಿಯಾ ನೀಡಿದ 313 ರನ್​ಗಳ ಗುರಿ ಬೆನ್ನಟ್ಟಿದ ಪಾಕ್​ಗೆ ನಿರೀಕ್ಷಿತ ಆರಂಭ ದೊರೆಯಲಿಲ್ಲ. ಆರಂಭಿಕ ಆಟಗಾರ ಇಮಾಮ್​ ಉಲ್ ಹಕ್ 96 ಎಸೆತಗಳಲ್ಲಿ 103 ರನ್​ಗಳಿಸಿದರು. ಕಪ್ತಾನ ಬಾಬರ್ ಅಜಂ 72 ಎಸೆತಗಳಲ್ಲಿ 57 ರನ್ ಬಾರಿಸಿದರು. ಆದರೆ ತಂಡದ ಇತರ ಆಟಗಾರರಿಂದ ಯಾವುದೇ ಸಹಾಯ ಲಭ್ಯವಾಗಲಿಲ್ಲ. ಇದರಿಂದ ಪಾಕ್ 45.2 ಓವರ್​ಗಳಲ್ಲಿ 225 ರನ್​ಗೆ ಆಲ್​ಔಟ್ ಆಯಿತು.

ಆಡಂ ಜಂಪಾ 4 ವಿಕೆಟ್ ಪಡೆದರೆ, ಬೌಲಿಂಗ್​ನಲ್ಲೂ ಮಿಂಚಿದ ಟ್ರೇವಿಸ್ ಹೆಡ್ 2 ವಿಕೆಟ್ ಪಡೆದರು. ಅರ್ಹವಾಗಿಯೇ ಟ್ರೇವಿಸ್​ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ 1-0ಯಿಂದ ಮುನ್ನಡೆ ಸಾಧಿಸಿದೆ. ಮುಂದಿನ ಪಂದ್ಯ ಮಾರ್ಚ್ 31ರ ಗುರುವಾರ ನಡೆಯಲಿದೆ.

ಇದನ್ನೂ ಓದಿ:

IPL 2022 Points Table: ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ 1 ಯಾರು? ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?

Devon Conway: ‘ನಿಮ್ಮ ನಾಯಕತ್ವದಲ್ಲಿ ನಾನು ಆಡಬೇಕು’; ಕಿವೀಸ್ ಆಟಗಾರನ ಕೋರಿಕೆಗೆ ಧೋನಿ ಉತ್ತರ ಏನಿತ್ತು?