Mohammed Azharuddin: ಕ್ರಿಕೆಟ್ ಆಡಿದ್ದಕ್ಕೆ ವಿಷಾದಿಸುತ್ತೇನೆ; ಬಿಸಿಸಿಐಗೆ ಅಜರುದ್ದೀನ್ ದೂರು

Mohammed Azharuddin: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾಗ ಅಧಿಕಾರ ದುರ್ಬಳಕೆ ಆರೋಪ ಹೊತ್ತಿರುವ ಮಾಜಿ ಕ್ರಿಕೆಟ್ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ಹೆಸರನ್ನು ಹೈದರಾಬಾದ್ ರಾಜೀವ್ ಗಾಂಧಿ ಕ್ರೀಡಾಂಗಣದಿಂದ ತೆಗೆದುಹಾಕಲಾಗಿದೆ. ಈ ನಿರ್ಧಾರಕ್ಕೆ ಅಜರುದ್ದೀನ್ ಬೇಸರ ವ್ಯಕ್ತಪಡಿಸಿದ್ದು, HCA ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ. ಅವರ ವಿರುದ್ಧದ ಆರೋಪಗಳನ್ನು ಬಿಸಿಸಿಐ ಪರಿಶೀಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Mohammed Azharuddin: ಕ್ರಿಕೆಟ್ ಆಡಿದ್ದಕ್ಕೆ ವಿಷಾದಿಸುತ್ತೇನೆ; ಬಿಸಿಸಿಐಗೆ ಅಜರುದ್ದೀನ್ ದೂರು
Mohammad Azharuddin

Updated on: Apr 21, 2025 | 6:43 PM

ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್‌ (HCA) ಅಧ್ಯಕ್ಷರಾಗಿದ್ದಾಗ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪ ಕೇಳಿ ಬಂದ ನಂತರ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಿಂದ ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ (Mohammad Azharuddin) ಅವರ ಹೆಸರನ್ನು ತೆಗೆದುಹಾಕಲಾಗಿದೆ. ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್‌ನ ಈ ನಿರ್ಧಾರದ ಅಜರುದ್ದೀನ್ ಅವರಿಗೆ ಬೇಸರ ತಂದಿದ್ದು, ಇದು ಅತ್ಯಂತ ನಾಚಿಕೆಗೇಡಿನ ಸಂಗತಿ, ಇದರಿಂದ ನನಗೆ ತುಂಬಾ ಬೇಸರವಾಗಿದೆ. ಕ್ರಿಕೆಟ್ ಆಡಿದ್ದಕ್ಕೆ ನಾನು ವಿಷಾದಿಸುತ್ತೇನೆ. ಹೆಚ್​ಸಿಎ ವಿರುದ್ಧ ಬಿಸಿಸಿಐ (BCCI) ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಅಜರುದ್ದೀನ್, ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ​​ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕ್ರಿಕೆಟ್ ಆಡಿದ್ದಕ್ಕೆ ವಿಷಾದಿಸುತ್ತೇನೆ

ಗಲ್ಫ್ ನ್ಯೂಸ್ ಜೊತೆ ಮಾತನಾಡಿದ ಅಜರುದ್ದೀನ್, ಹೆಚ್​ಸಿಎ ನಿರ್ಧಾರದಿಂದ ನನ್ನ ಹೃದಯ ಒಡೆದು ಹೋಗಿದೆ. ಇದನ್ನು ಹೇಳಲು ನನಗೆ ತುಂಬಾ ಬೇಸರವಾಗುತ್ತಿದೆ. ನಾನು ಕ್ರಿಕೆಟ್ ಆಡಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇನೆ. ಇಂದು, ಕ್ರಿಕೆಟ್ ಬಗ್ಗೆ ಮೂಲಭೂತ ತಿಳುವಳಿಕೆಯೂ ಇಲ್ಲದ ಜನರು ಆಟಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ಆಟಕ್ಕೆ ಮಾಡಿದ ಅವಮಾನ. ಈ ಅನ್ಯಾಯದ ವಿರುದ್ಧ ನಾನು ಕಾನೂನು ಹೋರಾಟ ನಡೆಸುತ್ತೇನೆ. ಈ ವಿಷಯವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಸಿಸಿಐಗೆ ಮನವಿ ಮಾಡುತ್ತೇನೆ ಎಂದು ಅಜರುದ್ದೀನ್ ಹೇಳಿದ್ದಾರೆ.

BCCI Central Contracts: ನಿಯಮ ಉಲ್ಲಂಘಿಸಿದ್ದ ಇಬ್ಬರು ಆಟಗಾರರಿಗೆ ಕ್ಷಮಾದಾನ ನೀಡಿದ ಬಿಸಿಸಿಐ

ಏನಿದು ವಿವಾದ?

ಈ ವಿವಾದ ಹುಟ್ಟುಕೊಳ್ಳಲು ಕಾರಣ ಏನು ಎಂಬುದನ್ನು ನೋಡುವುದಾದರೆ… ವಾಸ್ತವವಾಗಿ ಈ ಹಿಂದೆ ಮೊಹಮ್ಮದ್ ಅಜರುದ್ದೀನ್ ಹೈದರಾಬಾದ್‌ ಕ್ರಿಕೆಟ್ ಅಸೋಸಿಯೇಷನ್​ನ ಅಧ್ಯಕ್ಷರಾಗಿದ್ದರು. ಆ ಸಮಯದಲ್ಲಿ ಅಜರುದ್ದೀನ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ತಮ್ಮ ವೈಯಕ್ತಿಕ ಲಾಭಕ್ಕಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಹಾಗೆಯೇ ಅಜರುದ್ದೀನ್ ವಿರುದ್ಧ ಪಕ್ಷಪಾತದ ಗಂಭೀರ ಆರೋಪಗಳನ್ನು ಹೊರಿಸಲಾಗಿತ್ತು. ಹೀಗಾಗಿ ರಾಜೀವ್ ಗಾಂಧಿ ಕ್ರೀಡಾಂಗಣದ ಉತ್ತರ ಪೆವಿಲಿಯನ್ ಸ್ಟ್ಯಾಂಡ್‌ನಿಂದ ಮೊಹಮ್ಮದ್ ಅಜರುದ್ದೀನ್ ಅವರ ಹೆಸರನ್ನು ತೆಗೆದುಹಾಕಲು HCA ಯ ನೈತಿಕ ಅಧಿಕಾರಿ ಮತ್ತು ಒಂಬುಡ್ಸ್‌ಮನ್ ನ್ಯಾಯಮೂರ್ತಿ ವಿ. ಈಶ್ವರಯ್ಯ ಅವರು ಶನಿವಾರ ಈ ಆದೇಶ ನೀಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ