Team India: ಏಷ್ಯಾಕಪ್ ತಂಡದಿಂದ ಟೀಮ್ ಇಂಡಿಯಾದ ಪ್ರಮುಖ ಆಟಗಾರ ಔಟ್..!
Team India: ಈ ಬಾರಿಯ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮೊಹಮ್ಮದ್ ಶಮಿ ಪ್ರಮುಖ ಪಾತ್ರವಹಿಸಿದ್ದರು. ತಂಡದ ಹಿರಿಯ ವೇಗಿಯಾಗಿ ಕಾಣಿಸಿಕೊಂಡಿದ್ದ ಶಮಿ 20 ವಿಕೆಟ್ ಉರುಳಿಸಿ ಮಿಂಚಿದ್ದರು.

ಈ ಬಾರಿ ನಡೆಯಲಿರುವ ಏಷ್ಯಾಕಪ್ (Asia Cup 2022) ಹಲವು ಕಾರಣಗಳಿಂದ ಟೀಮ್ ಇಂಡಿಯಾ (Team India) ಪಾಲಿಗೆ ಬಹಳ ಮಹತ್ವದ್ದು. ಏಕೆಂದರೆ ಏಷ್ಯಾಕಪ್ ಬಳಿಕ ಭಾರತ ತಂಡವು ಟಿ20 ವಿಶ್ವಕಪ್ (T20 World Cup 2022) ಕೂಡ ಆಡಲಿದೆ. ಇದಕ್ಕೂ ಮುನ್ನ ಏಷ್ಯಾದ ರಾಷ್ಟ್ರಗಳನ್ನು ಸೋಲಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾ ಮುಂದಿದೆ. ಇನ್ನು ಟಿ20 ವಿಶ್ವಕಪ್ಗೂ ಮುನ್ನ ಪಾಕಿಸ್ತಾನ್ ವಿರುದ್ದ 2 ಪಂದ್ಯಗಳನ್ನು ಆಡುವ ಚಾನ್ಸ್ ಕೂಡ ಭಾರತ ತಂಡಕ್ಕೆ ಸಿಗಲಿದೆ. ಈ ಮೂಲಕ ಎಲ್ಲಾ ರೀತಿಯಲ್ಲೂ ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಸಜ್ಜಾಗಬಹುದು. ಇದಕ್ಕಾಗಿ ಈಗಾಗಲೇ ಬಿಸಿಸಿಐ ಬಲಿಷ್ಠ ಪಡೆಯನ್ನು ರೂಪಿಸಲು ಹೊರಟಿದ್ದು, ಇದಾಗ್ಯೂ ತಂಡದಲ್ಲಿರುವ ಹಿರಿಯ ಆಟಗಾರನನ್ನು ಈ ಎರಡೂ ಟೂರ್ನಿಗಳಿಂದ ಕೈ ಬಿಡಲು ನಿರ್ಧರಿಸಲಾಗಿದೆ.
ಹೌದು, ಭಾರತ ತಂಡದ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿರುವ ಮೊಹಮ್ಮದ್ ಶಮಿ ಏಷ್ಯಾಕಪ್ಗೆ ಆಯ್ಕೆಯಾಗುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಇದರೊಂದಿಗೆ ಈ ಸಲ ನಡೆಯುವ ಟಿ20 ವಿಶ್ವಕಪ್ ತಂಡದಲ್ಲೂ ಶಮಿಗೆ ಚಾನ್ಸ್ ಸಿಗುವುದಿಲ್ಲ. ಈಗಾಗಲೇ ಈ ಬಗ್ಗೆ ಬಿಸಿಸಿಐ ಶಮಿಗೆ ಸೂಚನೆ ನೀಡಿದ್ದು, ಮುಂಬರುವ ದಿನಗಳಲ್ಲಿ ಏಕದಿನ ಹಾಗೂ ಟೆಸ್ಟ್ ಪಂದ್ಯಗಳತ್ತ ಹೆಚ್ಚಿನ ಗಮನಹರಿಸಲು ತಿಳಿಸಲಾಗಿದೆ. ಹೀಗಾಗಿ ಶಮಿಗೆ ಏಷ್ಯಾಕಪ್ ತಂಡದಲ್ಲಿ ಅವಕಾಶ ನೀಡಲಾಗುತ್ತಿಲ್ಲ ಎಂದು ಆಯ್ಕೆ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.
ಇದೇ ಕಾರಣದಿಂದಾಗಿ ಅವರನ್ನು 2021 ರ ಟಿ20 ವಿಶ್ವಕಪ್ ನಂತರ ಟೀಮ್ ಇಂಡಿಯಾ ಟಿ20 ತಂಡಕ್ಕೆ ಆಯ್ಕೆ ಮಾಡಿಲ್ಲ. ಅಲ್ಲದೆ ಮುಂಬರುವ ಪ್ರಮುಖ ಟೂರ್ನಿಗಳಲ್ಲೂ ಅವಕಾಶ ಕಲ್ಪಿಸಲಾಗುತ್ತಿಲ್ಲ. ಹೀಗಾಗಿ ಮೊಹಮ್ಮದ್ ಶಮಿಗೆ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಅವಲಂಬಿತರಾಗಲು ತಿಳಿಸಲಾಗಿದೆ.
ಶಮಿ ಅವರು ಹಿರಿಯ ವೇಗಿ. ನಾವು ಅವರನ್ನು ಟೆಸ್ಟ್ ಪಂದ್ಯಗಳಿಗೆ ಸಿದ್ಧಪಡಿಸಬೇಕಾಗಿದೆ. ಹೀಗಾಗಿ ಅವರ ಹೆಸರನ್ನು ಟಿ20ಗೆ ಪರಿಗಣಿಸುತ್ತಿಲ್ಲ. ಟಿ20 ವಿಶ್ವಕಪ್ ಬಳಿಕ ಅವರ ಕೆಲಸದ ಹೊರೆ ನಿರ್ವಹಣೆ ಕುರಿತು ನಾವು ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. ಸದ್ಯ ಅವರನ್ನು ಟಿ20 ಕ್ರಿಕೆಟ್‌ಗೆ ಸೇರಿಸಿಕೊಳ್ಳುವ ಯಾವುದೇ ಯೋಚನೆ ಇಲ್ಲ. ಟಿ20ಯಲ್ಲಿ ನಮ್ಮ ಗಮನ ಯುವಕರ ಮೇಲಿರುತ್ತದೆ ಎಂದು ಆಯ್ಕೆ ಸಮಿತಿ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮೊಹಮ್ಮದ್ ಶಮಿ ಪ್ರಮುಖ ಪಾತ್ರವಹಿಸಿದ್ದರು. ತಂಡದ ಹಿರಿಯ ವೇಗಿಯಾಗಿ ಕಾಣಿಸಿಕೊಂಡಿದ್ದ ಶಮಿ 20 ವಿಕೆಟ್ ಉರುಳಿಸಿ ಮಿಂಚಿದ್ದರು. ಇದಾಗ್ಯೂ ಸೌತ್ ಆಫ್ರಿಕಾ, ಐರ್ಲೆಂಡ್, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಗಳಿಗೆ ಶಮಿಯನ್ನು ಆಯ್ಕೆ ಮಾಡಿರಲಿಲ್ಲ. ಇದೀಗ ಮೊಹಮ್ಮದ್ ಶಮಿ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. ಇದರೊಂದಿಗೆ ಮೊಹಮ್ಮದ್ ಶಮಿ ಅವರ ಟೀಮ್ ಇಂಡಿಯಾ ಟಿ20 ಕ್ರಿಕೆಟ್ ಕೆರಿಯರ್ ಮುಗಿದ ಅಧ್ಯಾಯ ಎನ್ನಬಹುದು.




