ಕ್ಯಾನ್ಸರ್ ಗೆದ್ದ ಆಟಗಾರ, ಇದೀಗ ಜಿಂಬಾಬ್ವೆ ಕ್ರಿಕೆಟ್ ಅಂಗಳದ ಹೊಸ “ರಾಜಾ”..!
Sikandar Raza: ಈ ಹಂತದಲ್ಲಿ 110 ರನ್ ಬಾರಿಸಿದ್ದ ಇನ್ನೊಸೆಂಟ್ ಕಯಾ ಔಟಾದರೆ, ಸಿಕಂದರ್ ರಾಜಾ ಎಚ್ಚರಿಕೆಯ ಆಟ ಮುಂದುವರೆಸಿದರು. ಪರಿಣಾಮ ರಾಜಾ ಬ್ಯಾಟ್ನಿಂದ 109 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 8 ಫೋರ್ನೊಂದಿಗೆ ಅಜೇಯ 135 ರನ್ ಮೂಡಿಬಂತು.

304 ರನ್ಗಳ ಟಾರ್ಗೆಟ್…ಈ ಸ್ಕೋರ್ ಬೆನ್ನತ್ತಿದ ತಂಡ 6 ರನ್ಗಳಿಸುವಷ್ಟರಲ್ಲಿ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. ಇದಾಗ್ಯೂ ಅಂತಿಮವಾಗಿ ಚೇಸಿಂಗ್ ಮೂಲಕ ತಂಡವೊಂದು ಜಯ ಸಾಧಿಸುತ್ತದೆ ಎಂದು ಭಾವಿಸುತ್ತೀರಾ? ಅದು ಕೂಡ ಪ್ರಮುಖ ಬೌಲಿಂಗ್ ಬಳಗವನ್ನು ಹೊಂದಿರುವ ತಂಡದ ವಿರುದ್ದ ಎಂದರೆ…ಹೌದು, ಜಿಂಬಾಬ್ವೆ ತಂಡವು ಇದೀಗ ಮತ್ತೊಮ್ಮೆ ಕ್ರಿಕೆಟ್ ಅಂಗಳದಲ್ಲಿ ಪುಟಿದೇಳುತ್ತಿದೆ. ಪ್ರತಿ ಪಂದ್ಯದಲ್ಲೂ ಒಬ್ಬೊಬ್ಬರು ಮ್ಯಾಚ್ ವಿನ್ನರ್ಗಳು ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಅನುಭವಿ ಆಟಗಾರರಿಂದ ಸ್ಥಿರ ಪ್ರದರ್ಶನ ಮೂಡಿ ಬರುತ್ತಿದೆ. ಇದೇ ಕಾರಣದಿಂದಾಗಿ ಇತ್ತೀಚೆಗೆ ಬಾಂಗ್ಲಾದೇಶ ವಿರುದ್ದ ಜಿಂಬಾಬ್ವೆ ಟಿ20 ಸರಣಿ ಗೆದ್ದುಕೊಂಡಿತ್ತು. ಆ ಗೆಲುವಿನ ರೂವಾರಿಗಳೆಂದರೆ ರಿಯಾನ್ ಬರ್ಲ್ ಮತ್ತು ಸಿಕಂದರ್ ರಾಜಾ. ಇದೀಗ ಮೊದಲ ಏಕದಿನ ಪಂದ್ಯದಲ್ಲೂ ಜಿಂಬಾಬ್ವೆ ಭರ್ಜರಿ ಜಯ ಸಾಧಿಸಿದೆ. ಅದು ಕೂಡ 304 ರನ್ಗಳನ್ನು ಚೇಸ್ ಮಾಡುವ ಮೂಲಕ ಎಂಬುದು ಇಲ್ಲಿ ವಿಶೇಷ.
ಬಾಂಗ್ಲಾ ನೀಡಿದ ಬೃಹತ್ ಟಾರ್ಗೆಟ್ ಅನ್ನು ಬೆನ್ನತ್ತಿದ ಜಿಂಬಾಬ್ವೆ ಕೇವಲ 6 ರನ್ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಸಿಕಂದರ್ ರಾಜಾ ಹಾಗೂ ಇನ್ನೋಸೆಂಟ್ ಕಾಯಾ 192 ರನ್ಗಳ ಜೊತೆಯಾಟವಾಡಿದರು. ಇಬ್ಬರೂ ಅಮೋಘ ಶತಕ ಸಿಡಿಸಿ ಬಾಂಗ್ಲಾ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಕೊನೆಯ 10 ಓವರ್ಗಳಲ್ಲಿ ಜಿಂಬಾಬ್ವೆ ತಂಡಕ್ಕೆ 62 ರನ್ಗಳ ಅವಶ್ಯಕತೆಯಿತ್ತು.
ಈ ಹಂತದಲ್ಲಿ 110 ರನ್ ಬಾರಿಸಿದ್ದ ಇನ್ನೊಸೆಂಟ್ ಕಯಾ ಔಟಾದರೆ, ಸಿಕಂದರ್ ರಾಜಾ ಎಚ್ಚರಿಕೆಯ ಆಟ ಮುಂದುವರೆಸಿದರು. ಪರಿಣಾಮ ರಾಜಾ ಬ್ಯಾಟ್ನಿಂದ 109 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 8 ಫೋರ್ನೊಂದಿಗೆ ಅಜೇಯ 135 ರನ್ ಮೂಡಿಬಂತು. ಅಲ್ಲದೆ ಅಂತಿಮ ಹಂತದವರೆಗೆ ನಿಂತು 49ನೇ ಓವರ್ನ 2ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಸಿಕಂದರ್ ರಾಜಾ ಜಿಂಬಾಬ್ವೆ ತಂಡಕ್ಕೆ 5 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.
ವಿಶೇಷ ಎಂದರೆ ಇದೇ ಸಿಕಂದರ್ ರಾಜಾ ಈ ಹಿಂದೊಮ್ಮೆ ಜಿಂಬಾಬ್ವೆ ತಂಡದಲ್ಲಿ ಹೊಸ ಭರವಸೆ ಮೂಡಿಸಿದ್ದರು. ಇದಾದ ಬಳಿಕ ಅವರಿಗೆ ಅಸ್ಥಿಮಜ್ಜೆಯಲ್ಲಿ ಸೋಂಕು ತಗುಲಿತ್ತು. ಇದರಿಂದ ಸಿಕಂದರ್ ರಾಜಾ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಅಪಾಯ ಎದುರಿಸಿದ್ದರು. ಇದೇ ಕಾರಣದಿಂದಾಗಿ ರಾಜಾ ಕೆಲ ಕಾಲ ಮೈದಾನದಿಂದ ಹೊರಗುಳಿದಿದ್ದರು. ಅದೃಷ್ಟವಶಾತ್ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದ ಪರಿಣಾಮ ಅವರು ಗುಣಮುಖರಾಗಿ ಮತ್ತೆ ಜಿಂಬಾಬ್ವೆ ತಂಡದಲ್ಲಿ ಅವಕಾಶ ಪಡೆದರು.
ಆದರೆ ಅವರ ಕಂಬ್ಯಾಕ್ ಮಾತ್ರ ಅದ್ಭುತ ಫಾರ್ಮ್ನೊಂದಿಗೆ ಎಂಬುದು ವಿಶೇಷ. ಬಾಂಗ್ಲಾದೇಶ್ ವಿರುದ್ದದ ಸರಣಿಯಲ್ಲಿ ಪ್ರತಿ ಪಂದ್ಯದಲ್ಲೂ ಆಲ್ರೌಂಡರ್ ಪ್ರದರ್ಶನ ನೀಡುತ್ತಿರುವ ಸಿಕಂದರ್ ರಾಜಾ ಇದೀಗ ಜಿಂಬಾಬ್ವೆ ತಂಡಕ್ಕೆ ಹೊಸ ಭರವಸೆ ಮೂಡಿಸಿದ್ದಾರೆ. ಅಷ್ಟೇ ಅಲ್ಲದೆ ತಂಡವು ಅತ್ಯುತ್ತಮ ಪ್ರದರ್ಶನ ಮುಂದುವರೆಸಿದ್ದದ್ದು, ಮುಂಬರುವ ಟೀಮ್ ಇಂಡಿಯಾ ವಿರುದ್ದದ ಸರಣಿಯಲ್ಲೂ ಭರ್ಜರಿ ಪ್ರದರ್ಶನ ನೀಡಿ ಮತ್ತೊಮ್ಮೆ ವಿಶ್ವ ಕ್ರಿಕ್ರೆಟ್ ಪ್ರೇಮಿಗಳ ಮನಗೆಲ್ಲುವ ಇರಾದೆಯಲ್ಲಿದ್ದಾರೆ.




