
ಬೆಂಗಳೂರು (ಏ. 26): ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಕಳಪೆ ಪ್ರದರ್ಶನ ಮುಂದೆವರೆದಿದೆ. ಈ ಋತುವಿನಲ್ಲಿ ಸಿಎಸ್ಕೆ ತನ್ನ 9 ನೇ ಪಂದ್ಯದಲ್ಲಿ ಹೀನಾಯ ಸೋಲನ್ನು ಎದುರಿಸಬೇಕಾಯಿತು. ನಿನ್ನೆಯ ಪಂದ್ಯದಲ್ಲಿ ಸಿಎಸ್‌ಕೆ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೂಡ 5 ವಿಕೆಟ್‌ಗಳಿಂದ ಸೋತಿತು. ಈ ಸೋಲಿನಿಂದಾಗಿ ತಂಡವು ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಹೀನಾಯ ಸೋಲಿನಿಂದ ಸಿಎಸ್‌ಕೆ ನಾಯಕ ಎಂಎಸ್ ಧೋನಿ ತುಂಬಾ ನಿರಾಶೆಗೊಂಡಂತೆ ಕಂಡುಬಂದರು. ಯಾಕೆಂದರೆ ಧೋನಿ ಕೂಡ ತಮ್ಮ ತಂಡಕ್ಕೆ ಹೆಚ್ಚಿನ ಕೊಡುಗೆ ಒದಗಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ತಂಡವು ಸಾಕಷ್ಟು ನಷ್ಟ ಅನುಭವಿಸಿದೆ. ಸಿಎಸ್‌ಕೆ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಏತನ್ಮಧ್ಯೆ, ಸನ್‌ರೈಸರ್ಸ್ ವಿರುದ್ಧದ ಸೋಲಿನ ನಂತರ ಧೋನಿ ಏನು ಹೇಳಿದ್ದಾರೆ ನೋಡಿ.
ತಂಡದ ಸೋಲಿನ ನಂತರ, ನಾಯಕ ಧೋನಿ ಬೇಸರ ವ್ಯಕ್ತಪಡಿಸಿ, ತಮ್ಮ ತಂಡ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇತ್ತು, ಇದರಿಂದಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸುವುದು ಕಷ್ಟವಾಯಿತು ಎಂದು ಹೇಳಿದರು. ಮೊದಲ ಇನ್ನಿಂಗ್ಸ್ ಪಿಚ್ ಉತ್ತಮವಾಗಿದೆ ಎಂದು ನಾಯಕ ಬಣ್ಣಿಸಿದರೂ, ಚೆಂಡು ಹೆಚ್ಚು ತಿರುವು ಪಡೆಯುತ್ತಿರಲಿಲ್ಲವಾದ್ದರಿಂದ ಆ ಪಿಚ್‌ನಲ್ಲಿ 155 ರನ್‌ಗಳ ಸ್ಕೋರ್ ಸಮರ್ಥನೀಯವಲ್ಲ ಎಂದು ಒಪ್ಪಿಕೊಂಡರು. ‘ಹೌದು, 8 ರಿಂದ 10 ಓವರ್‌ಗಳ ನಂತರ ಪಿಚ್ ವೇಗದ ಬೌಲರ್‌ಗಳಿಗೆ ಸ್ವಲ್ಪ ಭಿನ್ನವಾಯಿತು, ಆದರೆ ನಾವು ನಮ್ಮ ಖಾತೆಗೆ ಇನ್ನೂ ಕೆಲವು ರನ್‌ಗಳನ್ನು ಸೇರಿಸಬೇಕಾಗಿತ್ತು’ ಎಂದು ಹೇಳಿದ್ದಾರೆ.
“ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಪಿನ್ನರ್‌ಗಳಿಗೆ ಸ್ವಲ್ಪ ಸಹಾಯ ಸಿಕ್ಕಿತು ಮತ್ತು ಅವರು ಉತ್ತಮ ಲೈನ್ ಮತ್ತು ಲೆಂತ್‌ನಲ್ಲಿ ಬೌಲಿಂಗ್ ಮಾಡಿದರು, ಆದರೆ ತಂಡವು ಸುಮಾರು 15-20 ರನ್ ಕಡಿಮೆ ಗಳಿಸಿತು ” ಎಂದು ಧೋನಿ ಹೇಳಿದರು. ಬ್ರೆವಿಸ್ ಬ್ಯಾಟಿಂಗ್ ಅನ್ನು ಶ್ಲಾಘಿಸಿದ ನಾಯಕ, ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಇದೇ ರೀತಿಯ ಬ್ಯಾಟ್ಸ್‌ಮನ್ ಅಗತ್ಯವಿದೆ, ವಿಶೇಷವಾಗಿ ಸ್ಪಿನ್ನರ್‌ಗಳು ದಾಳಿಗೆ ಇಳಿದಾಗ ಎಂದು ಹೇಳಿದರು. ನಾವು ಬ್ಯಾಟಿಂಗ್ ಮೂಲಕ ಅಥವಾ ದೊಡ್ಡ ಹೊಡೆತಗಳನ್ನು ಹೊಡೆಯುವ ಮೂಲಕ ಆ ಒತ್ತಡವನ್ನು ನಿವಾರಿಸಿಕೊಳ್ಳಬೇಕು. ಇಲ್ಲಿಯೇ ನಾವು ಹಿಂದುಳಿದಿದ್ದೇವೆ ಮತ್ತು ಸ್ಪಿನ್ ವಿರುದ್ಧ ತ್ವರಿತ ರನ್ ಗಳಿಸುವಲ್ಲಿ ವಿಫಲರಾಗಿದ್ದೇವೆ. ಅಂತಹ ಪಂದ್ಯಾವಳಿಗಳಲ್ಲಿ ಕೆಲವು ನ್ಯೂನ್ಯತೆಗಳನ್ನು ಸುಧಾರಿಸುವ ಮೂಲಕ ತಂಡವನ್ನು ಬಲಪಡಿಸಬೇಕು ಎಂದು ಅವರು ಹೇಳಿದರು.
RCB vs RR: ಆರ್‌ಸಿಬಿ ವಿರುದ್ಧ ಸೋತ ದುಃಖದಲ್ಲಿ ಎಣ್ಣೆ ಅಂಗಡಿಗೆ ಹೋದ ರಾಜಸ್ಥಾನದ ಸಿಇಒ: ವೈರಲ್ ವಿಡಿಯೋ
ಕೆಲವು ಆಟಗಾರರಿಗೆ ಹೆಚ್ಚುವರಿ ಅವಕಾಶಗಳನ್ನು ನೀಡಬಹುದು, ಆದರೆ ನಾಲ್ವರು ಆಟಗಾರರು ಒಟ್ಟಿಗೆ ವಿಫಲವಾದಾಗ, ಬದಲಾವಣೆಗಳನ್ನು ಮಾಡುವುದು ಅಗತ್ಯವಾಗುತ್ತದೆ ಎಂದು ಧೋನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಾವು ಸಾಕಷ್ಟು ರನ್ ಗಳಿಸಲು ಸಾಧ್ಯವಾಗುತ್ತಿಲ್ಲ, ಮತ್ತು ಇಂದಿನ ಕಾಲದಲ್ಲಿ ರನ್ ಗಳಿಸುವುದು ಬಹಳ ಮುಖ್ಯ. ಪ್ರತಿ ಪಂದ್ಯದಲ್ಲೂ 180-200 ರನ್ ಗಳಿಸುವುದು ಅನಿವಾರ್ಯವಲ್ಲ, ಆದರೆ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ರನ್ ಗಳಿಸಬೇಕು. ಧೋನಿಯ ಈ ಸುದೀರ್ಘ ಮಾತುಗಳಿಂದ, ಅವರು ತಂಡದ ಪ್ರದರ್ಶನದಿಂದ ತುಂಬಾ ನಿರಾಶೆಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ