MS Dhoni: ನೀವು ನನ್ನ ನಾಯಕತ್ವದಲ್ಲಿ ಆಡಬೇಡಿ: ಗೆದ್ದರೂ ಪಂದ್ಯದ ಬಳಿಕ ಬೌಲರ್​​ಗಳ ಮೈಚಳಿ ಬಿಡಿಸಿದ ಎಂಎಸ್ ಧೋನಿ

|

Updated on: Apr 04, 2023 | 11:08 AM

CSK vs LSG, IPL 2023: ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಎಂಎಸ್ ಧೋನಿ, ಬೌಲರ್​ಗಳು ನೀಡಿದ ಪ್ರದರ್ಶನದಿಂದ ಕೋಪಗೊಂಡು ನೀವು ಹೊಸ ನಾಯಕನ ಅಡಿಯಲ್ಲಿ ಆಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

MS Dhoni: ನೀವು ನನ್ನ ನಾಯಕತ್ವದಲ್ಲಿ ಆಡಬೇಡಿ: ಗೆದ್ದರೂ ಪಂದ್ಯದ ಬಳಿಕ ಬೌಲರ್​​ಗಳ ಮೈಚಳಿ ಬಿಡಿಸಿದ ಎಂಎಸ್ ಧೋನಿ
ms dhoni post match presentation
Follow us on

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ನಾಲ್ಕು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2023 ರಲ್ಲಿ (IPL 2023) ಸೋಲಿನ ಮೂಲಕ ಅಭಿಯಾನ ಆರಂಭಿಸಿತ್ತು. ಆದರೆ, ದ್ವಿತೀಯ ಪಂದ್ಯದಲ್ಲಿ ಫಿನಿಕ್ಸ್​ನಂತೆ ಕಮ್​ಬ್ಯಾಕ್ ಮಾಡಿ ಜಯ ಸಾಧಿಸಿತು. ಸೋಮವಾರ ಚೆನ್ನೈನ ಎಮ್​ಎ ಚಿದಂಬರಂ ಸ್ಟೇಡಿಯಂನಲ್ಲಿ ಲಖನೌ ಸೂಪರ್ ಜೇಂಟ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್​ಕೆ (CSK vs LDG) 12 ರನ್​ಗಳ ರೋಚಕ ಗೆಲುವು ಕಂಡಿತು. ಎದುರಾಳಿಗೆ ಗೆಲ್ಲಲು 200+ ರನ್​ಗಳ ಗುರಿ ನೀಡಿದ್ದರೂ ಎಲ್​​ಎಸ್​ಜಿ ಟಾರ್ಗೆಟ್ ಹತ್ತಿರ ಸಮೀಪಿಸಿ ಸೋಲುಂಡಿತು. ಇದರಿಂದ ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಕೋಪಗೊಂಡಿದ್ದು ತಮ್ಮ ತಂಡದ ಬೌಲರ್​ಗಳ ಮೈಚಳಿ ಬಿಡಿಸಿದ್ದಾರೆ.

ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಧೋನಿ, ಬೌಲರ್​ಗಳು ನೀಡಿದ ಪ್ರದರ್ಶನದಿಂದ ಕೋಪಗೊಂಡಿದ್ದಾರೆ. ಈ ಪಂದ್ಯದಲ್ಲಿ ಸಿಎಸ್​ಕೆ ಬೌಲರ್‌ಗಳು ಅತಿಯಾಗಿ ವೈಡ್ ಹಾಗೂ ನೋ ಬಾಲ್‌ಗಳನ್ನು ಎಸೆದಿದ್ದಾರೆ. ದೀಪಕ್ ಚಹರ್ ನಾಲ್ಕು ಓವರ್‌ಗಳ ಬೌಲಿಂಗ್‌ನಲ್ಲಿ ಒಂದೂ ವಿಕೆಟ್ ಪಡೆಯದೆ 55 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಅಲ್ಲದೆ 5 ವೈಡ್ ಎಸೆತಗಳನ್ನು ಎಸೆದಿದ್ದರು. ಒಟ್ಟಾರೆಯಾಗಿ ಚೆನ್ನೈ ಬೌಲರ್​ಗಳು 3 ನೋ ಬಾಲ್‌ಗಳು ಮತ್ತು 13 ವೈಡ್‌ಗಳನ್ನು ಬಿಟ್ಟುಕೊಟ್ಟರು. ಇದರಿಂದ ಸಿಟ್ಟಾಗಿರುವ ಧೋನಿ, ಪಂದ್ಯದ ಮುಕ್ತಾಯದ ಬಳಿಕ ಎಚ್ಚರಿಕೆ ನೀಡಿದ್ದಾರೆ. ನೋ ಬಾಲ್, ವೈಡ್​ಗಳನ್ನು ಎಸೆಯುವುದನ್ನು ನಿಲ್ಲಿಸಿ, ಇಲ್ಲವೇ ಹೊಸ ನಾಯಕನ ಅಡಿಯಲ್ಲಿ ಆಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ
Chahal-Dhanashree Verma: ನಮ್ಮಿಬ್ಬರ ನಡುವೆ ಸರಿಯಿಲ್ಲ ಎಂದವರಿಗೆ ಪಂದ್ಯದ ಮಧ್ಯೆಯೇ ತಕ್ಕ ಉತ್ತರ ನೀಡಿದ ಚಹಲ್-ಧನಶ್ರೀ
IPL 2023 Points Table: ಐಪಿಎಲ್ 2023 ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?, ಟೇಬಲ್ ಟಾಪರ್ ಯಾರು?
DC vs GT, IPL 2023: ವಾರ್ನರ್ vs ಹಾರ್ದಿಕ್: ಐಪಿಎಲ್​ನಲ್ಲಿಂದು ಡೆಲ್ಲಿ- ಗುಜರಾತ್ ಮುಖಾಮುಖಿ
CSK vs LSG: ಚೆನ್ನೈ ಸೂಪರ್ ಕಿಂಗ್ಸ್-ಲಖನೌ ಹೈವೋಲ್ಟೇಜ್ ಪಂದ್ಯದ ರೋಚಕ ಫೋಟೋಗಳು ನೋಡಿ

IPL 2023: 140 ದಶಲಕ್ಷ ವೀಕ್ಷಕರು; ಐಪಿಎಲ್ ವೀಕ್ಷಣೆಯಲ್ಲಿ ದಾಖಲೆ ಬರೆದ ಡಿಸ್ನಿ ಸ್ಟಾರ್

”ನೋ ಬಾಲ್ ಮತ್ತು ವೈಡ್‌ಗಳನ್ನು ಬೌಲ್ ಮಾಡಿ ಹೆಚ್ಚುವರಿ ಎಸೆತಗಳನ್ನು ಹಾಕುತ್ತಿದ್ದೇವೆ. ಅವುಗಳನ್ನು ಕಡಿತಗೊಳಿಸಬೇಕಾಗಿದೆ. ಇಲ್ಲದಿದ್ದರೆ ಆಟದ ಮೇಲೆ ಪರಿಣಾಮ ಬೀರಲಿದೆ. ಇದು ಮುಂದುವರಿಯಬಾರದು. ಬೌಲರ್​ಗಳು ನೋಬಾಲ್ ಇಲ್ಲದೆ, ವೈಡ್‌ಗಳನ್ನು ಕಡಿಮೆ ಮಾಡಿಕೊಂಡು ಬೌಲಿಂಗ್ ನಡೆಸಬೇಕು. ಇಲ್ಲವಾದರೆ ಅವರು ಹೊಸ ನಾಯಕನ ಅಡಿಯಲ್ಲಿ ಆಡಬೇಕಾಗುತ್ತದೆ,” ಎಂದು ಧೋನಿ ಹೇಳಿದ್ದಾರೆ.

 

“ಇದೊಂದು ಹೈ ಸ್ಕೋರಿಂಗ್ ಪಂದ್ಯವಾಗಿತ್ತು. ನಾವೆಲ್ಲರೂ ವಿಕೆಟ್ ಹೇಗೆ ಪಡೆಯುವುದು ಎಂದು ಯೋಚಿಸುತ್ತಿದ್ದೆವು. ಈ ಬಗ್ಗೆ ನಮಗೆ ಅನುಮಾನವಿದ್ದವು. ಇದೊಂದು ಪರಿಪೂರ್ಣ ಪಂದ್ಯ ಎಂದು ನಾನು ಭಾವಿಸುತ್ತೇನೆ. 5- 6 ವರ್ಷಗಳ ಬಳಿಕ ಕ್ರೀಡಾಂಗಣ ಭರ್ತಿಯಾಗಿದೆ. ಇದು ಸಂತಸದ ವಿಚಾರ. ತವರಿನಲ್ಲಿ ಮುಂದೆ 6 ಪಂದ್ಯಗಳು ನಡೆಯಲಿದ್ದು, ಅಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಇದು ಬಹಳ ನಿಧಾನಗತಿಯ ಪಿಚ್ ಆಗಿರಲಿದೆ ಎಂದು ನಾನು ಭಾವಿಸಿದ್ದೆ. ಆದರೆ, ಇದು ಹೆಚ್ಚು ರನ್‌ಗಳಿಸಬಹುದಾದ ಪಿಚ್ ಆಗಿದೆ,,” ಎಂಬುದು ಧೋನಿ ಮಾತು.

217 ರನ್ ಗಳಿಸಿದ ಸಿಎಸ್​ಕೆ:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈಗೆ ಓಪನರ್​ಗಳಾದ ಗಾಯಕ್ವಾಡ್ (57) ಹಾಗೂ ಕಾನ್ವೆ (47) ಸ್ಫೋಟಕ ಬ್ಯಾಟಿಂಗ್ ನಡೆಸಿ ಶತಕದ ಜೊತೆಯಾಟ ಆಡಿದರು. 9.1 ಓವರ್​ನಲ್ಲಿ ಇವರು 110 ರನ್ ಕಲೆಹಾಕಿದರು. ಶಿವಂ ದುಬೆ 16 ಎಸೆತಗಳಲ್ಲಿ 27 ರನ್ ಬಾರಿಸಿದರೆ, ಮೊಯೀನ್ ಅಲಿ 19, ಬೆನ್ ಸ್ಟೋಕ್ಸ್ 8, ಜಡೇಜಾ 3 ಹಾಗೂ ರಾಯುಡು ಅಜೇಯ 27 ರನ್ ಗಳಿಸಿದರು. ಕೊನೆಯ ಓವರ್​ನಲ್ಲಿ ಧೋನಿ 2 ಸಿಕ್ಸ್ ಸಿಡಿಸಿದರು. ಅಂತಿಮವಾಗಿ ಚೆನ್ನೈ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು. ಎಲ್​​ಎಸ್​ಜಿ ಪರ ಮಾರ್ಕ್ ವುಡ್ ಹಾಗೂ ಬಿಷ್ಟೋಯಿ ತಲಾ 3 ವಿಕೆಟ್ ಪಡೆದರು.

ಟಾರ್ಗೆಟ್ ಬೆನ್ನಟ್ಟಿದ ಲಖನೌ ಕೂಡ ಸ್ಫೋಟಕ ಆರಂಭ ಕಂಡಿತು. ಖೈಲ್ ಮೇಯರ್ಸ್ 22 ಎಸೆತಗಳಲ್ಲಿ 53 ರನ್ ಸಿಡಿಸಿದರು. ಮೊದಲ ವಿಕೆಟ್​ಗೆ ಕೆಎಲ್ ರಾಹುಲ್ (20) ಜೊತೆಗೂಡಿ 79 ರನ್​ಗಳು ಬಂದವು. ಹೂಡ (2) ಹಾಗೂ ಕ್ರುನಾಲ್ ಪಾಂಡ್ಯ (9) ಬೇಗನೆ ನಿರ್ಗಮಿಸಿದರು. ಸ್ಟೋಯಿನಿಸ್ 21, ಬದೋನಿ 23 ಹಾಗೂ ಪೂರನ್ 32 ರನ್​ಗಳ ಕೊಡುಗೆ ನೀಡಿ ಗೆಲುವಿನ ಆಸೆ ಚಿಗುರಿಸಿದರು. ಆದರೆ, ಗೆಲುವು ಸಾಧ್ಯವಾಗಲಿಲ್ಲ. ಲಖನೌ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 205 ರನ್ ಬಾರಿಸಲಷ್ಟೆ ಶಕ್ತವಾಯಿತು. ಸಿಎಸ್​ಕೆ ಪರ ಮೊಯಿನ್ ಅಲಿ 4 ವಿಕೆಟ್ ಕಿತ್ತು ಮಿಂಚಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ