ಐಸಿಸಿ ಟಿ20 ವಿಶ್ವಕಪ್ಗಾಗಿ (T20 World Cup 2021) ಟೀಮ್ ಇಂಡಿಯಾವನ್ನು (Team India) ಪ್ರಕಟಿಸಲಾಗಿದೆ. 15 ಸದಸ್ಯರ ಬಳಗದಲ್ಲಿ ಅನುಭವಿ ಹಾಗೂ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ. ಅದರ ಜೊತೆಗೆ ಅಚ್ಚರಿ ಎಂಬಂತೆ ತಂಡದಲ್ಲಿ ಮಾರ್ಗದರ್ಶಕರಾಗಿ (ಮೆಂಟರ್) ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು (MS Dhoni) ಆಯ್ಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಇಷ್ಟು ವರ್ಷಗಳ ಕಾಲ ಇಲ್ಲದಿದ್ದ ಟೀಮ್ ಇಂಡಿಯಾ ಮೆಂಟರ್ ಹುದ್ದೆಯನ್ನು ಬಿಸಿಸಿಐ ಯಾಕೆ ಸೃಷ್ಟಿಸಿದೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ಟೀಮ್ ಇಂಡಿಯಾ ಮುಂದಿನ ಕೋಚ್.
ಹೌದು, 7 ವರ್ಷಗಳಲ್ಲಿ ಟೀಮ್ ಇಂಡಿಯಾಗೆ ಮೂರು ಪ್ರಮುಖ ಐಸಿಸಿ ಟ್ರೋಫಿ ಗೆದ್ದುಕೊಟ್ಟ ನಾಯಕ ಎಂಬ ಹೆಗ್ಗಳಿಕೆ ಧೋನಿ ಅವರಿಗೆ ಸಲ್ಲುತ್ತದೆ. 2007 ರಲ್ಲಿ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟದೊಂದಿಗೆ ಆರಂಭವಾದ ಧೋನಿ ಯುಗ, 2011 ಏಕದಿನ ವಿಶ್ವಕಪ್ ಮತ್ತು 2013 ಐಸಿಸಿ ಚಾಂಪಿಯನ್ಸ್ ಟ್ರೋಫಿಯೊಂದಿಗೆ ಅಂತ್ಯಗೊಂಡಿತ್ತು. ಇದಾಗಿ 8 ವರ್ಷಗಳು ಕಳೆದರೂ ಟೀಮ್ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಇದನ್ನೇ ಈಗ ಬಿಸಿಸಿಐ ಪ್ರತಿಷ್ಠೆಯಾಗಿ ಸ್ವೀಕರಿಸಿದೆ.
ಏಕೆಂದರೆ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿಕೊಂಡಿರುವ ಬಿಸಿಸಿಐ ಬಲಿಷ್ಠ ಟೀಮ್ ಇಂಡಿಯಾವನ್ನು ಕಟ್ಟಿದರೂ ಕಳೆದ 8 ವರ್ಷಗಳಲ್ಲಿ ಯಾವುದೇ ಐಸಿಸಿ ಪ್ರಶಸ್ತಿ ಗೆಲ್ಲಲಾಗಲಿಲ್ಲ. ಹೀಗಾಗಿ ಮುಂದಿನ ಮೂರು ಐಸಿಸಿ ಟೂರ್ನಿಗಳ ಮೇಲೆ ಬಿಸಿಸಿಐ ಕಣ್ಣಿಟ್ಟಿದೆ. ಇದಕ್ಕಾಗಿ ಟೀಮ್ ಇಂಡಿಯಾದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ತಂಡದ ಮಾರ್ಗದರ್ಶಕರಾಗಿ ಆಯ್ಕೆ ಮಾಡಿದ್ದಾರೆ. ಅತ್ತ ಟಿ20 ವಿಶ್ವಕಪ್ ಬೆನ್ನಲ್ಲೇ ಕೋಚ್ ರವಿ ಶಾಸ್ತ್ರಿ ಅವರ ಕಾರ್ಯಾವಧಿ ಕೂಡ ಪೂರ್ಣಗೊಳ್ಳಲಿದೆ. ಆ ಬಳಿಕ ಮುಂದಿನ ಕೋಚ್ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಬಿಸಿಸಿಐ ಮೆಂಟರ್ ಸ್ಥಾನದೊಂದಿಗೆ ಸಣ್ಣ ಸುಳಿವು ನೀಡಿದ್ದಾರೆ.
2022ರಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಹಾಗೆಯೇ 2023 ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಜರುಗಲಿದೆ. ಈ ಟೂರ್ನಿಗಳಲ್ಲಿ ಟೀಮ್ ಇಂಡಿಯಾಗೆ ಅತ್ಯುತ್ತಮ ಮಾರ್ಗದರ್ಶನದ ಅಗತ್ಯವಿದೆ. ಹೊಸ ಕೋಚ್ ನೇಮಕವಾದರೂ ಆಟಗಾರರೊಂದಿಗೆ ಹೊಂದಿಕೊಳ್ಳುವಷ್ಟರಲ್ಲಿ ವಿಶ್ವಕಪ್ ಆರಂಭವಾಗಿರಲಿದೆ. ಹೀಗಾಗಿ ಐಸಿಸಿಯ ಮೂರು ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕ ಎನಿಸಿಕೊಂಡಿರುವ ಧೋನಿಯನ್ನು ತರಬೇತುದಾರರನ್ನಾಗಿ ನೇಮಿಸಲು ಬಿಸಿಸಿಐ ಆಸಕ್ತಿ ಹೊಂದಿದೆ. ಇದರ ಮೊದಲ ಹೆಜ್ಜೆಯಾಗಿ ಇದೀಗ ಟೀಮ್ ಇಂಡಿಯಾ ಮಾಜಿ ನಾಯಕನನ್ನು ಮೆಂಟರ್ ಆಗಿ ನೇಮಿಸಿಕೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಒಂದು ವೇಳೆ ಈ ಬಾರಿ ಟಿ20 ವಿಶ್ವಕಪ್ನಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದರೆ ಟೀಮ್ ಇಂಡಿಯಾದ ಮುಂದಿನ ಕೋಚ್ ಮಹೇಂದ್ರ ಸಿಂಗ್ ಧೋನಿ ಆಗುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು. ಇನ್ನು ಬೈ ಚಾನ್ಸ್ ಭಾರತ ಸೋತರೆ ಮುಂದಿನ ಎರಡು ವಿಶ್ವಕಪ್ ಅನ್ನು ಟಾರ್ಗೆಟ್ ಮಾಡಿ ಧೋನಿಗೆ ಕೋಚ್ ಜವಾಬ್ದಾರಿ ನೀಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಭವಿಷ್ಯದಲ್ಲಿ ಭಾರತ ತಂಡದ ತರಬೇತುದಾರರಾಗಿ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಹೀಗಿದೆ – ವಿರಾಟ್ ಕೊಹ್ಲಿ (ಕ್ಯಾಪ್ಟನ್), ರೋಹಿತ್ ಶರ್ಮಾ , ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಇಶಾನ್ ಕಿಶನ್ , ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ
ಮೀಸಲು ಆಟಗಾರರ ಆಟಗಾರರು – ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್.
ಕೋಚ್: ರವಿ ಶಾಸ್ತ್ರಿ, ಮಾರ್ಗದರ್ಶಕ: ಎಂಎಸ್ ಧೋನಿ.
ಇದನ್ನೂ ಓದಿ: ವಿಚ್ಛೇದಿತ ಮಹಿಳೆಯರನ್ನು ಪ್ರೀತಿಸಿ ಮದುವೆಯಾದ ಭಾರತೀಯ ಕ್ರಿಕೆಟಿಗರು ಇವರೇ
ಇದನ್ನೂ ಓದಿ: Shardul Thakur: ಮುಂಬೈ ಲೋಕಲ್ ಟ್ರೈನ್ ಹುಡುಗ ಇದೀಗ ಟೀಮ್ ಇಂಡಿಯಾ ಸೆನ್ಸೇಷನ್
ಇದನ್ನೂ ಓದಿ: IPL 2022: ಐಪಿಎಲ್ನ 2 ಹೊಸ ತಂಡಗಳಿಗಾಗಿ 6 ನಗರಗಳ ಆಯ್ಕೆ
(MS Dhoni may become the next coach of Indian cricket team)