ಟಿ20 ಕ್ರಿಕೆಟ್ ಟೂರ್ನಿಗೆ ಹೊಸ ಲೀಗ್ವೊಂದು ಸೇರ್ಪಡೆಯಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮೂಲಕ ಶುರುವಾದ ಈ ಪರ್ವ ಇದೀಗ ವಿಶ್ವದೆಲ್ಲೆಡೆ ವಿಸ್ತರಿಸಿಕೊಂಡಿದೆ. ಐಪಿಎಲ್ನಂತೆ ಇದೀಗ ವಿದೇಶದಲ್ಲಿ ಹಲವು ಲೀಗ್ ಗಳು ಹುಟ್ಟಿಕೊಂಡಿವೆ. ಪಾಕಿಸ್ತಾನ್ ಸೂಪರ್ ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್, ಯುಎಇ ಕ್ರಿಕೆಟ್ ಲೀಗ್, ಬಿಗ್ ಬ್ಯಾಷ್…ಹೀಗೆ ಮುಂದುವರೆಯುತ್ತಿರುವ ಲೀಗ್ಗೆ ಹೊಸ ಸೇರ್ಪಡೆ ಸೌತ್ ಆಫ್ರಿಕಾ ಟಿ20 ಲೀಗ್. ಆದರೆ ಇದುವರೆಗೆ ಬಂದ ಹಲವು ಲೀಗ್ಗಳಿಗೆ ಐಪಿಎಲ್ ಟೂರ್ನಿಯಂತೆ ಜನಪ್ರಿಯತೆ ಗಳಿಸಲು ಸಾಧ್ಯವಾಗಿಲ್ಲ. ಆದರೆ ಸೌತ್ ಆಫ್ರಿಕಾ ಲೀಗ್ ಜನಮನ್ನಣೆ ಪಡೆಯುವ ಸಾಧ್ಯತೆಯಿದೆ. ಏಕೆಂದರೆ ಈ ಲೀಗ್ನಲ್ಲಿ ಕಾಣಿಸಿಕೊಳ್ಳುತ್ತಿರುವ 6 ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳೇ ಖರೀದಿಸಿದೆ.
ಕೇಪ್ ಟೌನ್, ಜೋಹಾನ್ಸ್‌ಬರ್ಗ್, ಪೋರ್ಟ್ ಎಲಿಜಬೆತ್, ಪ್ರಿಟೋರಿಯಾ, ಡರ್ಬನ್ ಮತ್ತು ಪರ್ಲ್ ನಗರಗಳ ಕೇಂದ್ರೀಕೃತ ತಂಡಗಳು ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಕಣಕ್ಕಿಳಿಯಲಿದ್ದು, ಈ ತಂಡಗಳು ಪ್ರಸ್ತುತ ಐಪಿಎಲ್‌ನಲ್ಲಿನ ಫ್ರಾಂಚೈಸಿಗಳ ಒಡೆತನದಲ್ಲಿರುವುದು ವಿಶೇಷ. ಅದರಂತೆ ಕೇಪ್ ಟೌನ್ ತಂಡವನ್ನು ಮುಂಬೈ ಇಂಡಿಯನ್ಸ್ ಖರೀದಿಸಿದರೆ , ಜೋಹಾನ್ಸ್ ಬರ್ಗ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದೆ. ಇನ್ನು ಡರ್ಬನ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ಒಡೆತನದಲ್ಲಿದ್ದರೆ, ಪೋರ್ಟ್ ಎಲಿಜಬೆತ್ ತಂಡವನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿಸಿದೆ. ಹಾಗೆಯೇ ಪ್ರಿಟೋರಿಯಾ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರೆ, ಪರ್ಲ್ ತಂಡವನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಖರೀದಿಸಿದೆ. ಹೀಗಾಗಿಯೇ ಸೌತ್ ಆಫ್ರಿಕಾ ಟಿ20 ಲೀಗ್ ಅನ್ನು ಮಿನಿ ಐಪಿಎಲ್ ಎಂದೇ ವರ್ಣಿಸಲಾಗುತ್ತಿದೆ.
ಅತ್ತ ಜೋಹಾನ್ಸ್ ಬರ್ಗ್ ತಂಡವನ್ನು ಸಿಎಸ್ಕೆ ಫ್ರಾಂಚೈಸಿ ಖರೀದಿಸುತ್ತಿದ್ದಂತೆ, ಇತ್ತ ಮಹೇಂದ್ರ ಸಿಂಗ್ ಧೋನಿ ಮೈದಾನಕ್ಕೆ ಮರಳುವ ಬಗ್ಗೆ ಚರ್ಚೆಗಳು ಶುರುವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ನೀಡಿರುವ ಧೋನಿ ಸದ್ಯ ಐಪಿಎಲ್ ಮಾತ್ರ ಆಡುತ್ತಿದ್ದಾರೆ. ಇದೀಗ ಬಿಸಿಸಿಐನಿಂದ ಎನ್ಒಸಿ ಪಡೆಯುವ ಮೂಲಕ ಯಾವುದೇ ಲೀಗ್ನಲ್ಲೂ ಕೂಡ ಭಾಗವಹಿಸಬಹುದು. ಹೀಗಾಗಿಯೇ ಸಿಎಸ್ಕೆ ತಂಡದ ನಾಯಕ ಎಂಎಸ್ ಧೋನಿ ಸೌತ್ ಆಫ್ರಿಕಾ ಲೀಗ್ನಲ್ಲಿ ಆಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಸಿಎಸ್ಕೆ ಅಂದರೆ ಧೋನಿ:
ಧೋನಿ ಸಿಎಸ್ಕೆ ತಂಡದ ಆಧಾರಸ್ತಂಭ. ಅವರು ಐಪಿಎಲ್ಗೆ ನಿವೃತ್ತಿ ನೀಡಲು ಬಯಸಿದರೂ, ಸಿಎಸ್ಕೆ ಫ್ರಾಂಚೈಸಿ ಅದಕ್ಕೆ ಒಪ್ಪುತ್ತಿಲ್ಲ ಎಂಬುದೇ ಸತ್ಯ. ಹೀಗಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಹೊಸ ತಂಡದಲ್ಲೂ ಧೋನಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ.
ಏಕೆಂದರೆ ಆಟಗಾರನಾಗಿ ಹಾಗೂ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಧೋನಿ ಹಲವು ಅದ್ಭುತ ವಿಜಯಗಳನ್ನು ತಂದುಕೊಟ್ಟಿದ್ದಾರೆ. ಧೋನಿ ನಾಯಕತ್ವದಲ್ಲಿ ಸಿಎಸ್ಕೆ ತಂಡವು 2010, 2011, 2018 ಮತ್ತು 2021ರಲ್ಲಿ ಪ್ರಶಸ್ತಿ ಗೆದ್ದಿದೆ. ಇನ್ನು 2008, 2012, 2013, 2019 ಲೀಗ್‌ಗಳಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದೆ. ಮತ್ತೊಂದೆಡೆ, 2010 ಮತ್ತು 2014 ರಲ್ಲಿ ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹೀಗಾಗಿಯೇ ಧೋನಿ ಜೋಹಾನ್ಸ್ ಬರ್ಗ್ ತಂಡದೊಂದಿಗೆ ಕೈ ಜೋಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.