
ಐಪಿಎಲ್ 2026 (IPL2026) ರ 41 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (MI vs SRH) ನಡುವೆ ನಡೆಯಿತು. ಈ ಪಂದ್ಯದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ಈ ಅವೃತ್ತಿಯ ಅತ್ಯಧಿಕ ಮೊತ್ತ ದಾಖಲಿಸಿಯೂ ಹೀನಾಯವಾಗಿ ಸೋಲುಂಡಿತು. ಇದು ಈ ಆವೃತ್ತಿಯಲ್ಲಿ ಮುಂಬೈ ತಂಡದ 6ನೇ ಸೋಲಾದರೆ, ಇತ್ತ ಸನ್‌ರೈಸರ್ಸ್ 6ನೇ ಗೆಲುವು ದಾಖಲಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 244 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಈ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಇನ್ನು 8 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಜಯ ದಾಖಲಿಸಿತು. 244 ರನ್ ಗುರಿ ಬೆನ್ನಟ್ಟುವ ಮೂಲಕ ಸನ್‌ರೈಸರ್ಸ್, ಮುಂಬೈ ವಿರುದ್ಧ ಅತಿದೊಡ್ಡ ಗುರಿ ಬೆನ್ನಟ್ಟಿದ ತಂಡವೆಂಬ ದಾಖಲೆಯನ್ನು ಬರೆಯಿತು.
ಮುಂಬೈ ಇಂಡಿಯನ್ಸ್ ತಂಡವು ತನ್ನ ತವರು ಮೈದಾನವಾದ ವಾಂಖೆಡೆ ಕ್ರೀಡಾಂಗಣದಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋತಿದ್ದು ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು. ಇದೀಗ ಆ ಸೋಲುಗಳ ಸಂಖ್ಯೆ ನಾಲ್ಕಕ್ಕೆ ಏರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು ರಿಯಾನ್ ರಿಕಲ್ಟನ್ ಅವರ ದಾಖಲೆಯ ಶತಕದಿಂದಾಗಿ 243 ರನ್ ಗಳಿಸಿತು. ಇದು ಐಪಿಎಲ್‌ನಲ್ಲಿ ರಿಕಲ್ಟನ್ ಅವರ ಮೊದಲ ಶತಕ ಮತ್ತು ಮುಂಬೈ ಇಂಡಿಯನ್ಸ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕವಾಗಿತ್ತು. ಅವರಲ್ಲದೆ ಇಂದಿನ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ವಿಲ್ ಜ್ಯಾಕ್ಸ್ ಕೂಡ 46 ರನ್‌ಗಳ ಇನ್ನಿಂಗ್ಸ್ ಆಡಿದರೆ, ನಾಯಕ ಹಾರ್ದಿಕ್ ಪಾಂಡ್ಯ 31 ರನ್‌ಗಳ ಕಾಣಿಕೆ ನೀಡಿದರು.
ಈ ಮೊತ್ತವನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಸ್ಫೋಟಕ ಆರಂಭ ಪಡೆದುಕೊಂಡಿತು. ಈ ಆವೃತ್ತಿಯಲ್ಲಿ ಇಲ್ಲಿಯವರೆಗೆ ರನ್ ಬರ ಎದುರಿಸುತ್ತಿದ್ದ ಟ್ರಾವಿಸ್ ಹೆಡ್ ಕೇವಲ 20 ಎಸೆತಗಳಲ್ಲಿ ತಮ್ಮ ಮೊದಲ ಅರ್ಧಶತಕವನ್ನು ದಾಖಲಿಸಿದರು. ಇದರ ಜೊತೆಗೆ ಅಭಿಷೇಕ್ ಶರ್ಮಾ ಅವರೊಂದಿಗೆ ತಂಡವನ್ನು ಕೇವಲ ಒಂಬತ್ತು ಓವರ್‌ಗಳಲ್ಲಿ 130 ರನ್‌ಗಳ ಗಡಿ ದಾಟಿಸಿದರು. ಈ ಹಂತದಲ್ಲಿ ಮುಂಬೈ ಆರು ಎಸೆತಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಮತ್ತೆ ಪಂದ್ಯವನ್ನು ರೋಚಕಗೊಳಿಸಿತು. ಆದರೆ ಹೆನ್ರಿಕ್ ಕ್ಲಾಸೆನ್ ಆ ಭರವಸೆಯನ್ನು ಹುಸಿಗೊಳಿಸಿದರು.
MI vs SRH IPL 2026 Highlights: ಮುಂಬೈ ವಿರುದ್ಧ 6 ವಿಕೆಟ್ಗಳಿಂದ ಗೆದ್ದ ಸನ್‌ರೈಸರ್ಸ್
ಈ ಆವೃತ್ತಿಯ ಅತ್ಯಂತ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಕ್ಲಾಸೆನ್, ಕೇವಲ 22 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಕ್ಲಾಸೆನ್, ಸಲೀಲ್ ಅರೋರಾ ಅವರೊಂದಿಗೆ ತಂಡವನ್ನು ಎಂಟು ಎಸೆತಗಳ ಮೊದಲೇ ಗುರಿ ತಲುಪಿಸಿದರು. ಈ ಮೂಲಕ ವಾಂಖೆಡೆಯಲ್ಲಿ ಅತ್ಯಧಿಕ ಸ್ಕೋರ್ (249) ಮತ್ತು ಅತ್ಯಧಿಕ ರನ್ ಚೇಸ್ ದಾಖಲೆಗಳನ್ನು ನಿರ್ಮಿಸಿದರು. ಇತ್ತ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಮುಂಬೈ 200 ಕ್ಕೂ ಹೆಚ್ಚು ರನ್‌ಗಳ ಸ್ಕೋರ್ ಅನ್ನು ರಕ್ಷಿಸುವಲ್ಲಿ ವಿಫಲವಾದ ಬೇಡದ ದಾಖಲೆಯನ್ನು ಬರೆಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:40 pm, Wed, 29 April 26