MI vs SRH: ಮುಂಬೈ ಪರ ಅತಿವೇಗದ ಶತಕ ಬಾರಿಸಿದ ರಿಯಾನ್ ರಿಕಲ್ಟನ್
Ryan Rickelton's IPL 2026 Century: ಐಪಿಎಲ್ 2026 ರ 41 ನೇ ಪಂದ್ಯದಲ್ಲಿ ರಿಯಾನ್ ರಿಕಲ್ಟನ್ ಮುಂಬೈ ಇಂಡಿಯನ್ಸ್ ಪರ ಕೇವಲ 44 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿ ಹೊಸ ದಾಖಲೆ ನಿರ್ಮಿಸಿದರು. ವಾಂಖೆಡೆ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಈ ಪಂದ್ಯದಲ್ಲಿ ರಿಕಲ್ಟನ್ ಅವರ ಅಮೋಘ ಬ್ಯಾಟಿಂಗ್‌ನಿಂದ ಮುಂಬೈ 200 ರನ್‌ಗಳ ಗಡಿ ದಾಟಿತು. ಇದು ಐಪಿಎಲ್ ಇತಿಹಾಸದಲ್ಲಿ ಮುಂಬೈ ಪರ ದಾಖಲಾದ ವೇಗದ ಶತಕವಾಗಿದೆ.
ಐಪಿಎಲ್ 2026 ರ 41 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯಿತು. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಪರ ಆರಂಭಿಕ ರಿಯಾನ್ ರಿಕಲ್ಟನ್ ಸ್ಫೋಟಕ ಶತಕ ಬಾರಿಸುವ ಮೂಲಕ ತಂಡವನ್ನು 200 ರನ್‌ಗಳ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ತಮ್ಮ ಶತಕದ ಇನ್ನಿಂಗ್ಸ್ನಲ್ಲಿ 44 ಎಸೆತಗಳನ್ನು ಎದುರಿಸಿದ ರಿಕಲ್ಟನ್ ಎಂಟು ಬೌಂಡರಿ ಮತ್ತು ಏಳು ಸಿಕ್ಸರ್‌ಗಳನ್ನು ಬಾರಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಪರ ಅತಿ ವೇಗದ ಶತಕ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಿದರು.
ರಿಕಲ್ಟನ್, ವಿಲ್ ಜ್ಯಾಕ್ಸ್ ಜೊತೆಗೂಡಿ ತಂಡಕ್ಕೆ 93 ರನ್‌ಗಳ ಸ್ಫೋಟಕ ಆರಂಭ ನೀಡಿದರು. ಈ ಹಂತದಲ್ಲಿ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಜ್ಯಾಕ್ಸ್ ಔಟಾದ ನಂತರವೂ ಅಮೋಘ ಪ್ರದರ್ಶನ ಮುಂದುವರಿಸಿದ ರಿಕಲ್ಟನ್ ತಮ್ಮ ಮೊದಲ ಐಪಿಎಲ್ ಶತಕವನ್ನು ದಾಖಸಿದರು. ಕೇವಲ 44 ಎಸೆತಗಳಲ್ಲಿ ಈ ಸಾಧನೆ ಮಾಡಿದ ರಿಕಲ್ಟನ್ ಐಪಿಎಲ್‌ನಲ್ಲಿ ಮುಂಬೈ ಪರ ಅತ್ಯಂತ ವೇಗದ ಶತಕ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. 2008 ರಲ್ಲಿ ಸನತ್ ಜಯಸೂರ್ಯ 45 ಎಸೆತಗಳಲ್ಲಿ ಶತಕ ಬಾರಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ತಿಲಕ್ ವರ್ಮಾ ಕೂಡ ಇದೇ ಆವೃತ್ತಿಯಲ್ಲಿ 45 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಈ ದಾಖಲೆಯನ್ನು ಸರಿಗಟ್ಟಿದ್ದರು.

