IPL 2022: ಮುಂಬೈ ಪೊಲೀಸರ ಔದಾರ್ಯ; ಹಳೆಯ ಬಾಕಿ ವಸೂಲಿ ಮಾಡದೆ ಐಪಿಎಲ್ ಪಂದ್ಯಗಳಿಗೆ ಬಿಗಿ ಭದ್ರತೆ

| Updated By: ಪೃಥ್ವಿಶಂಕರ

Updated on: Mar 26, 2022 | 4:08 PM

IPL 2022: ಮುಂಬೈ ಪೊಲೀಸರು ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ವಿವಿಧ ಪಂದ್ಯಗಳ ಭದ್ರತೆಗೆ ವಿಧಿಸಲಾಗಿದ್ದ 14.82 ಕೋಟಿ ರೂಪಾಯಿ ಶುಲ್ಕದ ಬಾಕಿಯನ್ನು ವಸೂಲಿ ಮಾಡಲು 35 ನೋಟಿಸ್​ಗಳನ್ನು ಕಳುಹಿಸಿದ್ದಾರೆ

IPL 2022: ಮುಂಬೈ ಪೊಲೀಸರ ಔದಾರ್ಯ; ಹಳೆಯ ಬಾಕಿ ವಸೂಲಿ ಮಾಡದೆ ಐಪಿಎಲ್ ಪಂದ್ಯಗಳಿಗೆ ಬಿಗಿ ಭದ್ರತೆ
Wankhede pitch CSK vs KKR IPL 2022
Follow us on

ಐಪಿಎಲ್ (IPL 2022) 15ನೇ ಆವೃತ್ತಿ ಇಂದಿನಿಂದ ಆರಂಭವಾಗುತ್ತಿದೆ. ಆದರೆ ಈ ಪಂದ್ಯಾವಳಿ ನಡೆಯುತ್ತಿರುವ ಮುಂಬೈ ಕ್ರಿಕೆಟ್ ಸಂಸ್ಥೆ (Mumbai Cricket Association) ಮೇಲೆ ಗಂಭಿರ ಆರೋಪ ಕೇಳಿಬಂದಿದೆ. ಈ ಹಿಂದೆ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಒದಗಿಸಿದ ಭದ್ರತೆಗೆ ವಿಧಿಸಿದ್ದ ಶುಲ್ಕವನ್ನು ಪಾವತಿಸಿಲ್ಲ ಎಂಬುದು ಈ ಆರೋಪವಾಗಿದೆ. ಪದೇ ಪದೇ ಪತ್ರ ವ್ಯವಹಾರ ನಡೆಸುತ್ತಿದ್ದರೂ ಮುಂಬೈ ಪೊಲೀಸರಿಗೆ ಪಾವತಿಸಬೇಕಾದ ಬಾಕಿ ಹಣವನ್ನು ನೀಡಲು ಮುಂಬೈ ಕ್ರಿಕೆಟ್ ಸಂಸ್ಥೆ ಮನಸ್ಸು ಮಾಡಿಲ್ಲ. ಆದರೂ ಮುಂಬೈ ಪೊಲೀಸರು ಮತ್ತೆ ಮುಂಬೈ ಕ್ರಿಕೆಟ್ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ 15ನೇ ಆವೃತ್ತಿಯ ಪಂದ್ಯಗಳಿಗೆ ಭದ್ರತೆ ಒದಗಿಸುತ್ತಿದ್ದಾರೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​ಮುಂಬೈ ಪೊಲೀಸರಿಗೆ 14.82 ಕೋಟಿ ರೂಪಾಯಿ ಬಾಕಿ ಹಣವನ್ನು ಪಾವತಿಸಿಲ್ಲ. ಬಾಕಿ ಹಣ ವಸೂಲಿ ಮಾಡದೆ ಮುಂಬೈ ಪೊಲೀಸರು ಐಪಿಎಲ್ ಪಂದ್ಯಗಳಿಗೆ ಭದ್ರತೆ ನೀಡುವಲ್ಲಿ ಉದಾರತೆ ತೋರಿದ್ದಾರೆ. ಮುಂಬೈ ಪೊಲೀಸರು ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ವಿವಿಧ ಪಂದ್ಯಗಳ ಭದ್ರತೆಗೆ ವಿಧಿಸಲಾಗಿದ್ದ 14.82 ಕೋಟಿ ರೂಪಾಯಿ ಶುಲ್ಕದ ಬಾಕಿಯನ್ನು ವಸೂಲಿ ಮಾಡಲು 35 ನೋಟಿಸ್​ಗಳನ್ನು ಕಳುಹಿಸಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಅನಿಲ್ ಗಲಗಲಿ ಹೇಳಿದ್ದಾರೆ.

ಐಪಿಎಲ್, ಟಿ-20 ವಿಶ್ವಕಪ್, ಮಹಿಳಾ ವಿಶ್ವಕಪ್
ಕಳೆದ 8 ವರ್ಷಗಳಲ್ಲಿ ನಡೆದ ವಿವಿಧ ಕ್ರಿಕೆಟ್ ಪಂದ್ಯಗಳ ಬಗ್ಗೆ ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಪಂದ್ಯಗಳಲ್ಲಿ 2013ರಲ್ಲಿ ನಡೆದ ಮಹಿಳಾ ಕ್ರಿಕೆಟ್ ವಿಶ್ವಕಪ್, 2016ರ ಟಿ20 ವಿಶ್ವಕಪ್, 2016ರ ಟೆಸ್ಟ್ ಪಂದ್ಯಗಳು, 2017 ಮತ್ತು 2018ರಲ್ಲಿ ಆಡಿದ ಐಪಿಎಲ್ ಪಂದ್ಯಗಳು ಹಾಗೂ ಏಕದಿನ ಪಂದ್ಯಗಳಿಗೆ ನೀಡಿದ ಭದ್ರತೆಗೆ ನೀಡಬೇಕಾದ​ 14 ಕೋಟಿ 82 ಲಕ್ಷದ 74 ಸಾವಿರದ 177 ರೂ. ಬಾಕಿ ಹಣವನ್ನು ಭರ್ತಿ ಮಾಡಿಲ್ಲ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​ಕಳೆದ ಎಂಟು ವರ್ಷಗಳಲ್ಲಿ 2018ರ ಐಪಿಎಲ್ ಕ್ರಿಕೆಟ್ ಪಂದ್ಯಗಳಿಗೆ ಒದಗಿಸಿದ ಭದ್ರತೆಗೆ 1.40 ಕೋಟಿ ರೂ. ಶುಲ್ಕ ಭರ್ತಿ ಮಾಡಿದ್ದಾರೆ. ಇನ್ನುಳಿದ ಹಣಕ್ಕಾಗಿ ಮುಂಬೈ ಪೊಲೀಸರು ಇದುವರೆಗೆ ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಿಗೆ 35 ನೋಟಿಸ್​ಗಳನ್ನು ಕಳುಹಿಸಿದ್ದಾರೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಇದಕ್ಕೆ ಯಾವುದೇ ಪ್ರತಿಕ್ರಿಯೆ ಬರದಿರುವುದರಿಂದ ಬಾಕಿಯಿರುವ ಹಣಕ್ಕೆ ಶೇ, 9.5 ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಗೃಹ ಇಲಾಖೆ ನಿರ್ಲಕ್ಷ್ಯ
ಏಪ್ರಿಲ್ 1, 2019 ಮತ್ತು ಮಾರ್ಚ್ 31, 2020 ರ ನಡುವಿನ ಕ್ರಿಕೆಟ್ ಪಂದ್ಯಗಳಿಗೆ ಭದ್ರತಾ ಶುಲ್ಕಗಳನ್ನು ಇನ್ನೂ ವಿಧಿಸಲಾಗಿಲ್ಲ. ಏಕೆಂದರೆ ಮಹಾರಾಷ್ಟ್ರ ಸರ್ಕಾರ ಎಷ್ಟು ಶುಲ್ಕ ವಿಧಿಸಬೇಕು ಎಂಬ ಆದೇಶವನ್ನು ಇನ್ನೂ ಹೊರಡಿಸಿಲ್ಲ. ಈ ಬಗ್ಗೆ ಮುಂಬೈ ಪೊಲೀಸರು ಗೃಹ ಇಲಾಖೆಯ ಮೇಲಿನ ಮುಖ್ಯ ಕಾರ್ಯದರ್ಶಿಗೆ 9 ಬಾರಿ ಪತ್ರ ಬರೆದಿದ್ದಾರೆ. ಆದರೆ ಗೃಹ ಖಾತೆ ಇದಕ್ಕೆ ಸ್ಪಂದಿಸಿಲ್ಲ ಎಂದು ವರದಿಯಾಗಿದೆ.

ಮುಖ್ಯಮಂತ್ರಿ, ಗೃಹ ಸಚಿವರಿಗೆ ಪತ್ರ
14.82 ಕೋಟಿ ರೂ. ಬಾಕಿ ಪಾವತಿಸುವವರೆಗೆ ಯಾವುದೇ ಕ್ರಿಕೆಟ್ ಪಂದ್ಯಕ್ಕೆ ಭದ್ರತೆ ನೀಡಬಾರದು ಮತ್ತು ಬಾಕಿ ವಸೂಲಿ ಮಾಡಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅನಿಲ್ ಗಲಗಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, ಗೃಹ ಖಾತೆ ರಾಜ್ಯ ಸಚಿವ ಸತೇಜ್ ಪಾಟೀಲ್ ಮತ್ತು ಇತರ ಅಧಿಕಾರಿಗಳಿಗೆ ಪತ್ರ ಕಳುಹಿಸಿದ್ದಾರೆ.

ಇದನ್ನೂ ಓದಿ:IPL Commentators Earning: ಐಪಿಎಲ್​ನಲ್ಲಿ ಆಟಗಾರರಿಗಷ್ಟೇ ಅಲ್ಲ, ಕಾಮೆಂಟೇಟರ್​ಗಳಿಗೂ ಕೋಟಿ ಕೋಟಿ ಸಂಬಳ..!