ನಮ್ಮಲ್ಲಿ ಸೀಟ್​ ಇಲ್ಲ, ಬಾತ್​ರೂಮ್ ಬಗ್ಗೆ ಕೇಳುವಂತೆಯೇ ಇಲ್ಲ: ಪಾಕಿಸ್ತಾನ್ ಸ್ಟೇಡಿಯಂನ ಅವಸ್ಥೆ ಬಿಚ್ಚಿಟ್ಟ ಪಿಸಿಬಿ

|

Updated on: Aug 20, 2024 | 3:10 PM

Champions Trophy 2025: ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದೆ. ಅದರಂತೆ ಭಾರತ, ಪಾಕಿಸ್ತಾನ್, ಸೌತ್ ಆಫ್ರಿಕಾ, ನ್ಯೂಝಿಲೆಂಡ್, ಅಫ್ಘಾನಿಸ್ತಾನ್, ಇಂಗ್ಲೆಂಡ್, ಬಾಂಗ್ಲಾದೇಶ್ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಣಸಲಿದೆ. ಇನ್ನು 2025ರ ಚಾಂಪಿಯನ್ಸ್​ ಟ್ರೋಫಿ ಆಯೋಜನೆಯ ಹಕ್ಕು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕೈಯಲ್ಲಿದ್ದು, ಹೀಗಾಗಿ ಭಾರತ ತಂಡ ಪಾಕ್​ಗೆ ತೆರಳಲಿದೆಯಾ ಎಂಬುದೇ ಈಗ ಪ್ರಶ್ನೆ.

ನಮ್ಮಲ್ಲಿ ಸೀಟ್​ ಇಲ್ಲ, ಬಾತ್​ರೂಮ್ ಬಗ್ಗೆ ಕೇಳುವಂತೆಯೇ ಇಲ್ಲ: ಪಾಕಿಸ್ತಾನ್ ಸ್ಟೇಡಿಯಂನ ಅವಸ್ಥೆ ಬಿಚ್ಚಿಟ್ಟ ಪಿಸಿಬಿ
PCB
Follow us on

2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಪಾಕಿಸ್ತಾನದಲ್ಲಿ ನಡೆಯಲಿದೆ. ಆದರೆ ಈ ಟೂರ್ನಿಯ ಆಯೋಜನೆಗೆ ಬೇಕಾದ ವ್ಯವಸ್ಥೆ ಪಾಕಿಸ್ತಾನದಲ್ಲಿದ್ಯಾ? ಎಂದು ಕೇಳಿದರೆ ಉತ್ತರ ಇಲ್ಲ. ಇದನ್ನು ಹೇಳಿದ್ದು ಮತ್ಯಾರೂ ಅಲ್ಲ ಖುದ್ದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳನ್ನು ಆಯೋಜಿಸಲಿರುವ ಲಾಹೋರ್​ನ ಗಡಾಫಿ ಸ್ಟೇಡಿಯಂಗೆ ನಖ್ವಿ ಪರಿಶೀಲನೆಗೆ ತೆರಳಿದ್ದಾರೆ. ಈ ವೇಳೆ ಅಲ್ಲಿನ ಅವವ್ಯಸ್ಥೆಯನ್ನು ಕಣ್ಣಾರೆ ಕಂಡಿದ್ದಾರೆ. ಹೀಗಾಗಿಯೇ ಅಂತಾರಾಷ್ಟ್ರೀಯ ಟೂರ್ನಿಯನ್ನು ಆಯೋಜಿಸಲು ಬೇಕಾದ ವ್ಯವಸ್ಥೆ ಸದ್ಯದ ಮಟ್ಟಿಗೆ ಪಾಕಿಸ್ತಾನದಲ್ಲಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ.

ನಮ್ಮ ಕ್ರೀಡಾಂಗಣಗಳು ಮತ್ತು ಪ್ರಪಂಚದ ಉಳಿದ ಕ್ರೀಡಾಂಗಣಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಯಾವುದೇ ರೀತಿಯಲ್ಲೂ ನಮ್ಮದು ಅಂತಾರಾಷ್ಟ್ರೀಯ ಕ್ರೀಡಾಂಗಣವಾಗಿ ಉಳಿದಿಲ್ಲ. ಗಡಾಫಿ ಸ್ಟೇಡಿಯಂನಲ್ಲಿ ಸರಿಯಾದ ಆಸನ ವ್ಯವಸ್ಥೆಯೇ ಇಲ್ಲ. ಇನ್ನು ಬಾತ್​ರೂಮ್​ಗಳ ಬಗ್ಗೆ ಕೇಳುವಂತೆಯೇ ಇಲ್ಲ. ಒಂದು ಸ್ಟೇಡಿಯಂನಲ್ಲಿ ಇವರೆಡು ಬಹಳ ಮುಖ್ಯ. ಆದರೆ ಇದುವೇ ನಮ್ಮಲ್ಲಿಲ್ಲ ಎಂದು ಮೊಹ್ಸಿನ್ ನಖ್ವಿ ಬಹಿರಂಗಪಡಿಸಿದ್ದಾರೆ.

ಇನ್ನು ಸ್ಟೇಡಿಯಂನಲ್ಲಿ ಕೂತು ಪಂದ್ಯ ವೀಕ್ಷಿಸುತ್ತಿದ್ದಂತೆ 500 ಮೀಟರ್ ದೂರದಿಂದ ನೋಡಿದಂತಾಗುತ್ತದೆ. ಅಂದರೆ ಅಂತಾರಾಷ್ಟ್ರೀಯ ಸ್ಟೇಡಿಯಂಗೆ ಇರಬೇಕಾದ ಯಾವುದೇ ಮಾನದಂಡಗಳು ಇಲ್ಲಿಲ್ಲ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಬೇಕಿದ್ದರೆ ಮೊದಲು ನಮ್ಮ ಸ್ಟೇಡಿಯಂಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಬೇಕಾದ ಅಗತ್ಯತೆಯಿದೆ ಎಂದು ನಖ್ವಿ ಹೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಾವು ನಮ್ಮ ಕ್ರೀಡಾಂಗಣಗಳನ್ನು ವಿಶ್ವದ ಅತ್ಯುತ್ತಮ ಕ್ರೀಡಾಂಗಣಗಳಲ್ಲಿ ಒಂದನ್ನಾಗಿ ಮಾಡಬೇಕಿದೆ. ಕ್ರೀಡಾಂಗಣಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಈ ಮೂಲಕ ಸಕಲ ಸೌಲಭ್ಯಗಳೊಂದಿಗೆ ಟೂರ್ನಿಯನ್ನು ಆಯೋಜಿಸುವ ಭರವಸೆಯನ್ನು ಪಿಸಿಬಿ ಮುಖ್ಯಸ್ಥರು ವ್ಯಕ್ತಪಡಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಯಾವಾಗ ಶುರು?

ಚಾಂಪಿಯನ್ಸ್​ ಟ್ರೋಫಿ ಟೂರ್ನಿಗಾಗಿ ತಾತ್ಕಾಲಿಕ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಮುಂದಿನ ವರ್ಷ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಆದರೆ ಈ ಟೂರ್ನಿಯಲ್ಲಿ ಭಾರತ ತಂಡ ಪಾಲ್ಗೊಳ್ಳಲಿದೆಯಾ ಎಂಬುದೇ ಪ್ರಶ್ನೆ. ಏಕೆಂದರೆ ಈ ಟೂರ್ನಿ ಪಾಕಿಸ್ತಾನದಲ್ಲಿ ನಡೆಯಲಿದ್ದು, ಪಾಕ್​ನಲ್ಲಿ ಟೂರ್ನಿ ಆಯೋಜನೆಗೊಳ್ಳುವುದಾದರೆ ಭಾರತ ತಂಡವು ಹಿಂದೆ ಸರಿಯುವ ಸಾಧ್ಯತೆಯಿದೆ.

ಇದನ್ನೂ ಓದಿ: IPL 2025: LSG ತಂಡಕ್ಕೆ ಝಹೀರ್ ಖಾನ್..?

ಅಲ್ಲದೆ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿದ್ದರೆ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸುವಂತೆ ಬೇಡಿಕೆ ಮುಂದಿಡಬಹುದು. ಅದರಂತೆ ಭಾರತದ ಪಂದ್ಯಗಳು ಶ್ರೀಲಂಕಾ ಅಥವಾ ಯುಎಇ ನಲ್ಲಿ ಆಯೋಜಿಸಲು ಐಸಿಸಿಗೆ ಮನವಿ ಮಾಡುವ ಸಾಧ್ಯತೆಯಿದೆ.