IPL 2025: ಐಪಿಎಲ್ ಮೆಗಾ ಹರಾಜಿಗೆ ಹೊಸ ನಿಯಮಗಳು ರೆಡಿ..!
IPL 2025: ಐಪಿಎಲ್ 2025 ರ ಮೆಗಾ ಹರಾಜಿಗೂ ಮುನ್ನ ಆರ್ಟಿಎಂ ಆಯ್ಕೆಯನ್ನು ತೆಗೆದು ಹಾಕುವಂತೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗಳು ಮನವಿ ಸಲ್ಲಿಸಿತ್ತು. ಆದರೆ ಬಹುತೇಕ ಫ್ರಾಂಚೈಸಿಗಳು ಆರ್ಟಿಎಂ ಆಯ್ಕೆ ನೀಡಬೇಕೆಂದು ಆಗ್ರಹಿಸಿದೆ. ಹೀಗಾಗಿ ಬಿಸಿಸಿಐ ಹಳೆಯ ಮೆಗಾ ಹರಾಜಿನ ನಿಯಮದಲ್ಲಿ ಕೆಲ ಬದಲಾವಣೆ ಮಾಡಿ ಈ ಬಾರಿ ಆಕ್ಷನ್ ನಡೆಸುವ ಸಾಧ್ಯತೆಯಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ಮೆಗಾ ಹರಾಜಿಗಾಗಿ ಬಿಸಿಸಿಐ ಸಿದ್ಧತೆಯಲ್ಲಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಮೆಗಾ ಆಕ್ಷನ್ ರಿಟೆನ್ಷನ್ ನಿಯಮಗಳನ್ನು ರೂಪಿಸಿದೆ. ಈ ನಿಯಮಗಳನ್ನು ಈ ತಿಂಗಳಾಂತ್ಯದಲ್ಲಿ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದರೊಂದಿಗೆ ಐಪಿಎಲ್ 2025 ರ ಮೆಗಾ ಹರಾಜಿಗೂ ಮುನ್ನ ಕೆಲ ನಿಯಮಗಳು ಬದಲಾಗುವುದು ಖಚಿತವಾಗಿದೆ. ಏಕೆಂದರೆ ಈ ಹಿಂದೆ ಇದ್ದಂತಹ ನಿಯಮಗಳಲ್ಲಿ ಮಾರ್ಪಾಡುಗಳನ್ನು ಮಾಡುವಂತೆ ಐಪಿಎಲ್ ಫ್ರಾಂಚೈಸಿಗಳು ಬಿಸಿಸಿಐಗೆ ಮನವಿ ಸಲ್ಲಿಸಿತ್ತು.
ಈ ಮನವಿಗಳನ್ನು ಪುರಸ್ಕರಿಸಿರುವ ಬಿಸಿಸಿಐ ಇದೀಗ ಹೊಸ ನಿಯಮಗಳೊಂದಿಗೆ ಐಪಿಎಲ್ನ ಮೆಗಾ ಹರಾಜು ನಡೆಸಲು ನಿರ್ಧರಿಸಿದೆ. ಅದರಂತೆ ಮೆಗಾ ಹರಾಜಿಗೂ ಮುನ್ನ 10 ಫ್ರಾಂಚೈಸಿಗಳಿಗೆ ನಿರ್ದಿಷ್ಟ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಿದೆ.
4+2 ಸೂತ್ರ?
ಪ್ರಸ್ತುತ ಮಾಹಿತಿ ಪ್ರಕಾರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪ್ರತಿ ತಂಡಗಳಿಗೆ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡುವ ಸಾಧ್ಯತೆಯಿದೆ. ಅಂದರೆ ಇಲ್ಲಿ 4 ಆಟಗಾರರನ್ನು ನೇರವಾಗಿ ಉಳಿಸಿಕೊಳ್ಳಲು ಅವಕಾಶವಿದ್ದರೆ, ಇಬ್ಬರು ಆಟಗಾರರನ್ನು ಆರ್ಟಿಎಂ ಆಯ್ಕೆ ಮೇಲೆ ಬಿಡುಗಡೆ ಮಾಡಬಹುದು.
ಹೀಗೆ ಆರ್ಟಿಎಂ ಆಯ್ಕೆಯ ಮೂಲಕ ಬಿಡುಗಡೆ ಮಾಡಿದ ಆಟಗಾರರ ಸಂಪೂರ್ಣ ಹಕ್ಕು ಆಯಾ ಫ್ರಾಂಚೈಸಿಯ ಬಳಿಯೇ ಇರಲಿದ್ದು, ಹರಾಜಿನ ಬಳಿಕ ಆ ಆಟಗಾರರನ್ನು ಉಳಿಸಿಕೊಳ್ಳಲು ಅಥವಾ ರಿಲೀಸ್ ಮಾಡುವ ಆಯ್ಕೆಯನ್ನು ಹೊಂದಿರಲಿದ್ದಾರೆ.
ಉದಾಹರಣೆಗೆ: ಆರ್ಟಿಎಂ ಬಳಸಿದ ಇಬ್ಬರು ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಆಟಗಾರರ ಖರೀದಿಗೆ ಬೇರೊಂದು ಫ್ರಾಂಚೈಸಿ 10 ಕೋಟಿ ರೂ. ಬಿಡ್ ಮಾಡಿದೆ ಎಂದಿಟ್ಟುಕೊಳ್ಳಿ. ಆ ವೇಳೆ ಆರ್ಟಿಎಂ ಬಳಸಿದ ಫ್ರಾಂಚೈಸಿಯು ಆ ಮೊತ್ತವನ್ನು ನಾವೇ ನೀಡುತ್ತೇವೆ ಎಂದು ಆ ಆಟಗಾರನನ್ನು ತನ್ನಲ್ಲೇ ಉಳಿಸಿಕೊಳ್ಳಬಹುದು. ಒಂದು ವೇಳೆ ಆ ಮೊತ್ತ ನೀಡಲು ತಯಾರು ಇರದಿದ್ದರೆ ಮಾತ್ರ ಬಿಡುಗಡೆ ಮಾಡಬೇಕಾಗುತ್ತದೆ.
ಇದನ್ನೂ ಓದಿ: IPL 2025: LSG ತಂಡಕ್ಕೆ ಝಹೀರ್ ಖಾನ್..?
ಹೀಗೆ ಒಟ್ಟು 4+2 ಆಟಗಾರರನ್ನು ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಬಿಸಿಸಿಐ ಅವಕಾಶ ನೀಡಲಿದೆ ಎಂದು ವರದಿಯಾಗಿದ್ದು, ಅದರಂತೆ ಮುಂಬರುವ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಬಹುತೇಕ ಫ್ರಾಂಚೈಸಿಗಳು ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಮೆಗಾ ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳಲು ಬಯಸಿದರೆ ನಿರ್ದಿಷ್ಟ ಮೊತ್ತವನ್ನು ನೀಡಬೇಕಾಗುತ್ತದೆ. ಅಂದರೆ ಪ್ರತಿ ಫ್ರಾಂಚೈಸಿಗಳು ಉಳಿಸಿಕೊಳ್ಳುವ ಮೊದಲ, ಎರಡನೇ, ಮೂರನೇ ಮತ್ತು ನಾಲ್ಕನೇ ಆಟಗಾರನಿಗೆ ಇಂತಿಷ್ಟು ಮೊತ್ತವನ್ನು ನಿಗದಿಪಡಿಸಲಾಗುತ್ತದೆ. ಈ ಮೊತ್ತವನ್ನು ಒಟ್ಟು ಹರಾಜು ಮೊತ್ತದಿಂದ ಕಳೆಯಲಾಗುತ್ತದೆ.
