6 ಎಸೆತಗಳಲ್ಲೇ ಯುವರಾಜ್ ಸಿಂಗ್ ದಾಖಲೆ ಉಡೀಸ್ ಮಾಡಿದ ನಮನ್ ಧೀರ್!

ಎದುರಿಸಿದ್ದು ಕೇವಲ 6 ಎಸೆತಗಳು, ಅದರಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 1 ಫೋರ್... ಈ ಸಿಕ್ಸ್-ಫೋರ್‌ಗಳ ನೆರವಿನಿಂದ ಟೀಮ್ ಇಂಡಿಯಾದ ಯುವ ಸ್ಫೋಟಕ ದಾಂಡಿಗ ನಮನ್ ಧೀರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ 'ಸಿಕ್ಸರ್ ಸಿಂಗ್' ಖ್ಯಾತಿಯ ಯುವರಾಜ್ ಸಿಂಗ್ ಅವರ 19 ವರ್ಷಗಳ ಹಳೆಯ ಸುದೀರ್ಘ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

6 ಎಸೆತಗಳಲ್ಲೇ ಯುವರಾಜ್ ಸಿಂಗ್ ದಾಖಲೆ ಉಡೀಸ್ ಮಾಡಿದ ನಮನ್ ಧೀರ್!
Naman Dhir - Yuvraj Singh
Image Credit source: GettyImages

Updated on: Oct 18, 2026 | 11:33 AM

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಭಾರತದ ಯುವ ಆಲ್ ರೌಂಡರ್ ನಮನ್ ಧೀರ್ ಹೊಸ ಇತಿಹಾಸ ಬರೆದಿದ್ದಾರೆ. ಅದು ಸಹ ಕೇವಲ 6 ಎಸೆತಗಳಲ್ಲಿ ಎಂಬುದು ವಿಶೇಷ. ಅಂದರೆ ಟಿ20 ಕ್ರಿಕೆಟ್​ನಲ್ಲಿ ಕನಿಷ್ಠ 6 ಎಸೆತಗಳನ್ನು ಎದುರಿಸಿ ಗರಿಷ್ಠ ಸ್ಟ್ರೈಕ್ ರೇಟ್ ಕಾಯ್ದುಕೊಂಡ ಭಾರತೀಯ ಬ್ಯಾಟರ್​ ಎಂಬ ದಾಖಲೆ ಇದೀಗ ನಮನ್​ ಧೀರ್ ಪಾಲಾಗಿದೆ.

ಯುವರಾಜ್ ಸಿಂಗ್ ದಾಖಲೆ ಉಡೀಸ್!

2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಸಿಂಗ್ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ, 16 ಎಸೆತಗಳಲ್ಲಿ 58 ರನ್ ಚಚ್ಚಿದ್ದರು. ಅಂದು ಯುವಿ 362.50 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಭರ್ಜರಿ ದಾಖಲೆ ಬರೆದಿದ್ದರು. ಈ ಬೃಹತ್ ದಾಖಲೆಯನ್ನು ನಮನ್ ಧೀರ್ ಈಗ ಮುರಿದಿದ್ದಾರೆ.

Loading...

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೇವಲ 6 ಎಸೆತಗಳನ್ನು ಎದುರಿಸಿದ ಧೀರ್, 3 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 400 ರ ಸ್ಟ್ರೈಕ್ ರೇಟ್​ನಲ್ಲಿ ಅಜೇಯ 24 ರನ್ ಚಚ್ಚಿದರು. ಈ ಮೂಲಕ ಕನಿಷ್ಠ 6 ಎಸೆತಗಳನ್ನು ಎದುರಿಸಿ ಗರಿಷ್ಠ ಸ್ಟ್ರೈಕ್ ರೇಟ್ ಕಾಯ್ದುಕೊಂಡ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ನಮನ್ ತಮ್ಮದಾಗಿಸಿಕೊಂಡಿದ್ದಾರೆ.

ಭಾರತೀಯ ಗರಿಷ್ಠ ಟಿ20 ಸ್ಟ್ರೈಕ್ ರೇಟ್ (ಕನಿಷ್ಠ 6 ಎಸೆತಗಳು):

ಆಟಗಾರ ಸ್ಟ್ರೈಕ್ ರೇಟ್ ರನ್ ಎಸೆತ ಎದುರಾಳಿ ವರ್ಷ
ನಮನ್ ಧೀರ್ 400.00 24* 6 ವೆಸ್ಟ್ ಇಂಡೀಸ್ 2026
ಯುವರಾಜ್ ಸಿಂಗ್ 362.50 58 16 ಇಂಗ್ಲೆಂಡ್ 2007
ದಿನೇಶ್ ಕಾರ್ತಿಕ್ 362.50 29* 8 ಬಾಂಗ್ಲಾದೇಶ 2018

ವಿಶ್ವ ದಾಖಲೆಯಲ್ಲ!

ನಮನ್ ಧೀರ್ ಕೇವಲ 6 ಎಸೆತಗಳಲ್ಲಿ 400.00 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದರೂ ಇದು ವಿಶ್ವ ದಾಖಲೆಯಲ್ಲ ಎಂಬುದು ವಿಶೇಷ. ಅಂದರೆ ಕನಿಷ್ಠ 6 ಎಸೆತಗಳನ್ನು ಎದುರಿಸಿ ಗರಿಷ್ಠ ಸ್ಟ್ರೈಕ್ ರೇಟ್ ಪ್ರದರ್ಶಿಸಿದ ವರ್ಲ್ಡ್​ ರೆಕಾರ್ಡ್​ ನೆಪಾಳ ತಂಡದ ದೀಪೇಂದ್ರ ಸಿಂಗ್ ಐರಿ ಹೆಸರಿನಲ್ಲಿದೆ.

ನೇಪಾಳ ತಂಡದ ದೀಪೇಂದ್ರ ಸಿಂಗ್ ಐರಿ ಈ ಜಾಗತಿಕ ದಾಖಲೆಯನ್ನು 2023ರ ಸೆಪ್ಟೆಂಬರ್ 27ರಂದು ಚೀನಾದ ಹಾಂಗ್‌ಝೌನಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್ ಪಂದ್ಯಾವಳಿಯಲ್ಲಿ ಬರೆದಿದ್ದರು.

ಮಂಗೋಲಿಯಾ ವಿರುದ್ಧ ನಡೆದ ಆ ಐತಿಹಾಸಿಕ ಪಂದ್ಯದಲ್ಲಿ, 19ನೇ ಓವರ್‌ನಲ್ಲಿ ಕಣಕ್ಕಿಳಿದ ದೀಪೇಂದ್ರ ಸಿಂಗ್ ಐರಿ, ಎದುರಿಸಿದ ಮೊದಲ 6 ಎಸೆತಗಳನ್ನೂ ಸಿಕ್ಸರ್‌ಗೆ ಅಟ್ಟಿದ್ದರು. ಅಲ್ಲದೆ ಕೇವಲ 9 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಅಂತಿಮವಾಗಿ 10 ಎಸೆತಗಳಲ್ಲಿ 8 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 52 ರನ್ ಚಚ್ಚಿದರು.

ಇದನ್ನೂ ಓದಿ: 5+5+2: ಟೀಮ್ ಇಂಡಿಯಾದ ಮುಂದಿನ ಸರಣಿ ವೇಳಾಪಟ್ಟಿ ಇಲ್ಲಿದೆ

ಈ ಮೂಲಕ ದೀಪೇಂದ್ರ ಸಿಂಗ್ ಐರಿ 520.00 ರ ಅತ್ಯದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದರು. ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ 6 ಎಸೆತಗಳನ್ನು ಎದುರಿಸಿದ ಇನಿಂಗ್ಸ್‌ ಒಂದರಲ್ಲಿ ಬ್ಯಾಟರ್ ಒಬ್ಬರು ಕಾಯ್ದುಕೊಂಡ ಸಾರ್ವಕಾಲಿಕ ಗರಿಷ್ಠ ಸ್ಟ್ರೈಕ್ ರೇಟ್ ಆಗಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us