
ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಶತಕ ವಂಚಿತರಾಗಿದ್ದಾರೆ. ಸೆಂಟ್ರಲ್ ಝೋನ್ ವಿರುದ್ಧದ ಪಂದ್ಯದಲ್ಲಿ ಈಸ್ಟ್ ಝೋನ್ ಪರ ಕಣಕ್ಕಿಳಿದ ವೈಭವ್, ಕೇವಲ 81 ಎಸೆತಗಳಲ್ಲಿ 92 ರನ್ ಚಚ್ಚಿ ಔಟ್ ಆಗುವ ಮೂಲಕ ವೃತ್ತಿಜೀವನದಲ್ಲಿ 7ನೇ ಬಾರಿಗೆ ನರ್ವಸ್ ನೈಂಟೀಸ್ (90s) ಗೆ ಬಲಿಯಾಗಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ವೈಭವ್ ಸೂರ್ಯವಂಶಿ ಏಳು ಬಾರಿ 90 ಕ್ಕಿಂತ ಹೆಚ್ಚು ರನ್‌ಗಳಿಸಿ ಶತಕ ವಂಚಿತರಾಗಿದ್ದಾರೆ.
ಅಂದರೆ ಎರಡು ವರ್ಷಗಳ ಅವಧಿಯಲ್ಲಿ ವೈಭವ್ ಸೂರ್ಯವಂಶಿ ಬರೋಬ್ಬರಿ 7 ಬಾರಿ ಶತಕ ವಂಚಿತರಾಗಿದ್ದಾರೆ. ಇದರ ನಡುವೆ ಅವರು 6 ಶತಕಗಳನ್ನು ಬಾರಿಸಿದ್ದಾರೆ ಎಂಬುದು ಉಲ್ಲೇಖಾರ್ಹ.
ಸಾಮಾನ್ಯವಾಗಿ ಕ್ರಿಕೆಟ್‌ನಲ್ಲಿ ಯಾವುದೇ ಒಬ್ಬ ಬ್ಯಾಟರ್ 90 ರನ್‌ಗಳ ಗಡಿ ತಲುಪುತ್ತಿದ್ದಂತೆ, ಅವರಲ್ಲಿ ಶತಕದ ಆಸೆ ಮತ್ತು ಒತ್ತಡ ಹೆಚ್ಚಾಗುತ್ತದೆ. ಮೈಲಿಗಲ್ಲು ತಲುಪುವ ಧಾವಂತದಲ್ಲಿ ಬ್ಯಾಟರ್‌ಗಳು ತಮ್ಮ ನೈಜ ಆಟವನ್ನು ಮರೆತು, ರಕ್ಷಣಾತ್ಮಕ ಶೈಲಿಗೆ ಶರಣಾಗುತ್ತಾರೆ. ಈ ಮಾನಸಿಕ ಒತ್ತಡವನ್ನೇ ಕ್ರಿಕೆಟ್ ಜಗತ್ತಿನಲ್ಲಿ ‘ನರ್ವಸ್ ನೈಂಟೀಸ್’ ಎಂದು ಕರೆಯಲಾಗುತ್ತದೆ.
ಆದರೆ, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ವಿಷಯದಲ್ಲಿ ಈ ನಿಯಮ ಸಂಪೂರ್ಣ ಉಲ್ಟಾ ಆಗುತ್ತದೆ! ಅವರು 90ರ ರನ್‌ಗಳ ಗಡಿಯಲ್ಲಿ ಔಟ್ ಆಗಲು ಒತ್ತಡ ಅಥವಾ ಶತಕದ ಭಯ ಕಾರಣವಲ್ಲ. ಬದಲಿಗೆ ಅವರ ಅತಿಯಾದ ಆಕ್ರಮಣಕಾರಿ ಆಟವೇ ಕಾರಣ.
ವೈಭವ್ ಕ್ರೀಸ್‌ಗೆ ಬಂದ ಮೊದಲ ಎಸೆತದಿಂದಲೇ ಅತ್ಯಂತ ಅಪಾಯಕಾರಿ ಹಾಗೂ ವಿಸ್ಫೋಟಕ ಆಟಕ್ಕೆ ಕೈಹಾಕುತ್ತಾರೆ. ಅವರಿಗೆ ತಮ್ಮ ವೈಯಕ್ತಿಕ ಸ್ಕೋರ್ ಅಥವಾ ಶತಕದ ಮೈಲಿಗಲ್ಲಿನ ಬಗ್ಗೆ ಯಾವುದೇ ಕಾಳಜಿ ಇರುವುದಿಲ್ಲ. ತಾನು 0 ರನ್‌ನಲ್ಲಿದ್ದಾಗ ಹೇಗೆ ಆಡುತ್ತಾರೋ, 90 ರನ್ ತಲುಪಿದಾಗಲೂ ಅದೇ ನಿರ್ಭಯ ಮನೋಭಾವದಿಂದ ಚೆಂಡನ್ನು ಬೌಂಡರಿ ಗೆರೆ ದಾಟಿಸಲಷ್ಟೇ ಪ್ರಯತ್ನಿಸುತ್ತಾರೆ.
ಇದನ್ನೂ ಓದಿ: ವೈಭವ್ ಆರ್ಭಟಕ್ಕೆ 57 ವರ್ಷಗಳ ಹಳೆಯ ದಾಖಲೆ ಧೂಳೀಪಟ!
ಇತ್ತೀಚೆಗೆ ನಡೆದ ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲೂ ಅವರು ಮಾಡಿದ್ದು ಇದನ್ನೇ. 92 ರನ್‌ಗಳಲ್ಲಿದ್ದಾಗಲೂ ಅವರು ರನ್ ಗತಿಯನ್ನು ಕಾಯ್ದುಕೊಳ್ಳಲು ದೊಡ್ಡ ಶಾಟ್‌ಗೆ ಯತ್ನಿಸಿ ಔಟ್ ಆದರೇ ಹೊರತು, ಶತಕಕ್ಕಾಗಿ ನಿಧಾನಗತಿಯ ಆಟ ಆಡಲಿಲ್ಲ. ಈ ನಿಸ್ವಾರ್ಥ ಮತ್ತು ಸ್ವಾರ್ಥವಿಲ್ಲದ ಆಟವೇ ಅವರನ್ನು ಇತರರಿಗಿಂತ ಭಿನ್ನವಾಗಿಸಿದೆ, ಜೊತೆಗೆ ಅವರ ಶತಕಗಳು ಕೈತಪ್ಪಲು ಮುಖ್ಯ ಕಾರಣವಾಗಿದೆ.