ಟೀಂ ಇಂಡಿಯಾ ಕ್ರಿಕೆಟಿಗರ ನೂರಾರು ಕೋಟಿ ಆದಾಯಕ್ಕೆ ಕತ್ತರಿ ಹಾಕಿದ ಕೇಂದ್ರ ಸರ್ಕಾರ
India's Online Gaming Ban: ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಮಸೂದೆಯಿಂದ ಕ್ರಿಕೆಟ್ ಆಟಗಾರರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಫ್ಯಾಂಟಸಿ ಕ್ರಿಕೆಟ್ ಪ್ಲಾಟ್‌ಫಾರ್ಮ್‌ಗಳ ನಿಷೇಧದಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮುಂತಾದವರ ಕೋಟ್ಯಾಂತರ ರೂಪಾಯಿಗಳ ಆದಾಯಕ್ಕೆ ಧಕ್ಕೆ ಉಂಟಾಗಿದೆ. ಬಿಸಿಸಿಐ ಮತ್ತು ಐಪಿಎಲ್ ಕೂಡಾ ಈ ನಿಷೇಧದಿಂದ ಪ್ರಭಾವಿತವಾಗಿವೆ.

ಇತ್ತೀಚೆಗೆ ಭಾರತದಲ್ಲಿ ಅಂಗೀಕರಿಸಲಾದ ಆನ್‌ಲೈನ್ ಗೇಮಿಂಗ್ ಮಸೂದೆ (Online Gaming Ban) ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ಈ ಮಸೂದೆಯು ಫ್ಯಾಂಟಸಿ ಕ್ರಿಕೆಟ್, ರಮ್ಮಿ ಮತ್ತು ಪೋಕರ್‌ನಂತಹ ಆಟಗಳನ್ನು ಒಳಗೊಂಡಿರುವ ರಿಯಲ್ ಮನಿಯಂತಹ ಫ್ಯಾಂಟಸಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ಕಾನೂನು ಗೇಮಿಂಗ್ ಉದ್ಯಮದ ಮೇಲೆ ಮಾತ್ರವಲ್ಲದೆ ಭಾರತೀಯ ಕ್ರಿಕೆಟ್, ಆಟಗಾರರು ಮತ್ತು ಅದಕ್ಕೆ ಸಂಬಂಧಿಸಿದ ಪ್ರಾಯೋಜಕತ್ವಗಳ ಮೇಲೂ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಕಾನೂನಿನಿಂದ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli) ಮತ್ತು ಎಂಎಸ್ ಧೋನಿಯಂತಹ (MS Dhoni) ಸ್ಟಾರ್ ಆಟಗಾರರ ಕೋಟ್ಯಾಂತರ ರೂಪಾಯಿಗಳ ಆದಾಯಕ್ಕೆ ಕತ್ತರಿ ಬೀಳಲಿದೆ.
ಕ್ರಿಕೆಟಿಗರಿಗೆ ಕೋಟಿಗಟ್ಟಲೆ ನಷ್ಟ
ಆಗಸ್ಟ್ 21, 2025 ರಂದು ಭಾರತದ ಸಂಸತ್ತು ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆಯನ್ನು ಅಂಗೀಕರಿಸಿತು. ಈ ಮಸೂದೆಯಡಿಯಲ್ಲಿ, ರಿಯಲ್ ಮನಿ ಸಂಬಂಧಿತ ಆನ್‌ಲೈನ್ ಆಟಗಳನ್ನು ಆಡುವುದು ಅಥವಾ ಹೋಸ್ಟ್ ಮಾಡಿದವರಿಗೆ 3 ವರ್ಷಗಳ ಜೈಲು ಶಿಕ್ಷೆ ಮತ್ತು 1 ರಿಂದ 2 ಕೋಟಿ ರೂ.ಗಳವರೆಗೆ ದಂಡ ವಿಧಿಸಬಹುದು. ಇದರ ಹೊರತಾಗಿ, ಅಂತಹ ವೇದಿಕೆಗಳ ಪ್ರಚಾರ ಮತ್ತು ಜಾಹೀರಾತುಗಳನ್ನು ಸಹ ನಿಷೇಧಿಸಲಾಗಿದೆ. ಹೀಗಾಗಿ ಈ ಫ್ಯಾಂಟಸಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ರಾಯಭಾರಿಗಳಾಗಿದ್ದ ಟೀಂ ಇಂಡಿಯಾದ ಹಲವು ಕ್ರಿಕೆಟಿಗರಿಗೆ ಇಷ್ಟು ದಿನ ಬರುತ್ತಿದ್ದ ಆದಾಯಕ್ಕೆ ಕತ್ತರಿ ಬೀಳಲಿದೆ.
ವಾಸ್ತವವಾಗಿ ಭಾರತದ ಅನೇಕ ಕ್ರಿಕೆಟಿಗರು ಈ ಗೇಮಿಂಗ್ ವೇದಿಕೆಗಳ ಬ್ರಾಂಡ್ ರಾಯಭಾರಿಗಳಾಗಿದ್ದಾರೆ. ಇದೀಗ ಈ ಮಸೂದೆಯಿಂದಾಗಿ ಆ ಆಟಗಾರರ ಆದಾಯದ ಮೇಲೂ ಪರಿಣಾಮ ಬೀರಲಿದೆ. ರೋಹಿತ್ ಶರ್ಮಾ, ಜಸ್ಪ್ರಿತ್ ಬುಮ್ರಾ, ಕೆಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಡ್ರೀಮ್ 11 ಜೊತೆ ಕೈಜೋಡಿಸಿದ್ದರೆ, ಶುಭ್ಮನ್ ಗಿಲ್, ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ರಿಂಕು ಸಿಂಗ್ ಮತ್ತು ಸೌರವ್ ಗಂಗೂಲಿ ಮೈ 11 ಸರ್ಕಲ್ ಅನ್ನು ಪ್ರಚಾರ ಮಾಡುತ್ತಿದ್ದರು. ವಿರಾಟ್ ಕೊಹ್ಲಿ ಕೂಡ ಎಂಪಿಎಲ್ ಅನ್ನು ಪ್ರಚಾರ ಮಾಡಿದರೆ, ಎಂಎಸ್ ಧೋನಿ ವಿನ್‌ಝೋ ಫ್ಯಾಂಟಸಿ ಗೇಮಿಂಗ್ ಪ್ಲಾಟ್ಫಾರ್ಮ್ನ ರಾಯಭಾರಿಗಳಾಗಿ ಪ್ರಚಾರ ಮಾಡುತ್ತಿದ್ದರು.
ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಕೊಹ್ಲಿ ಅವರ ಒಪ್ಪಂದವು ವಾರ್ಷಿಕವಾಗಿ ಸುಮಾರು 10-12 ಕೋಟಿ ರೂ.ಗಳಾಗಿದ್ದರೆ, ರೋಹಿತ್ ಶರ್ಮಾ ಮತ್ತು ಧೋನಿಗೆ 6-7 ಕೋಟಿ ರೂ. ಸಂಭಾವನೆ ನೀಡಲಾಗುತ್ತಿತ್ತು. ಯುವ ಆಟಗಾರರಿಗೆ ಸುಮಾರು 1 ಕೋಟಿ ರೂ. ಸಂಭಾವನೆ ನೀಡಲಾಗುತ್ತಿತ್ತು. ಒಟ್ಟಾರೆಯಾಗಿ, ಈ ಮಸೂದೆಯ ನಂತರ ಭಾರತೀಯ ಕ್ರಿಕೆಟಿಗರು ಪ್ರತಿ ವರ್ಷ 150 ರಿಂ 200 ಕೋಟಿ ರೂ.ಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
BCCI: ಡ್ರೀಮ್ 11 ಜೊತೆಗಿನ 358 ಕೋಟಿ ರೂ. ಒಪ್ಪಂದಕ್ಕೆ ಅಂತ್ಯ ಹಾಡಿದ ಬಿಸಿಸಿಐ
ಬಿಸಿಸಿಐಗೂ ಹೊಡೆತ
ಕ್ರಿಕೆಟಿಗರು ಮಾತ್ರವಲ್ಲದೆ ಐಪಿಎಲ್ ಹಾಗೂ ಬಿಸಿಸಿಐ ಕೂಡ ಈ ಗೇಮಿಂಗ್ ಕಂಪನಿಗಳ ಪ್ರಾಯೋಜಕತ್ವವನ್ನು ಹೊಂದಿತ್ತು. ಇದರಡಿಯಲ್ಲಿ ಡ್ರೀಮ್ 11 ಬಿಸಿಸಿಐ ಜೊತೆಗೆ 358 ಕೋಟಿ ರೂ. ಮೌಲ್ಯದ ಪ್ರಾಯೋಜಕತ್ವ ಒಪ್ಪಂದಗಳನ್ನು ಮಾಡಿಕೊಂಡಿದ್ದರೆ, ಮೈ 11 ಸರ್ಕಲ್ ಕೂಡ ಐಪಿಎಲ್ ಜೊತೆಗೆ 625 ಕೋಟಿ ರೂ. ಮೌಲ್ಯದ ಪ್ರಾಯೋಜಕತ್ವ ಒಪ್ಪಂದವನ್ನು ಮಾಡಿಕೊಂಡಿತ್ತು. ಈ ಮಸೂದೆಯ ಅನುಷ್ಠಾನದೊಂದಿಗೆ, ಇದೀಗ ಈ ಒಪ್ಪಂದಗಳು ಮುರಿದುಬಿದ್ದಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:59 pm, Wed, 27 August 25
